ಗ್ಯಾರಂಟಿ ಅಧ್ಯಕ್ಷರಿಗೆ ಪಾಲಿಕೆಯಿಂದ ಗೌರವ ಧನ ನೀಡಲು ಆಕ್ಷೇಪ!

KannadaprabhaNewsNetwork |  
Published : Sep 04, 2026, 03:00 AM IST
ಮಹಾನಗರ ಪಾಲಿಕೆ | Kannada Prabha

ಸಾರಾಂಶ

ಮಹಾನಗರ ಪಾಲಿಕೆಯಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿಯು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷರಿಗೆ, ಸದಸ್ಯರಿಗೆ ಗೌರವ ಧನ ಹಾಗೂ ಭತ್ಯೆ ನೀಡುವುದಕ್ಕೆ ಆಕ್ಷೇಪಿಸುತ್ತಿದೆ. ಸಾವಿರಾರು ಕೋಟಿ ಖರ್ಚು ಮಾಡಿ ಗ್ಯಾರಂಟಿ ಯೋಜನೆ ನೀಡುತ್ತಿರುವ ಸರ್ಕಾರ, ಗೌರವ ಧನ ಹಾಗೂ ಭತ್ಯೆಯನ್ನೂ ನೀಡಲಿ ಎಂದು ಹೇಳುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಿಗೆ ಗೌರವಧನ ಹಾಗೂ ಸದಸ್ಯರಿಗೆ ಸೇವಾಭತ್ಯೆ ನೀಡುವ ಹೊಣೆಯನ್ನು ರಾಜ್ಯ ಸರ್ಕಾರ ಮಹಾನಗರ ಪಾಲಿಕೆ ಮೇಲೆ ಹೇರಿದೆ. ಇದಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಗ್ಯಾರಂಟಿ ಅಧ್ಯಕ್ಷರಿಗೆ ನಾವೇಕೆ ಕೊಡಬೇಕು ಎಂಬ ಪ್ರಶ್ನೆ ಎತ್ತಿದೆ. ಇದು ರಾಜ್ಯ ಸರ್ಕಾರ ಹಾಗೂ ಪಾಲಿಕೆ ನಡುವೆ ಹೊಸ ಸಮರಕ್ಕೆ ಕಾರಣವಾಗುತ್ತಿದೆ.

ರಾಜ್ಯ ಸರ್ಕಾರ ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್‌, ಅನ್ನಭಾಗ್ಯ ಈ ಪಂಚ ಗ್ಯಾರಂಟಿ ಜಾರಿಗೆ ಅನುಷ್ಠಾನ ಸಮಿತಿಗಳನ್ನು ರಚಿಸಿದೆ. ವಿಧಾನಸಭಾ ಕ್ಷೇತ್ರವಾರು ಹಾಗೂ ಮಹಾನಗರ ಪಾಲಿಕೆ ಗ್ಯಾರಂಟಿ ಸಮಿತಿಗಳನ್ನು ರಚಿಸಿದೆ. ಹು-ಧಾ ಮಹಾನಗರ ಪಾಲಿಕೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳಲ್ಲಿ 4 ಸಮಿತಿ (ಒಬ್ಬರು ಅಧ್ಯಕ್ಷರು, 8 ಜನ ಸದಸ್ಯರು), ಪಾಲಿಕೆ ಸಮಿತಿ (ಕೇಂದ್ರ ಸಮಿತಿ- ಒಬ್ಬರು ಅಧ್ಯಕ್ಷರು, ಉಪಾಧ್ಯಕ್ಷರು, ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು ಇದಕ್ಕೆ ಸದಸ್ಯರು) ಹೀಗೆ ಒಟ್ಟು 5 ಸಮಿತಿಗಳಿವೆ. ವಿಧಾನಸಭಾ ಕ್ಷೇತ್ರವಾರು ಅಧ್ಯಕ್ಷರಿಗೆ ₹ 25 ಸಾವಿರ, ಕೇಂದ್ರ ಸಮಿತಿ ಅಧ್ಯಕ್ಷರಿಗೆ ₹ 40 ಸಾವಿರ, ಉಪಾಧ್ಯಕ್ಷರಿಗೆ ₹ 10 ಸಾವಿರ ಗೌರವ ಧನ, ಇನ್ನುಳಿದಂತೆ ಸಭೆ ನಡೆದಾಗ ಸದಸ್ಯರು ಸೇರಿದಂತೆ ಎಲ್ಲರಿಗೂ ₹ 1200 ಭತ್ಯೆ ಇದೆ. ಈ ಹಣವನ್ನು ಪಾಲಿಕೆ ತನ್ನ ಆಂತರಿಕ ಸಂಪನ್ಮೂಲದಿಂದ ನೀಡಬೇಕು ಎಂದು ಸರ್ಕಾರ ಕಳೆದ 6 ತಿಂಗಳಿಂದ ಸುತ್ತೊಲೆ ಹೊರಡಿಸಿ ಸೂಚಿಸಿದೆ. ವರ್ಷಕ್ಕೆ ಕನಿಷ್ಠವೆಂದರೂ ₹ 33ರಿಂದ ₹ 35 ಲಕ್ಷಕ್ಕೂ ಅಧಿಕ ಹಣ ಪಾಲಿಕೆಗೆ ಹೊರೆಯಾಗಲಿದ್ದರೂ ಈಗಾಗಲೇ ಪಾಲಿಕೆ 3-4 ತಿಂಗಳಿಂದ ₹ 9.80 ಲಕ್ಷ ಪಾವತಿಸಿದೆ.

