ನರಗುಂದದಲ್ಲಿ ಕಾಲುವೆ ನೀರಿಗಾಗಿ ಅಧಿಕಾರಿಗಳಿಗೆ ದಿಗ್ಬಂಧನ

KannadaprabhaNewsNetwork |  
Published : Nov 15, 2025, 02:15 AM IST
ನರಗುಂದದಲ್ಲಿ ರೈತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಹಿಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ ಮಲಪ್ರಭಾ ಬಲದಂಡೆ ಕಾಲುವೆಗೆ ನೀರಾವರಿ ಅಧಿಕಾರಿಗಳು ಕೇವಲ 300 ಕ್ಯುಸೆಕ್‌ ನೀರು ಪೂರೈಕೆ ಮಾಡುವುದರಿಂದ ತಾಲೂಕಿನ ಯಾವ ಗ್ರಾಮದ ರೈತರಿಗೆ ಜಮೀನುಗಳಿಗೆ ನೀರು ಸಿಗುತ್ತಿಲ್ಲ.

ನರಗುಂದ: ಮಲಪ್ರಭಾ ಬಲದಂಡೆ ಕಾಲುವೆಗೆ ಹೆಚ್ಚುವರಿ ನೀರು ಹರಿಸಬೇಕೆಂದು ರೈತರು ನೀರಾವರಿ ನಿಗಮದ ಅಧಿಕಾರಿಗಳನ್ನು ಕಚೇರಿಯಲ್ಲಿ ಕೂಡಿ ಹಾಕಿ ಪ್ರತಿಭಟನೆ ಮಾಡಿದರು.

ಶುಕ್ರವಾರ ಪಟ್ಟಣದ ನೀರಾವರಿ ನಿಗಮದ ಕಚೇರಿಯಲ್ಲಿ ರೈತಸೇನಾ ಸಂಘಟನೆ ಆಶ್ರಯದಲ್ಲಿ ಮಲಪ್ರಭಾ ಬಲದಂಡೆ ಕಾಲುವೆಗೆ ಹೆಚ್ಚುವರಿ ನೀರು ಹರಿಸಬೇಕೆಂದು ನಿಗಮದ ಅಧಿಕಾರಿಗಳನ್ನು ಕಚೇರಿಯಲ್ಲಿ ಕೂಡಿ ಹಾಕಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ, ರೈತ ಮುಖಂಡ ಎಸ್.ಬಿ. ಜೋಗಣ್ಣವರ ಮಾತನಾಡಿ, ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ರೈತರು ಅತಿವೃಷ್ಟಿಯಿಂದ ಸಂಪೂರ್ಣ ಬೆಳೆಹಾನಿ ಮಾಡಿಕೊಂಡು ತೀವ್ರ ತೊಂದರೆಯಲ್ಲಿದ್ದಾರೆ.

ಹಿಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ ಮಲಪ್ರಭಾ ಬಲದಂಡೆ ಕಾಲುವೆಗೆ ನೀರಾವರಿ ಅಧಿಕಾರಿಗಳು ಕೇವಲ 300 ಕ್ಯುಸೆಕ್‌ ನೀರು ಪೂರೈಕೆ ಮಾಡುವುದರಿಂದ ತಾಲೂಕಿನ ಯಾವ ಗ್ರಾಮದ ರೈತರಿಗೆ ಜಮೀನುಗಳಿಗೆ ನೀರು ಸಿಗುತ್ತಿಲ್ಲ.

ಈಗಾಗಲೇ ಹಲವಾರು ಬಾರಿ ಮೌಖಿಕವಾಗಿ ಕಾಲುವೆಗೆ 900 ಕ್ಯುಸೆಕ್‌ ನೀರು ಬಿಡಬೇಕೆಂದು ಹೇಳಿದರೂ ಪ್ರಯೋಜನವಾಗದ್ದರಿಂದ ನೀರಾವರಿ ನಿಗಮದ ಅಧಿಕಾರಿಗಳನ್ನು ಕಚೇರಿಯಲ್ಲಿ ಕೂಡಿ ಹಾಕಿ ಕಚೇರಿಗೆ ಕೀಲಿ ಹಾಕಿ ಪ್ರತಿಭಟನೆ ಮಾಡುತ್ತಿದ್ದೇವೆಂದು ಹೇಳಿದರು.

ನೀರಾವರಿ ನಿಗಮದ ಅಧಿಕಾರಿ ಜಗದೀಶ ಕುರಿ ಅವರು ಕಚೇರಿ ಕಾರ್ಯದ ನಿಮಿತ್ತ ಬೆಂಗಳೂರಿಗೆ ಹೋಗಿದ್ದರು. ಕಚೇರಿಗೆ ಕೀಲಿ ಹಾಕಿದ್ದನ್ನು ಸಹ ಸಿಬ್ಬಂದಿ ದೂರವಾಣಿ ಮೂಲಕ ತಿಳಿಸಿದ ನಂತರ ಅಧಿಕಾರಿ ಕುರಿ ಅವರು, ಪ್ರತಿಭಟನಾನಿರತ ರೈತರಿಗೆ ದೂರವಾಣಿ ಕರೆ ಮಾಡಿ ದಯವಿಟ್ಟು ಪ್ರತಿಭಟನೆ ಹಿಂದಕ್ಕೆ ಪಡೆಯಬೇಕು. ನಾಳೆಯಿಂದ ಬಲದಂಡೆ ಕಾಲುವೆಗೆ 900 ಕ್ಯುಸೆಕ್‌ ನೀರು ಹರಿಸಲಾಗುವುದೆಂದು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ರಾಜುಗೌಡ ಪಾಟೀಲ, ಸಿ.ಎಸ್. ಪಾಟೀಲ, ಸುಭಾಸ ಗಿರಿಯಣ್ಣವರ, ಹನುಮಂತ ಸರನಾಯ್ಕರ, ಪರಮೇಶ ಅಣ್ಣಿಗೇರಿ, ಯಲ್ಲಪ್ಪ ಚಲವಣ್ಣವರ, ಸೋಮಲಿಂಗಪ್ಪ ಆಯಿಟ್ಟಿ, ಶಿವಪ್ಪ ಸಾತಣ್ಣವರ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವಾಣ, ವಿಜಯಕುಮಾರ ಹೂಗಾರ, ಮಂಜುನಾಥ ಸೌದತ್ತಿ, ರಾಮು ಮಾನೆ, ಬಸವಂತಪ್ಪ ಯಲಿಗಾರ, ಅಣ್ಣಪ್ಪ ಮಾನೆ, ಬಸಪ್ಪ ಬಾಬಣ್ಣವರ, ಚಂದ್ರಗೌಡ ಪರ್ವತಗೌಡ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