ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ವಿಜಯ ನಗರ ಹೀಗೆ ಐದು ಜಿಲ್ಲೆಗಳ ಅಹಿಂದ ವಕೀಲರ ಸಮಾವೇಶ ಹಾಗೂ ಎಸ್‌ಸಿ-ಎಸ್ಟಿ ವಕೀಲರ ಸಹಕಾರ ಸಂಘದ ಉದ್ಘಾಟನಾ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆಯಂತೆ ಮುಂದೂಡಿದ್ದು, ಆದಷ್ಟು ಬೇಗನೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಸಂಘದ ಅಧ್ಯಕ್ಷ, ಹಿರಿಯ ವಕೀಲ ಬಿ.ಎಂ.ಹನುಮಂತಪ್ಪ ತಿಳಿಸಿದರು.ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆಯಲ್ಲಿ ನ.12ರಂದು ನಡೆಯಬೇಕಾಗಿದ್ದ ಐದು ಜಿಲ್ಲೆಗಳ ಅಹಿಂದ ವಕೀಲರ ಸಮಾವೇಶ, ಪರಿಶಿಷ್ಟ ಜಾತಿ-ಪಂಗಡಗಳ ವಕೀಲರ ಸಹಕಾರ ಸಂಘದ ಉದ್ಘಾಟನಾ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಲಹೆಯಂತೆ ಅನಿವಾರ್ಯ ಕಾರಣಕ್ಕೆ ಮುಂದೂಡಿದ್ದೇವೆ ಎಂದರು.
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ನೇತೃತ್ವದಲ್ಲಿ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದ ವೇಳೆ ಸಮಾವೇಶ ಮುಂದೂಡುವಂತೆ ಸೂಚನೆ ನೀಡಿದ್ದಾರೆ. ನ.15ರ ನಂತರ ಮುಂದಿನ ದಿನಾಂಕವನ್ನು ನಿಗದಿ ಪಡಿಸಲು ತಮ್ಮ ಆಪ್ತ ಕಾರ್ಯದರ್ಶಿಗೂ ಸಿಎಂ ಸೂಚನೆ ನೀಡಿದ್ದಾರೆ ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್.ಸಿ.ಮಹದೇವಪ್ಪ, ಸತೀಶ ಜಾರಕಿಹೊಳಿ, ಜಮೀರ್ ಅಹಮ್ಮದ್, ಕೆ.ಎಚ್.ಮುನಿಯಪ್ಪ, ಶಿವರಾಜ ತಂಗಡಗಿ, ಎಸ್.ಎಸ್.ಮಲ್ಲಿಕಾರ್ಜುನ್, ರುದ್ರಪ್ಪ ಲಮಾಣಿ ಅನೇಕ ನಾಯಕರು ಸಮಾವೇಶ, ಸಂಘದ ಉದ್ಘಾಟನೆಗೆ ಆಗಮಿಸಬೇಕಾಗಿತ್ತು ಎಂದು ತಿಳಿಸಿದರು.
ಅಹಿಂದ ವಕೀಲರ ಸಮಾವೇಶದ ಹಿನ್ನೆಲೆಯಲ್ಲಿ ದಾವಣಗೆರೆ, ಚಿತ್ರದುರ್ಗ, ವಿಜಯ ನಗರ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ತಾವೆಲ್ಲರೂ ಕಳೆದ ಕೆಲ ದಿನಗಳಿಂದ ಪ್ರವಾಸ ಮಾಡಿ, ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಹಿಂದ ವಕೀಲರಿಗೆ ಮನವಿ ಮಾಡಿದ್ದೆವು. ಕಾರಣಾಂತರದಿಂದ ಸಮಾವೇಶ ಮುಂದೂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ರ ಜೊತೆ ಚರ್ಚಿಸಿ, ಸಿಎಂ ಮುಂದಿನ ದಿನಾಂಕ ತಿಳಿಸುತ್ತೇವೆ ಎಂದು ವಿವರಿಸಿದರು.ಸಮಾವೇಶಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳನ್ನೂ ಭರದಿಂದ ಮಾಡಿಕೊಂಡಿದ್ದೆವು. ಐದೂ ಜಿಲ್ಲೆಗಳಲ್ಲಿ ಪ್ರವಾಸ ಸಹ ಮಾಡಿದ್ದೆವು. ನ.15ರ ನಂತರ ಮುಂದಿನ ದಿನಾಂಕವು ನಿಗದಿಯಾಗಲಿದೆ. ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ತಮಗೆ ಯಾವುದೇ ಮಾಹಿತಿ ಇಲ್ಲ. ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸಮಾವೇಶ ಹಾಗೂ ಸಂಘವನ್ನು ಉದ್ಘಾಟಿಸಬೇಕೆಂಬು ಬಯಸಿದ್ದೇವೆ. ಸಿದ್ದರಾಮಯ್ಯನವರೇ ಸಮಾವೇಶವನ್ನು ಉದ್ಘಾಟಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪರಿಶಿಷ್ಟ ಜಾತಿ-ಪಂಗಡಗಳ ವಕೀಲರ ಸಹಕಾರ ಸಂಘವನ್ನು ಸ್ಥಾಪಿಸುವ ಮೂಲಕ ಪರಿಶಿಷ್ಟ ವಕೀಲರಿಗೆ ನ್ಯಾಯಾಲಯಗಳಲ್ಲಿ ಕನ್ನಡದಿಂದ ಇಂಗ್ಲಿಷ್‌ಗೆ ತರ್ಜುಮೆ ಮಾಡುವುದು, ಭಾಷಾ ಕೌಶಲ್ಯ ತರಬೇತಿ, ನ್ಯಾಯ ಮಂಡನೆ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಮಾರ್ಗದರ್ಶನ, ತರಬೇತಿ ಕೊಡಿಸುವ ಉದ್ದೇಶವಿದೆ. ನ್ಯಾಯಾಧೀಶರ ಹುದ್ದೆಗಳ ನೇಮಕಾತಿಯಲ್ಲಿ ನಿಗದಿತ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ ಅಭ್ಯರ್ಥಿಗಳು ಯಶಸ್ಸು ಸಾಧಿಸುತ್ತಿಲ್ಲ. ಆ ವಿಚಾರವೂ ತಮ್ಮೆಲ್ಲರ ಗಮನದಲ್ಲೂ ಇದೆ ಎಂದು ಹೇಳಿದರು.ಎಸ್ಸಿ-ಎಸ್ಟಿ ವಕೀಲರ ಸಹಕಾರ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರಾದ ಎನ್.ಎಂ.ಆಂಜನೇಯ ಗುರೂಜಿ, ವಿ.ಗೋಪಾಲ, ಎಸ್.ರಾಜಪ್ಪ, ಎಲ್.ಶಾಮ್, ಮಹೇಶ ನಾಯ್ಕ, ಕಂಚಿಕೇರಿ ಮಂಜಪ್ಪ ಇತರರು ಇದ್ದರು.