ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ವಲಯ, ಕೇಂದ್ರ ಪುರಸ್ಕೃತ ಕಾರ್‍ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇರೆ ಬೇರೆ ಪಕ್ಷದವರು ಅಧಿಕಾರಿಗಳಿಗೆ ಸೂಚನೆ ನೀಡುವುದು ಸಹಜ. ಆದರೆ, ಅಧಿಕಾರಿಗಳು ಪಕ್ಷಾತೀತವಾಗಿ ಜನರಿಗೆ ಸೌಲಭ್ಯ ತಲುಪಿಸುವ ಕೆಲಸ ಮಾಡಬೇಕು ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ನಾನು, ಕೇಂದ್ರದಲ್ಲಿ ಉನ್ನತ ಖಾತೆ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಆದ ಕಾರಣ ಕೇಂದ್ರ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಮಂಡ್ಯ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಉತ್ಸುಕನಾಗಿದ್ದೇನೆ. ಏನೆಲ್ಲಾ ಯೋಜನೆ ತರಬಹುದು, ಅಗತ್ಯತೆ ಇದೆ ಎಂಬುದರ ಕುರಿತಂತೆ ಪ್ರಸ್ತಾವನೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ರಾಜಕಾರಣಿಗಳು ರಾಜಕೀಯ ಮಾಡುತ್ತಾರೆ. ಅಧಿಕಾರಿಗಳು ರಾಜಕಾರಿಣಿಗಳನ್ನು ಮೆಚ್ಚಿಸಲು ಕೆಲಸ ಮಾಡದೆ ಜನರ ಕೆಲಸ ಮಾಡುವ ಮೂಲಕ ತಮ್ಮ ಜವಾಬ್ದಾರಿ ಮರೆಯಬಾರದು. ರಾಜಕಾರಣ ಮಾಡಲು ಹೋದರೇ ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರಾಮಾಣಿಕವಾಗಿ ಸರ್ಕಾರದ ಕಾರ್‍ಯಕ್ರಮಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಂತೆ ಸಲಹೆ ನೀಡಿದರು.ಸಹಕಾರ ಇಲಾಖೆಗಳಲ್ಲಿ ಹೆಚ್ಚಿನ ಲೋಪಗಳು ಕಂಡುಬರುತ್ತಿವೆ. ಸಹಕಾರ ಇಲಾಖೆ ಕಾನೂನುಗಳೇ ಇಲ್ಲದಂತೆ ಆಗಿದೆ. ನೀವು ಕೊಟ್ಟಿದ್ದೆ ತೀರ್ಪು, ಕಾನೂನು ಎಂಬಂತೆ ಆಗಿದೆ. ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಪೂರಕವಾದ ನಿರ್ಧಾರಗಳನ್ನು ಅಧಿಕಾರಿಗಳು ತೆಗೆದುಕೊಳ್ಳಬೇಕು. ಅದು ಬಿಟ್ಟು ಯಾರದ್ದೋ ಹಿತಾಸಕ್ತಿಗಾಗಿ ಸಂಘಗಳಿಗೆ ಮಾರಕವಾಗುವಂತಹ ಕೆಲಸ ಮಾಡಬಾರದು ಎಂದರು.
ಕೃಷಿಗಿಂತಲೂ ಹೈನುಗಾರಿಕೆಯಲ್ಲೇ ಹೆಚ್ಚು ಆದಾಯ ಬರುತ್ತಿದೆ. ಇದರಿಂದ ರೈತ ಕುಟುಂಬಗಳು ಸ್ವಾವಲಂಭಿಯಾಗಲು ಸಾಧ್ಯವಾಗಿದೆ. ಕೃಷಿ ಮತ್ತು ಪಶು ಸಾಕಾಣಿಗೆ ಜೊತೆಗೆ ಯುವಜನರನ್ನೂ ತೊಡಗಿಸಿಕೊಂಡು ಸೌಲಭ್ಯ ನೀಡುವಂತೆ ಕಿವಿಮಾತು ಹೇಳಿದರು.
ಮಧ್ಯ ಪ್ರವೇಶಿಸಿದ ಜಿಲ್ಲಾಕಾರಿ ಡಾ.ಕುಮಾರ, ಮನೆ ನಿರ್ಮಾಣಕ್ಕೆ 1.20 ಲಕ್ಷ ರು. ಅನುದಾನ ನೀಡಲಾಗುತ್ತಿದೆ. ಎಸ್ಸಿ, ಎಸ್ಟಿಯವರಿಗೆ 2 ಲಕ್ಷ ರು.ನೀಡಲಾಗುತ್ತದೆ. ಇಷ್ಟು ಕಡಿಮೆ ಮೊತ್ತದ ಹಣದಿಂದ ಏನೂ ಮಾಡಲಾಗದು. ಫಲಾನುಭವಿಗಳು ಅಡಿಪಾಯ ಹಾಕಲು ಉಪಯೋಗಿಸಿಕೊಂಡು ನಂತರ ಬ್ಯಾಂಕ್ ಸಾಲಕ್ಕೆ ಮೊರೆ ಹೋಗುತ್ತಾರೆ. ಕೆಲವರಿಗೆ ಬ್ಯಾಂಕ್ ಸಾಲ ಸೌಲಭ್ಯ ದೊರೆಯದೆ ಸ್ಥಗಿತವಾಗಿದೆ. ಇನ್ನೂ ಹಲವು ಸಮಸ್ಯೆಗಳಿಂದಾಗಿ ಮನೆ ನಿರ್ಮಾಣ ಸಾಧ್ಯವಾಗಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ಕಬ್ಬು ಮತ್ತು ಭತ್ತ ಹೊರತುಪಡಿಸಿ ಬೇರೆ ಬೆಳೆ ಬೆಳೆಯಲು ರೈತರಿಗೆ ಮನವರಿಕೆ ಮಾಡುವಂತೆ ಕೃಷಿ ಜಂಟಿ ನಿರ್ದೇಶಕರಿಗೆ ಕುಮಾರಸ್ವಾಮಿ ಸೂಚನೆ ನೀಡಿದರು. ಭತ್ತದ ಉತ್ಪಾದನೆ ಕಡಿಮೆಯಾದರೆ, ಕಬ್ಬಿನ ಉತ್ಪಾದನೆ ಹೆಚ್ಚಿದೆ. ಆದರೆ, ಇಳುವರಿ ಮಾತ್ರ ಕಡಿಮೆ ಇದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಶಾಸಕರಾದ ಪಿ.ರವಿಕುಮಾರ್, ಶಾಸಕ ಎಚ್.ಟಿ. ಮಂಜು, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.