ಯಲ್ಲಾಪುರ: ಎನ್ನೆಸ್ಸೆಸ್ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಇಡಗುಂದಿ ಸೇ.ಸ.ಸಂಘದ ಅಧ್ಯಕ್ಷ ನಾರಾಯಣ ಸೀತಾರಾಮ ಭಟ್ಟ ಕೊಡ್ಲಗದ್ದೆ ಹೇಳಿದರು.
ಮುಖ್ಯಅತಿಥಿಗಳಾಗಿದ್ದ ಜಿಲ್ಲಾ ಪತ್ರಿಕಾ ಮಂಡಳಿ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಮಾತನಾಡಿ, ಮಾನವೀಯ ಮೌಲ್ಯ, ನೈತಿಕತೆ ಒಂದು ಕಾಲದಲ್ಲಿ ನಮ್ಮಲ್ಲಿ ಸಹಜವಾಗಿಯೇ ಇತ್ತು. ಆದರೆ ಇಂದಿನ ದಿನಗಳಲ್ಲಿ ನಾವದನ್ನು ಕಳೆದುಕೊಂಡಿದ್ದೇವೆ. ನಾವು ಪಡೆಯುವ ಶಿಕ್ಷಣದಿಂದ ಬದುಕುವಂತಾಗಬೇಕು. ಕೇವಲ ಪದವಿ, ಪ್ರಮಾಣಪತ್ರಗಳಿಂದ ನಾವು ನಮ್ಮನ್ನು ಗುರುತಿಸಿಕೊಳ್ಳಲಾಗದು. ನಾವು ಅಳವಡಿಸಿಕೊಂಡ ಸನ್ನಡತೆ, ಸಂಸ್ಕಾರ, ಮೌಲ್ಯಗಳು, ನೈತಿಕತೆ ನಮ್ಮನ್ನು ಗುರುತಿಸುತ್ತವೆ. ನಮ್ಮನ್ನು ಎತ್ತರಿಸುತ್ತದೆ ಎಂದರು.
ರಾ.ಸೇ.ಯೋಜನೆಯ ಶಿಬಿರ ಇಂತಹ ಜೀವನ ಮೌಲ್ಯ, ಬದುಕುವ ರೀತಿ, ಜವಾಬ್ದಾರಿಗಳನ್ನು ಪರಿಚಯಿಸುತ್ತದೆ. ಶಿಕ್ಷಣದಲ್ಲಿ ಈ ಯೋಜನೆ ಅಳವಡಿಕೆಯಿಂದ ಒಂದಷ್ಟು ಪರಿವರ್ತನೆ ಸಾಧ್ಯವಾಗಿದೆ ಎಂಬುದನ್ನು ಮನಗಾಣಲಾಗಿದೆ ಎಂದರು.ಪ್ರಾಚಾರ್ಯ ಡಾ.ಆರ್.ಡಿ. ಜನಾರ್ದನ ಮಾತನಾಡಿ, ಇಲ್ಲಿ ಶಿಬಿರಾರ್ಥಿಗಳಿಗೆ ಬದುಕಿನ ಪಾಠ ಸಿಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಹಕಾರಿ ಇಡಗುಂದಿ ಸೇ.ಸ. ಸಂಘದ ನಿರ್ದೇಶಕ ಪ್ರೇಮಾನಂದ ನಾಯ್ಕ ಮಾತನಾಡಿ, ನಮ್ಮನ್ನು ನಾವು ಬೆಳೆಸಿಕೊಳ್ಳಲು, ಗುರುತಿಸಿಕೊಳ್ಳಲು ಇಂತಹ ಶಿಬಿರ ಒಂದು ಸೂಕ್ತ ವೇದಿಕೆ. ಶಿಬಿರದ ಯಶಸ್ಸಿಗೆ ನಮ್ಮೆಲ್ಲರ ಸಹಕಾರ ಇದೆ ಎಂದರು.ಚಿನ್ನಾಪುರ ಶಾಲಾ ಎಸ್.ಡಿಎಂಸಿ ಅಧ್ಯಕ್ಷ ಶೇಖರ ನಾಯ್ಕ, ಹಿರಿಯ ಯು.ಕೆ.ಭಟ್ಟ, ಉಪನ್ಯಾಸಕ ಶರತ್‌ಕುಮಾರ್ ಉಪಸ್ಥಿತರಿದ್ದರು.
ರಾ.ಸೇ.ಯೋಜನೆಯ ಘಟಕದ ಯೋಜನಾಧಿಕಾರಿ ರವಿ ಭಟ್ಟ ಸ್ವಾಗತಿಸಿದರು. ಘಟಕ-2 ರ ಯೋಜನಾಧಿಕಾರಿ ರವಿ ಶೇಷಗಿರಿ ನಿರ್ವಹಿಸಿದರು. ಸಹ ಶಿಬಿರಾಧಿಕಾರಿ ನಿತೇಶ ಮೋರೆ ವಂದಿಸಿದರು.ಇಡಗುಂದಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ನಡೆಯಿತು.