ಅಣುವಿದ್ಯುತ್ ಸ್ಥಾವರ ಅಪಾಯಕಾರಿ, ಬೇಡವೇ ಬೇಡ

KannadaprabhaNewsNetwork |  
Published : Dec 21, 2024, 01:16 AM IST
20ಕೆಪಿಎಲ್22 ಕೊಪ್ಪಳ ತಾಲೂಕಿನ ಅರಸಿನಕೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಅವರು ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆ ಬಯಲು ಪ್ರದೇಶ ಹಾಗೂ ಜನವಸತಿ ಇರುವ ಪ್ರದೇಶವೇ ಆಗಿದೆ. ಇಲ್ಲಿ ಸ್ಥಾವರ ಸ್ಥಾಪಿಸುವುದು ಅವೈಜ್ಞಾನಿಕವಾಗಿದೆ ಎಂದು ಶಾಸಕ ಜನಾರ್ದನರೆಡ್ಡಿ ಹೇಳಿದರು.

ಕೊಪ್ಪಳ: ಅಣು ವಿದ್ಯುತ್ ಸ್ಥಾವರ ಅತ್ಯಂತ ಅಪಾಯಕಾರಿಯಾಗಿದ್ದು, ಅದನ್ನು ಜನವಸತಿ ಪ್ರದೇಶದಲ್ಲಿ ತರುವುದು ಸರಿಯಲ್ಲ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದ್ದಾರೆ.

ತಾಲೂಕಿನ ಅರಸಿನಕೇರಿ ಗ್ರಾಮದಲ್ಲಿ ಹತ್ತಾರು ಗ್ರಾಮಸ್ಥರು ಸೇರಿ ನಡೆಸಿದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ತಾಲೂಕಿನಲ್ಲಿ ಅಣುಸ್ಥಾವರ ಸ್ಥಾಪನೆಯಾಗುವುದು ಗೊತ್ತಾಗಿ ಅಚ್ಚರಿಯಾಯಿತು. ಅದು ಅತ್ಯಂತ ಅಪಾಯಕಾರಿಯಾಗಿದ್ದರೂ ಜನವಸತಿ ಪ್ರದೇಶದಲ್ಲಿ ಯಾಕೆ ಸ್ಥಾಪಿಸಲು ಮುಂದಾಗಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ. ಇದನ್ನು ಈಗಾಗಲೇ ನಾನು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇದಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ಕೇಂದ್ರ ಸರ್ಕಾರಕ್ಕೂ ಮನವರಿಕೆ ಮಾಡಿಕೊಡುವ ವಿಶ್ವಾಸ ವ್ಯಕ್ತಪಡಿಸಿದರು.

ಕಾರವಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಅರಣ್ಯ ಪ್ರದೇಶವಿದೆ. ಹೀಗಾಗಿ, ಮಧ್ಯದಲ್ಲಿ ಮಾಡಿದ್ದಾರೆ. ಆದರೆ, ಇಲ್ಲಿ ಬಯಲು ಪ್ರದೇಶ ಹಾಗೂ ಜನವಸತಿ ಇರುವ ಪ್ರದೇಶವೇ ಆಗಿದೆ. ಇಲ್ಲಿ ಸ್ಥಾಪಿಸುವುದು ಅವೈಜ್ಞಾನಿಕವಾಗಿದೆ. ಅದರಿಂದ ಹೊರಸೂಸುವ ವಿಕಿರಣಗಳು ಅತ್ಯಂತ ಅಪಾಯಕಾರಿ ಆಗಿರುತ್ತವೆ ಎಂದರು.

ಕೆಲವೊಂದು ಗ್ರಾಮಗಳನ್ನು ಸ್ಥಳಾಂತರ ಮಾಡಬಹುದು. ಆದರೆ, ಸುತ್ತಮುತ್ತಲ ಪ್ರದೇಶದಲ್ಲಿರುವ ಗ್ರಾಮಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ನಾವು ಇದಕ್ಕೆ ಅವಕಾಶ ನೀಡದಂತೆ ಹೋರಾಟ ಮಾಡೋಣ ಎಂದರು.

ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಮಾತನಾಡಿ, ನಾವು ಈ ಹೋರಾಟವನ್ನು ಇಷ್ಟಕ್ಕೆ ನಿಲ್ಲಿಸುವುದು ಬೇಡ. ನಾವು ಹೋರಾಟ ಮಾಡಿದ್ದರಿಂದ ಸರ್ವೇ ಮಾಡುವುದನ್ನು ಮೇಲ್ನೋಟಕ್ಕೆ ಕೈಬಿಟ್ಟಿದ್ದರೂ ಇದರ ಆತಂಕ ಇದ್ದೇ ಇದೆ. ಹೀಗಾಗಿ, ಇದು ತೊಲಗುವ ವರೆಗೂ ಹೋರಾಟ ಮಾಡೋಣ ಎಂದು ಹೇಳಿದರು.

ನಮ್ಮ ಈ ಹೋರಾಟಕ್ಕೆ ಗವಿಸಿದ್ಧೇಶ್ವರ ಮಹಾಸ್ವಾಮಿಗಳನ್ನೂ ಭೇಟಿಯಾಗಿ ಬೆಂಬಲ ಕೇಳೋಣ. ಈಗಾಗಲೇ ನಾವು ಮಾಡಿದ ಹೋರಾಟದ ಪರಿಣಾಮ ಜಿಲ್ಲಾಡಳಿತ ಸರ್ವೇಯಿಂದ ಹಿಂದೆ ಸರಿದಿದೆ. ಬೇರೆಡೆಗೆ ಸರ್ವೇ ಮಾಡುತ್ತಿದೆ ಎಂದರು.

ಮನೋಹರಗೌಡ್ರ, ಡಿ.ಕೆ. ಆಗೋಲಿ, ಮಹಾಂತೇಶ ಸಂಗಟಿ, ಮಂಜುನಾಥ ಗೋಂದಿ, ಶರಣಯ್ಯ ಹಿರೇಮಠ, ಸೋಮಶೇಖರ ನಾಯಕ ಸೇರಿದಂತೆ ಅನೇಕರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