ಅಧಿಕಾರಿಗಳು ಲೇಔಟ್ ಮಾಲೀಕರ ಕೈಗೊಂಬೆಯಾಗಬಾರದು: ವಿಜಯಕುಮಾರ ಬಿರಾದಾರ

KannadaprabhaNewsNetwork |  
Published : Apr 11, 2026, 02:15 AM IST
ಲೋಕಾಯುಕ್ತ ಡಿಎಸ್ಪಿ ವಿಜಯಕುಮಾರ ಬಿರಾದಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. | Kannada Prabha

ಸಾರಾಂಶ

ಪಟ್ಟಣದ ನಿವಾಸಿ ಐ.ಡಿ. ಲಕ್ಕುಂಡಿಮಠ ಅವರು, ಪಟ್ಟಣದ ಏಳುಕೋಟಿ ನಗರದಲ್ಲಿ ನಿರ್ಮಾಣವಾದ ಹೊಸ ಬಡಾವಣೆಗಳಲ್ಲಿ ಯಾವುದೇ ಮೂಲ ಸೌಲಭ್ಯ ಕಲ್ಪಿಸದೇ ಇದ್ದರೂ ಅಧಿಕಾರಿಗಳು ಉತಾರ ನೀಡಿದ್ದಾರೆ ಎಂದರು.

ಶಿರಹಟ್ಟಿ: ಅಧಿಕಾರಿಗಳು ಲೇಔಟ್‌ ಮಾಲೀಕರ ಕೈಗೊಂಬೆಯಾಗಬಾರದು ಎಂದು ಲೋಕಾಯುಕ್ತ ಡಿಎಸ್ಪಿ ವಿಜಯಕುಮಾರ ಬಿರಾದಾರ ಸೂಚಿಸಿದರು.

ಶುಕ್ರವಾರ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಲೋಕಾಯುಕ್ತ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಜನರ ಸಮಸ್ಯೆ ಆಲಿಸಿ ಮಾತನಾಡಿ, ಪಟ್ಟಣದಲ್ಲಿ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ಸರ್ಕಾರದ ನಿಯಮಾನುಸಾರ ಬಡಾವಣೆಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಸದೇ ಪಟ್ಟಣ ಪಂಚಾಯಿತಿಯಿಂದ ಉತಾರ ಪಡೆದು ಪ್ಲಾಟ್‌ಗಳನ್ನು ಮಾರಾಟ ಮಾಡಿದ್ದು, ಇದನ್ನು ಗಮನಿಸಿದರೆ ಅಧಿಕಾರಿಗಳು ಅವರ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು.

