75 ನೇ ಗಣರಾಜ್ಯೋತ್ಸವ ಕಾರ್ಯಕ್ರಮ
ದೇಶದಲ್ಲಿ ದೇಶಪ್ರೇಮಕ್ಕಿಂತ ಜಾತಿಪ್ರೇಮ ಹೆಚ್ಚಾಗಿದ್ದು, ಇದನ್ನು ಬಿಟ್ಟು ನಾವೆಲ್ಲರೂ ಭಾರತೀಯರು ಎಂಬುದನ್ನು ಮನಗಾಣಬೇಕು ಎಂದು ಶಾಸಕ ಎ.ಮಂಜು ತಿಳಿಸಿದರು.
ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನ ಪ್ರಪಂಚದಲ್ಲಿಯೇ ಮಾದರಿ ಸಂವಿಧಾನವಾಗಿದ್ದು, ಎಲ್ಲಾ ಭಾಷೆ, ಧರ್ಮವನ್ನು ಒಳಗೊಂಡ ಭಾರತದಲ್ಲಿ ನಾವೆಲ್ಲರೂ ಒಟ್ಟಾಗಿ ಹೋಗಬೇಕು. ಸಮಾನತೆಯಿಂದ ಇರಬೇಕು. ನಾವೆಲ್ಲ ಭಾರತೀಯರು ಎಂಬ ಉದ್ದೇಶದಿಂದ ಇರಬೇಕೆಂದು ಸಂವಿಧಾನ ಬರೆದಿದ್ದು, ಅದನ್ನು ಪಾಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಶಾಸಕಾಂಗ, ಕಾರ್ಯಂಗ ನ್ಯಾಯಾಂಗ, ಪತ್ರಿಕಾಂಗ ಎಲ್ಲವನ್ನು ಒಳಗೊಂಡಂತೆ ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಿದ್ದೆವಾ ಎಂಬುವ ಕುರಿತು ಯೋಚಿಸಬೇಕು. ಹಿಂದೆ ದೇಶದ ಬಗ್ಗೆ ಹೆಮ್ಮೆಯಿತ್ತು. ಇಂದು ಶಾಸಕಾಂಗ, ಕಾರ್ಯಂಗ ನ್ಯಾಯಾಂಗ ಎಲ್ಲದರಲ್ಲೂ ಜಾತೀಯತೆ ಹೆಚ್ಚಾಗಿದೆ. ಮತ್ತೆ ಒಳ್ಳೆಯ ವಾತಾವರಣ ಮರುಕಳಿಸಬೇಕಾದರೆ ನಾವೆಲ್ಲ ಭಾರತೀಯರು ಎಂಬುದನ್ನು ಅರಿತು ಒಂದಾಗಿ ದೇಶವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದು ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.