ಕೃಷಿಕ ಸಮಾಜದ ಸಭೆಗೆ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಿ

KannadaprabhaNewsNetwork | Published : Feb 8, 2025 12:32 AM

ಸಾರಾಂಶ

ಕೃಷಿಕ ಸಮಾಜದ ಸಭೆಗೆ ಕೃಷಿ ಸಂಬಂಧಿತ ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ರೇಷ್ಮೆ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಟಿ. ಕಲಗೌಡರ ಒತ್ತಾಯಿಸಿದರು.

ಹಾನಗಲ್ಲ: ಕೃಷಿಕ ಸಮಾಜದ ಸಭೆಗೆ ಕೃಷಿ ಸಂಬಂಧಿತ ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ರೇಷ್ಮೆ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಟಿ. ಕಲಗೌಡರ ಒತ್ತಾಯಿಸಿದರು.

ಶುಕ್ರವಾರ ಹಾನಗಲ್ಲಿನ ಕೃಷಿ ಇಲಾಖೆಯಲ್ಲಿ ನಡೆದ ಕೃಷಿಕ ಸಮಾಜದ ಸಭೆಯಲ್ಲಿ ಯಾವುದೇ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿರಲಿಲ್ಲ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ರೈತರ ಸಮಸ್ಯೆಗಳನ್ನು ಚರ್ಚಿಸುವ ಈ ಸಭೆಗೆ ಕೃಷಿಗೆ ಸಂಬಂಧಿಸಿದ ಅಧಿಕಾರಿಗಳೇ ಹಾಜರಾಗದಿದ್ದರೆ ಯಾವ ಪುರುಷಾರ್ಥಕ್ಕೆ ಈ ಸಭೆಗಳನ್ನು ನಡೆಸಬೇಕು ಎಂದು ಹರಿಹಾಯ್ದರು.

ರೈತರಿಗೆ ಸಂಬಂಧಿಸಿದ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಮಾರಾಟಗಾರರು, ರೈತ ಉತ್ಪಾದಕ ಸಂಸ್ಥೆಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಭೆಯನ್ನು ಏಪ್ರಿಲ್‌ ಮೊದಲ ವಾರದಲ್ಲಿ ಕರೆದು ಚರ್ಚಿಸಲಾಗುವುದು. ಕೃಷಿಕ ಸಮಾಜದ ಸದಸ್ಯತ್ವ ಪಡೆದ ಸದಸ್ಯರ ಪಟ್ಟಿಯಲ್ಲಿ ಶೇ. ೪೦ರಷ್ಟು ನಿಧನ ಹೊಂದಿದವರ ಹೆಸರಿವೆ. ಇಂತಹ ಹೆಸರನ್ನು ಕೈ ಬಿಟ್ಟು ಹೊಸ ಹೆಸರು ಸೇರಿಸಲು ಕ್ರಮ ಜರುಗಿಸಲಾಗುವುದು. ತಾಲೂಕು ಕೃಷಿ ಸಮಾಜಕ್ಕೆ ಸ್ವಂತ ಕಟ್ಟಡಕ್ಕೆ ಸರಕಾರಕ್ಕೆ ಒತ್ತಾಯಿಸುವುದು. ಬೆಳೆ ಹಾನಿಯಾದ ಸಂದರ್ಭದಲ್ಲಿ ಹಾಗೂ ಬೆಳೆ ಪರಿಹಾರ ನೀಡುವಲ್ಲಿ ಬೆಳೆವಿಮೆ ಕಂಪನಿಗಳು ಹಾಗೂ ಸರಕಾರದಿಂದ ಬರುವ ಪರಹಾರ ನೀಡುವಲ್ಲಿ ಕ್ಷೇತ್ರ ಪರಿಶೀಲನೆ ಗೊಂದಲವಾಗದಂತೆ ಕ್ರಮ ಜರುಗಿಸಲು ಒತ್ತಾಯಿಸಲಾಯಿತು.

ರೈತರಿಗೆ ಬೆಳೆ ವಿಮೆ ಕಂತು ತುಂಬಲು ದಿನಾಂಕ ಘೋಷಿಸುವಂತೆ ಸರಕಾರ ಬೆಳೆ ಹಾನಿ ಪರಿಹಾರ ನೀಡುವ ದಿನಾಂಕವನ್ನೂ ಬೆಳೆವಿಮೆ ಕಂತು ತುಂಬುವ ದಿನಾಂಕದ ಜೊತೆಗೆ ಘೋಷಣೆ ಮಾಡಬೇಕು. ಕೃಷಿ ಕೂಲಿ, ಪರಿಕರ, ಆಹಾರ ಧಾನ್ಯಗಳ ಮಾರುಕಟ್ಟೆ ದರವನ್ನು ಹೆಚ್ಚಿಸಬೇಕು. ಸರಕಾರ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು. ಕೃಷಿ ಇಲಾಖೆ ಸಹಾಯಧನದಲ್ಲಿ ವಿತರಿಸುವ ಸ್ಪಿಂಕ್ಲರ್, ಹನಿ ನೀರಾರಿ ಯೋಜನೆಗಳನ್ನು ಎಲ್ಲ ವರ್ಗದ ರೈತರಿಗೆ ೩-೪ ವರ್ಷಕ್ಕೊಮ್ಮೆ ಸಹಾಯಧನದಲ್ಲಿ ಮರು ವಿತರಿಸುವಂತೆ ಸರ್ಕಾರದ ಮಟ್ಟದಲ್ಲಿ ಬದಲಾವಣೆ ಆಗಬೇಕು.

ರೈತರ ಸಮಸ್ಯೆಗೆ ಕೃಷಿ ಸಂಬಂಧಿತ ಇಲಾಖೆಗಳು, ಸರಕಾರ ಸ್ಪಂದಿಸಬೇಕು. ಅನಿವಾರ್ಯವಾದರೆ ಸರಕಾರಕ್ಕೆ ಎಚ್ಚರಿಕೆ ನೀಡಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಡಿವೆಪ್ಪ ಆಲದಕಟ್ಟಿ, ಮಾಲತೇಶ ಪರಪ್ಪನವರ, ಬಸಣ್ಣ ಸಿಗ್ಲಿ, ಗಿರೀಶಗೌಡ ಪಾಟೀಲ ಇದ್ದರು.

Share this article