ಬಿಜೆಪಿ ಆಕ್ಷೇಪ:

ಮಹಾನಗರ ಪಾಲಿಕೆಯಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿಯು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷರಿಗೆ, ಸದಸ್ಯರಿಗೆ ಗೌರವ ಧನ ಹಾಗೂ ಭತ್ಯೆ ನೀಡುವುದಕ್ಕೆ ಆಕ್ಷೇಪಿಸುತ್ತಿದೆ. ಸಾವಿರಾರು ಕೋಟಿ ಖರ್ಚು ಮಾಡಿ ಗ್ಯಾರಂಟಿ ಯೋಜನೆ ನೀಡುತ್ತಿರುವ ಸರ್ಕಾರ, ಗೌರವ ಧನ ಹಾಗೂ ಭತ್ಯೆಯನ್ನೂ ನೀಡಲಿ. ನಮ್ಮ ಪಾಲಿಕೆಗೆ ನೀಡಬೇಕಾದ ಅನುದಾನವನ್ನೇ ಸರಿಯಾಗಿ ಕೊಡುತ್ತಿಲ್ಲ. ಇವುಗಳ ಮಧ್ಯೆ ನಾವೇಕೆ ಆರ್ಥಿಕ ಹೊರೆ ಹೊತ್ತುಕೊಳ್ಳಬೇಕೆಂದು ಪ್ರಶ್ನಿಸಿದೆ.ಮೇಯರ್‌ಗಿಂತ ಅಧ್ಯಕ್ಷರಿಗೆ ಜಾಸ್ತಿ!

ಮೇಯರ್‌ ಗೌರವ ಧನ ಮಾಸಿಕ ₹ 25 ಸಾವಿರ ಇದ್ದರೆ ಗ್ಯಾರಂಟಿ ಕೇಂದ್ರ ಸಮಿತಿ ಅಧ್ಯಕ್ಷರಿಗೆ ₹ 40 ಸಾವಿರವೇಕೆ. ಮೇಯರ್‌ ಹುದ್ದೆ ಸಂವಿಧಾನಿಕ ಹುದ್ದೆಯಾಗಿದ್ದರೂ ಗ್ಯಾರಂಟಿ ಅಧ್ಯಕ್ಷರಿಗೆ ₹ 40 ಸಾವಿರ ಏಕೆ ಕೊಡಬೇಕು. ಬೇಕಾದರೆ ಸರ್ಕಾರವೇ ಕೊಡಲಿ ಎಂಬುದು ಪಾಲಿಕೆ ಆಡಳಿತ ಮಂಡಳಿ ವಾದ.ಗ್ಯಾರಂಟಿ ಯೋಜನೆಗಳಿಗೆ ಸಾವಿರಾರು ಕೋಟಿ ಖರ್ಚು ಮಾಡುವ ಸರ್ಕಾರ ಅದರ ಅಧ್ಯಕ್ಷರು- ಉಪಾಧ್ಯಕ್ಷರಿಗೂ ತಾನೇ ಗೌರವ ಧನ ನೀಡಲಿ. ಪಾಲಿಕೆಯಿಂದ ಕೊಡಲು ಸುತ್ತೋಲೆ ಹೊರಡಿಸಿದ್ದಕ್ಕೆ ನಮ್ಮ ಆಕ್ಷೇಪವಿದೆ.

ತಿಪ್ಪಣ್ಣ ಮಜ್ಜಗಿ, ಪಾಲಿಕೆ ಬಿಜೆಪಿ ಸದಸ್ಯರುಪಾಲಿಕೆಗೆ ಸರ್ಕಾರದಿಂದ ಬರಬೇಕಾದ ಅನುದಾನವೇ ಸಾಕಷ್ಟಿದೆ. ಇದೀಗ ಅದನ್ನು ಕೊಡದೆ ಗ್ಯಾರಂಟಿ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಗೌರವಧನ ನೀಡಿ ಎಂದರೆ ಹೇಗೆ.

ವೀರಣ್ಣ ಸವಡಿ, ಬಿಜೆಪಿ ಸದಸ್ಯರು

ಲಕ್ಷಾಂತರ ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಸಾವಿರಾರು ಕೋಟಿ ಅನುದಾನ ನೀಡುತ್ತಿದೆ. ಹೀಗಿರುವಾಗ ಮಹಾನಗರ ಪಾಲಿಕೆ ಅಧ್ಯಕ್ಷರಿಗೆ ಗೌರವ ಧನ ನೀಡಲು ಆಗುವುದಿಲ್ಲ ಎಂದರೆ ಹೇಗೆ?

ಇಮ್ರಾನ್‌ ಎಲಿಗಾರ್‌, ಪಾಲಿಕೆ ಕಾಂಗ್ರೆಸ್‌ ಸದಸ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟನೆ
ಹಾರಂಗಿ ಸಾಕಾನೆ ಶಿಬಿರ ಪ್ರವಾಸಿಗರಿಗೆ ಶೀಘ್ರ ಮುಕ್ತ