ನ್ಯಾನೋ ಗೊಬ್ಬರ ಬಳಕೆಯಿಂದ ಪೋಷಕಾಂಶದ ಸದ್ಬಳಕೆ: ಕರಿಯಲ್ಲಪ್ಪ ಕೊರಚರ

KannadaprabhaNewsNetwork |  
Published : Jul 06, 2025, 11:48 PM IST
ರೈತರ ಜಮೀನಿನಲ್ಲಿ ಡ್ರೋನ್​ ಮೂಲಕ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಸಿಂಪರಣೆ ಪ್ರಾತ್ಯಕ್ಷಿಕೆ ಜರುಗಿತು. | Kannada Prabha

ಸಾರಾಂಶ

ನ್ಯಾನೋ ಗೊಬ್ಬರಗಳ ನಿಖರ ಮತ್ತು ಉದ್ದೇಶಿತ ಬಳಕೆ ಪರಿಸರಕ್ಕೆ ಹಾನಿಯಾಗದಂತೆ ಬೆಳೆಗಳ ಸಾರಜನಕದ ಅಗತ್ಯವನ್ನು ಪೂರೈಸುತ್ತದೆ. ನ್ಯಾನೋ ಗೊಬ್ಬರಗಳನ್ನು ಎಲೆಗಳ ಮೇಲೆ ಸಿಂಪಡಿಸುವುದರಿಂದ ಪೋಷಕಾಂಶದ ಸದ್ಬಳಕೆಯಾಗುತ್ತದೆ.

ಬ್ಯಾಡಗಿ: ಸಹಾಯಕ ನಿರ್ದೇಶಕರ ಕಚೇರಿ ಕೃಷಿ ಇಲಾಖೆ ಹಾಗೂ ಇಫ್ಕೊ ಸಂಸ್ಥೆಯ ಸಹಭಾಗಿತ್ವದಲ್ಲಿ ರೈತರ ಜಮೀನಿನಲ್ಲಿ ಡ್ರೋನ್​ ಮೂಲಕ ನ್ಯಾನೋ ಯೂರಿಯಾ ಹಾಗೂ ನ್ಯಾನೊ ಡಿಎಪಿ ಸಿಂಪಡಣೆ ಪ್ರಾತ್ಯಕ್ಷಿಕೆ ಜರುಗಿತು.

ಸಮೀಪದ ಕೆಲ ಕೃಷಿ ಭೂಮಿಗಳಲ್ಲಿ ಡ್ರೋನ್ ಬಳಕೆ ಮಾಡಲಾಗಿದ್ದು, ಡ್ರೋನ್​​ಗೆ ಸಂಪರ್ಕಿಸಲ್ಪಟ್ಟ 10 ಲೀಟರ್ ಕ್ಯಾನ್‌ನಲ್ಲಿ 9 ಲೀಟರ್ ನೀರು ಮತ್ತು ಅರ್ಧ ಲೀಟರ್ ನ್ಯಾನೋ ಯೂರಿಯಾ ಮತ್ತು ಅರ್ಧ ಲೀಟರ್ ನ್ಯಾನೋ ಡಿಎಪಿ ಗೊಬ್ಬರ ಹಾಕಿ ಗೋವಿನಜೋಳದ ಬೆಳೆಗೆ ಸಿಂಪಡಿಸಲಾಯಿತು.

ಈ ಸಂದರ್ಭದಲ್ಲಿ ಉಪ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಕೊರಚರ ಮಾತನಾಡಿ, ನ್ಯಾನೋ ಗೊಬ್ಬರಗಳ ನಿಖರ ಮತ್ತು ಉದ್ದೇಶಿತ ಬಳಕೆ ಪರಿಸರಕ್ಕೆ ಹಾನಿಯಾಗದಂತೆ ಬೆಳೆಗಳ ಸಾರಜನಕದ ಅಗತ್ಯವನ್ನು ಪೂರೈಸುತ್ತದೆ. ನ್ಯಾನೋ ಗೊಬ್ಬರಗಳನ್ನು ಎಲೆಗಳ ಮೇಲೆ ಸಿಂಪಡಿಸುವುದರಿಂದ ಪೋಷಕಾಂಶದ ಸದ್ಬಳಕೆಯಾಗುತ್ತದೆ. ಪೋಷಕಾಂಶಗಳ ಪೋಲಾಗುವಿಕೆ ಕಡಿಮೆಯಾಗುತ್ತದೆ ಹಾಗೂ ಸಾಮಾನ್ಯ ರಸಗೊಬ್ಬರ ಬಳಕೆಯಿಂದಾಗುವ ಮಣ್ಣು ಮತ್ತು ನೀರಿನ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ಕಡಿಮೆ ಮಾಡಬಹುದು ಎಂದರು.

ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ, ನ್ಯಾನೋ ಯೂರಿಯಾ ಶೇ. 4ರಷ್ಟು ಸಾರಜನಕವನ್ನು ಹೊಂದಿದ್ದು ಹಾಗೂ ನ್ಯಾನೋ ಡಿಎಪಿ ಶೇ. 8ರಷ್ಟು ಸಾರಜನಕ ಮತ್ತು ಶೇ. 16ರಷ್ಟು ರಂಜಕವನ್ನು ಹೊಂದಿದ್ದು ಬೆಳೆ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಪೋಷಕಾಂಶಗಳನ್ನು ಒದಗಿಸಿ ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಹಳಷ್ಟು ರೈತರು ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಹರಳು ಯೂರಿಯಾ ಗೊಬ್ಬರವನ್ನು ಕೈಯಿಂದ ಹಾಕುತ್ತಾರೆ. ಕೈಯಿಂದ ಗೊಬ್ಬರ ಹಾಕುವುದರಿಂದ ಶೇ. 30ರಷ್ಟು ಮಾತ್ರ ಬೆಳೆಗಳಿಗೆ ಬಳಕೆಯಾಗುತ್ತದೆ. ಆದರೆ ನ್ಯಾನೋ ಯೂರಿಯಾ/ ಡಿಎಪಿ ಡ್ರೋನ್​ ಮೂಲಕ ಅಥವಾ ಸ್ಪ್ರೇಯರ್ ಮೂಲಕ ಸಿಂಪಡಿಸಿದರೆ ಶೇ. 80ರಷ್ಟು ಬೆಳೆಗಳಿಗೆ ತಲುಪುತ್ತದೆ. ಅಲ್ಲದೇ ಇದು ಕಡಿಮೆ ಅವಧಿಯಲ್ಲಿ ಕಡಿಮೆ ಖರ್ಚು ಮತ್ತು ಕಡಿಮೆ ಶ್ರಮದ ಮೂಲಕ ಹೆಚ್ಚು ಬೆಳೆಗಳಿಗೆ ತಲುಪುತ್ತದೆ ಎಂದರು.

ಇಫ್ಕೊ ಸಂಸ್ಥೆಯ ಪ್ರಶಾಂತ ಮಾತನಾಡಿ, ಸುಮಾರು 6ರಿಂದ 8 ನಿಮಿಷದ ಅವಧಿಯಲ್ಲಿ ಡ್ರೋನ್​ ಒಂದು ಎಕರೆ ಮೆಕ್ಕೆಜೋಳ ಜಮೀನಿಗೆ ನ್ಯಾನೋ ಯೂರಿಯಾ ಗೊಬ್ಬರ ಸಿಂಪರಣೆ ಮಾಡಬಹುದು. ಡ್ರೋನ್ ಮುಖಾಂತರ ಒಂದು ಎಕರೆ ಸಿಂಪರಣೆ ಮಾಡಲು ₹400 ಶುಲ್ಕ ನಿಗದಿ ಮಾಡಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕೃಷಿ ಸಮಾಜದ ಜಿಲ್ಲಾ ಪ್ರತಿನಿಧಿ ಗಂಗಣ್ಣ ಎಲಿ ಮಾತನಾಡಿ, ರೈತರು ರೂಢಿಗತವಾಗಿ ಬಿತ್ತನೆ ಮಾಡುವಾಗ ಡಿಎಪಿ ಮಳೆ ಬಂದಾಗ ಯೂರಿಯಾ ಬಳಸುತ್ತಿದ್ದು, ನ್ಯಾನೋ ಯೂರಿಯಾ ಹಾಗೂ ಲಘು ಪೋಷಕಾಂಶಗಳ ಬಳಕೆ ಬಗ್ಗೆ ರೈತರಲ್ಲಿ ಅರಿವು ಮೂಡಿಸುವುದು ಅವಶ್ಯಕವಾಗಿರುತ್ತದೆ ಎಂದರು.

ಕೃಷಿಕ ಸಮಾಜ ಅಧ್ಯಕ್ಷ ಮಂಜುನಾಥ ಬೆನಕನಕೊಂಡ, ಕೃಷಿಕ ಸಮಾಜದ ಸದಸ್ಯರಾದ ಶಂಕರಗೌಡ ಪಾಟೀಲ, ಚಿಕ್ಕಪ್ಪ ಛತ್ರದ, ಇಫ್ಕೊ ಸಂಸ್ಥೆಯ ಪ್ರಶಾಂತ, ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ ಇತರರಿದ್ದರು.

PREV

Recommended Stories

ಬಸ್ಸುಗಳಲ್ಲಿ ಸುರಕ್ಷತೆಗೆ ಸರ್ಕಾರ ತಾಕೀತು - ಕರ್ನೂಲ್‌ ಬಸ್‌ ಬೆಂಕಿ ದುರಂತ ಎಫೆಕ್ಟ್‌
ಉದ್ಯಮಿಗಳ ಜತೆ ಡಿ.ಕೆ. ಶಿವಕುಮಾರ್‌ ಡಿನ್ನರ್‌ : ನಗರಾಭಿವೃದ್ಧಿ ಬಗ್ಗೆ ಚರ್ಚೆ