)
ಗಣೇಶ್ ತಮ್ಮಡಿಹಳ್ಳಿ
ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ 29 ವರ್ಷದ ಯುವಕನನ್ನು ಬಲಿ ಪಡೆದಿರುವ ಕೆಎಫ್‌ಡಿ ಜನರಲ್ಲಿ ಆತಂಕ ಮೂಡಿಸುತ್ತಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿದೆ. ಈವರೆಗೆ 47 ಮಂದಿಗೆ ಕೆಎಫ್‌ಡಿ ಸೋಂಕು ಬಾದಿಸಿದ್ದು, 2019ರಲ್ಲಿ ಅರಳಗೋಡಿನಲ್ಲಿ ಮರಣ ಮೃದಂಗ ಬಾರಿಸಿದ್ದ ಕೆಎಫ್‌ಡಿ ಮತ್ತೆ ಜಿಲ್ಲೆಯಲ್ಲಿ ಮರುಕಳಿಸಲಿದೆಯೇ ಎಂಬ ಆತಂಕವನ್ನು ಹೆಚ್ಚಿಸಿದೆ.
ಕಳೆದ 15 ವರ್ಷಗಳ ಅಂಕಿ ಅಂಶಗಳ ಪ್ರಕಾರ ಮಳೆ ಕಡಿಮೆ ಇರುವ ವರ್ಷಗಳಲ್ಲೇ ಕೆಎಫ್ಡಿ ಅಬ್ಬರ ಹೆಚ್ಚಿದೆ. 2019ರಲ್ಲಿ ಸಾಗರ ತಾಲೂಕಿನ ಅರಳಗೋಡುನಲ್ಲಿ ಕೆಎಫ್‌ಡಿ ಸ್ಫೋಟಗೊಂಡಿತ್ತು. 2018ರ ನವೆಂಬರ್‌ನಿಂದ 2019ರ ಜೂನ್‌ವರೆಗೆ ಅರಳಗೋಡಿನಲ್ಲಿ ಭಾರೀ ಪ್ರಕರಣಗಳು ಕಂಡಿಬಂದಿದ್ದವು. ಅದೇ ವರ್ಷ ಬರೊಬ್ಬರಿ 15 ಮಂದಿ ಈ ಕಾಯಿಲೆಗೆ ಬಲಿಯಾಗಿದ್ದರು.ಈ ವರ್ಷ 47 ಪ್ರಕರಣ ಪತ್ತೆ: ಜಿಲ್ಲೆಯಲ್ಲಿ ಕಳೆದ ವರ್ಷ 82 ಕೆಎಫ್‌ಡಿ ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ಜನವರಿಯಿಂದ ಮಾ.1ರವರೆಗೆ 47 ಪ್ರಕರಣಗಳು ವರದಿಯಾಗಿವೆ. ಎರಡು ತಿಂಗಳ ಅವಧಿಯಲ್ಲೇ ಇಷ್ಟೊಂದು ಪ್ರಕರಣಗಳು ಕಾಣಿಸಿಕೊಂಡಿರುವುದು ಕಾಡಂಚಿನ ಗ್ರಾಮದ ಜನರಲ್ಲಿ ಕೆಎಫ್‌ಡಿ ಆತಂಕ ಮನೆ ಮಾಡಿದೆ. 47 ಪ್ರಕರಣಗಳ ಪೈಕಿ ತೀರ್ಥಹಳ್ಳಿಯಲ್ಲಿ 17, ಹೊಸನಗರದಲ್ಲಿ 21 ಹಾಗೂ ಸಾಗರದಲ್ಲಿ 3. ಶಿಕಾರಿಪುರದಲ್ಲಿ 6 ಪ್ರಕರಣಗಳು ದಾಖಲಾಗಿವೆ.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ನವೆಂಬರ್‌ನಿಂದ ಮಳೆಗಾಲ ಆರಂಭ ಆಗುವವರೆಗೂ ಮಂಗನ ಕಾಯಿಲೆ ಪ್ರಕರಣ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಇದರ ಆರ್ಭಟ ಹೆಚ್ಚು. ಆದರೆ, ಕಳೆದೆರಡು ವರ್ಷದಿಂದ ಜನವರಿಯಲ್ಲಿ ಪ್ರಕರಣ ಕಾಣಿಸಿಕೊಳ್ಳುತ್ತಿದೆ. ಇದರ ನಡುವೆ ಈ ಬಾರಿ ನವಂಬರ್ ಆರಂಭದಲ್ಲಿಯೇ ಜಿಲ್ಲೆಯಲ್ಲಿ ಪತ್ತೆಯಾಗಿತ್ತು.
ಕೆಎಫ್ಡಿ ಬಗ್ಗೆ ತಡವಾಗಿಯಾದರೂ ಆರೋಗ್ಯ ಇಲಾಖೆ ಗಂಭೀರವಾಗಿ ಗಮನಿಸುತ್ತಿದೆ. ಇತ್ತೀಚೆಗೆ 29 ವರ್ಷದ ಯುವಕ ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಕಾಯಿಲೆ ತೀವ್ರತೆ ಹೆಚ್ಚಿದ್ದರೂ ಕಾಯಿಲೆಗೆ ನಿರ್ದಿಷ್ಟ ಔಷಧಿ ಇಲ್ಲದಿರುವುದು ಗ್ರಾಮೀಣ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.
ಅಡಕೆ ತೋಟದ ಕೆಲಸಕ್ಕಾಗಿ ಶಿವಮೊಗ್ಗ ಅಷ್ಟೇ ಅಲ್ಲದೇ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಭಾಗದ ಕೂಲಿ ಕಾರ್ಮಿಕರು ಸಹ ಆಗಮಿಸುತ್ತಿದ್ದು, ಅವರಲ್ಲಿಯೂ ಸೋಂಕು ಕಾಣಿಸಿಕೊಂಡಿರುವುದು ಆಂತಕವನ್ನು ಹೆಚ್ಚಿಸಿದೆ.
2019ರಲ್ಲಿ ಜಿಲ್ಲೆಯಲ್ಲಿ 341 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 15 ಮಂದಿ ಕೆಎಫ್ಡಿಯಿಂದ ಸಾವನ್ನಪ್ಪಿದ್ದು ದೃಢಪಟ್ಟಿತ್ತು. 2020ರಲ್ಲಿ 184 ಪ್ರಕರಣಗಳು ದಾಖಲಾಗಿದ್ದು, 4 ಮಂದಿ ಸಾವನ್ನಪ್ಪಿದ್ದರು. 2021ರಲ್ಲಿ 13 ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಕೆಎಫ್ಡಿಗೆ ಬಲಿಯಾಗಿದ್ದರು. 2022ರಲ್ಲಿ 12 ಪ್ರಕರಣ, 2023ರಲ್ಲಿ 15 ಪ್ರಕರಣ ದಾಖಲಾಗಿದ್ದವು. 2024ರಲ್ಲಿ 63 ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಸಾವನ್ನಪ್ಪಿದ್ದರು. 2025ರಲ್ಲಿ 82 ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಸಾವನಪ್ಪಿದ್ದರು. 2026ರಲ್ಲಿ ಮಾರ್ಚ್ 1ರವರೆಗೆ 47 ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.