ಉಳುಮೆಗೆ ಬಿಡದ ಅಧಿಕಾರಿಗಳು: ರೈತರ ಆಕ್ರೋಶ

KannadaprabhaNewsNetwork | Published : Jul 24, 2024 12:18 AM

ಸಾರಾಂಶ

ರೈತರು ಕಳೆದ 15 ರಿಂದ 20 ವರ್ಷ ಸಾಗುವಳಿ ಮಾಡಲಾಗುತ್ತಿತ್ತು. ನಂತರ ಅವರನ್ನು ಬೆದರಿಸಿ ಹೊರಗಡೆ ಕಳಿಸಿದ್ದಾರೆ. ಭೂಮಿ ಹೆಸರಿನಲ್ಲಿದ್ದರೂ, ಸಾಗುವಳಿ ಮಾಡಲಾಗಿಲ್ಲ. ಪ್ರಾಮಾಣಿಕವಾಗಿ ಬದುಕಲು ಭೂಮಿ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಸರ್ಕಾರ ಈ ಹಿಂದೆ ರೈತರಿಗೆ ನೀಡಿದ್ದ ಜಮೀನನಲ್ಲಿ ಉಳುಮೆ ಮಾಡಲು ಅಧಿಕಾರಿಗಳು ಬಿಡುತ್ತಿಲ್ಲ, ಅಲ್ಲದೆ ವಿವಿ ಸಾಗರ ಹಿನ್ನೀರಿನಿಂದ ಮುಳುಗಡೆ ಯಾಗಿರುವ ರೈತರಿಗೂ ಉಳುಮೆ ಮಾಡಲು ಬಿಡುತ್ತಿಲ್ಲ. ನಮಗೆ ನ್ಯಾಯ ಕೊಡಿಸಿ ಎಂದು ನಾಗತಿಹಳ್ಳಿ ರೈತರು ಜಿಲ್ಲಾ ಹಾಗೂ ತಾಲೂಕು ರೈತ ಸಂಘಟನೆ ಮುಖಂಡರೊಂದಿಗೆ ತಹಸೀಲ್ದಾರ್ ಅವರಿಗೆ ಮನವಿ ಮಾಡಿಕೊಂಡರು.

ಇದೇ ಸಮಯದಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಈ ಹಿಂದೆ ರೈತ ಕುಟುಂಬದವರ ಮೇಲೆ ದಬ್ಬಾಳಿಕೆ ನಡೆದಾಗ, ಭೂರಹಿತರು ಉಳುಮೆ ಮಾಡಿಕೊಂಡು ಬದುಕಲಿ ಎಂದು ಶ್ರೀರಾಂಪುರ ಪೋಲಿಸ್ ಠಾಣೆಯಲ್ಲಿ ಸೌಹಾರ್ದಯುತವಾಗಿ ನಿರ್ಣಯ ಕೈಗೊಳ್ಳಲಾಯಿತು. ಆದರೂ ಈ ಭಾಗದಲ್ಲಿ ಪೋಲಿಸ್ ಸಿಬ್ಬಂದಿ ನೇಮಿಸಿದ್ದು, ಉಳುಮೆ ಮಾಡಲು ಅವಕಾಶ ಕಲ್ಪಿಸದೆ, ಭಯದ ವಾತಾವರಣ ಸೃಷ್ಟಿಸಲಾಗಿದೆ. ಇವರನ್ನು ಅಡವಿಯೊಳಗೆ ಕಳಿಸಿದವರ್ಯಾರು?, ಕಂದಾಯ ಇಲಾಖೆ ಭೂಮಿಯಲ್ಲಿ ಅನಗತ್ಯವಾಗಿ ಪೋಲಿಸರ ಪ್ರವೇಶ ಏಕೆ? ರೈತರ ಶೆಡ್ ಗಳ ಧ್ವಂಸ ಮಾಡುವ ಅಧಿಕಾರ ಕೊಟ್ಟವರ್ಯಾರು?. ಎಂದು ಪ್ರಶ್ನಿಸಿದರು.

ರೈತರು ಕಳೆದ 15 ರಿಂದ 20 ವರ್ಷ ಸಾಗುವಳಿ ಮಾಡಲಾಗುತ್ತಿತ್ತು. ನಂತರ ಅವರನ್ನು ಬೆದರಿಸಿ ಹೊರಗಡೆ ಕಳಿಸಿದ್ದಾರೆ. ಭೂಮಿ ಹೆಸರಿನಲ್ಲಿದ್ದರೂ, ಸಾಗುವಳಿ ಮಾಡಲಾಗಿಲ್ಲ. ಪ್ರಾಮಾಣಿಕವಾಗಿ ಬದುಕಲು ಭೂಮಿ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕೃಷಿ ಮಾಡುತ್ತಿರುವ ಸ್ಥಳ ಪರಿಶೀಲನೆ ಮಾಡಿ, ಶೆಡ್ ಹಾಕಿರೋದನ್ನ ನೋಡಿ ತಹಸೀಲ್ದಾರ್ ಅವರು ವಸ್ತುನಿಷ್ಠ ವರದಿ ನೀಡಲಿ. ನಮ್ಮ ರೈತರು ಯಾವುದೇ ಕಾನೂನು ಕೈಗೆತ್ತಿಕೊಳ್ಳುವವರಲ್ಲ, ತಮ್ಮ ಜೀವನಕ್ಕಾಗಿ ಬದುಕಲು ಕೃಷಿ ಮಾಡುತ್ತಿದ್ದಾರೆ. ಕೃಷಿ ನಂಬಿರುವವರು ಬದುಕಲೇಬೇಕು ಎಂದು ಒತ್ತಾಯಿಸಿದರು.

ವಿವಿ ಸಾಗರ ಭರ್ತಿಯಾದಾಗ ಸಂತ್ರಸ್ತರಿಗೆ, ಭೂರಹಿತರಿಗೆ, ಜಿಲ್ಲಾಡಳಿತ ಮಾನವೀಯತೆ ಮೆರೆಯಬೇಕು. ಕಳೆದ ವರ್ಷ ಬರಗಾಲದಿಂದ ರೈತ ತತ್ತರಿಸಿ ಹೋಗಿದ್ದಾನೆ. ಭೂಮಿ ಸಾಗು ಮಾಡುತ್ತಿರುವವರು ಅಪರಾಧಿಗಳಲ್ಲ, ‌ ಅನಪೇಕ್ಷಿತವಾಗಿ ಪೋಲಿಸ್ ರೈತರ ಜಮೀನಿನ ಬಳಿ ಹೋಗೋದು ಬೇಡ ಎಂದು ಆಕ್ರೋಶ ಹೊರಹಾಕಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ತಿರುಪತಿ ಪಾಟೀಲ್ ಅವರು, ಸ್ಥಳ ಪರಿಶೀಲನೆ ನಡೆಸಿ, ನೈಜ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು. ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಎಲ್ಲರೂ ಶಾಂತಿಯುತವಾಗಿರಬೇಕು ಎಂದು ರೈತರಿಗೆ ಮನವಿ ಮಾಡಿದರು.

ಇದೇ ಸಮಯದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಬೋರೇಶ್, ಕರಿಸಿದ್ದಯ್ಯ ಶಿವಣ್ಣ, ನಿರಂಜನಮೂರ್ತಿ ಮೂಡಲಗಿರಿಯಪ್ಪ ದೊಡ್ಡಯ್ಯ ಸೇರಿ ನಾಗಥೆಹಳ್ಳಿ ಗ್ರಾಮದ ಸಂತ್ರಸ್ತ ರೈತ ಮಹಿಳೆಯರು ಹಾಜರಿದ್ದರು.

Share this article