ಪಟ್ಟಣದ ನಿವಾಸಿ ಐ.ಡಿ. ಲಕ್ಕುಂಡಿಮಠ ಅವರು, ಪಟ್ಟಣದ ಏಳುಕೋಟಿ ನಗರದಲ್ಲಿ ನಿರ್ಮಾಣವಾದ ಹೊಸ ಬಡಾವಣೆಗಳಲ್ಲಿ ಯಾವುದೇ ಮೂಲ ಸೌಲಭ್ಯ ಕಲ್ಪಿಸದೇ ಇದ್ದರೂ ಅಧಿಕಾರಿಗಳು ಉತಾರ ನೀಡಿದ್ದಾರೆ. ಬಡಾವಣೆ ನಿಮಾರ್ಣ ಕೈಗೆತ್ತಿಕೊಂಡ ಮಾಲೀಕರಿಗೆ ನೋಟಿಸ್ ಕೊಡಿಸಿ ಸರ್ಕಾರದ ನಿಯಮಾನುಸಾರ ಸೌಲಭ್ಯ ಕಲ್ಪಿಸಿ ಕೊಡುವಂತೆ ಅರ್ಜಿ ಸಲ್ಲಿಸಿ ಒತ್ತಾಯಿಸಿದರು.ಇದೇ ಬಡಾವಣೆಯಲ್ಲಿ ಅಗ್ನಿಶಾಮಕ ಇಲಾಖೆಯ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಈ ಇಲಾಖೆಗೆ ತೆರಳಲು ಸೂಕ್ತ ರಸ್ತೆ ನಿರ್ಮಾಣ ಕೂಡ ಮಾಡಿಲ್ಲ. ಕಟ್ಟಡದ ಕಾಮಗಾರಿಯು ಕಳಪೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಆಗ ಪಟ್ಟಣ ಪಂಚಾಯಿತಿ ಇಲಾಖೆ ಸಿಬ್ಬಂದಿ ನಮ್ಮ ವ್ಯಾಪ್ತಿಗೆ ಬರುತ್ತಿದ್ದು, ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.ಜಿಲ್ಲೆಯಲ್ಲಿ ಪಟ್ಟಣ ಪಂಚಾಯಿತಿ, ಪುರಸಭೆಗಳಲ್ಲಿ ಬರೀ ೩ ಜನ ಎಂಜಿನಿಯರ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ನಿಮಗೆ ವಹಿಸಿದ ಜವಾಬ್ದಾರಿಯನ್ನು ಸರಿಯಾದ ಮಾಡಿ ಸಾರ್ವಜನಿಕರ ಹಿತ ಕಾಯಬೇಕು. ಇಲ್ಲಸಲ್ಲದ ಸಬೂಬು ಹೇಳಿ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುವ ಕೆಲಸವನ್ನು ಎಂಜಿನಿಯರ್‌ಗಳು ಮಾಡಬಾರದು ಎಂದು ತಾಕೀತು ಮಾಡಿದರು.ಈ ಬಾರಿ ಜಿಲ್ಲೆಯ ಪಿಯುಸಿ ಫಲಿತಾಂಶ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ೩೦ನೇ ಸ್ಥಾನಕ್ಕೆ ಬಂದಿದೆ. ಶಿಕ್ಷಣ ಇಲಾಖೆಯಿಂದ ನೇಮಕಗೊಂಡ ಸಿಆರ್‌ಪಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಮಕ್ಕಳಿಗೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.ಅಧಿಕಾರಿಗಳು ಮತ್ತು ಇಲಾಖೆ ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸಬೇಕೆಂದರೆ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳ ಕುರಿತು ಇಲಾಖೆಯಲ್ಲಿ ನಾಮಫಲಕ ಅಳವಡಿಸಿಕೊಳ್ಳಬೇಕು. ಕಾರ್ಯಾಲಯದಲ್ಲಿ ಯಾವ ಸಿಬ್ಬಂದಿ ಏನು ಕೆಲಸ ಮಾಡಬೇಕು ಎನ್ನುವುದು ಸ್ಪಷ್ಟವಾಗಿ ತಿಳಿಸಯುತ್ತದೆ. ಮೇಲಾಗಿ ಜವಾಬ್ದಾರಿಗೆ ತಕ್ಕಂತೆ ಕೆಲಸ ಮಾಡಬಹುದು. ಇನ್ನೊಂದು ಸಂಗತಿಯೆಂದರೆ ಇಲಾಖೆಯಲ್ಲಿ ಯಾವುದೇ ಅಧಿಕಾರಿ ದೀರ್ಘಕಾಲ ರಜೆ ಮೇಲೆ ತೆರಳಿದರೆ ತಕ್ಷಣ ಬೇರೊಬ್ಬರಿಗೆ ಜವಾಬ್ದಾರಿ ವಹಿಸಿ ಹೋಗುವ ಸಂಪ್ರದಾಯ ಬೆಳೆಸಿಕೊಳ್ಳಬೇಕು ಎಂದರು.ರೇಣವ್ವ ತಳವಾರ ಎಂಬ ವೃದ್ಧೆ ಪಡಿತರ ಚೀಟಿಗಾಗಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿದರು. ತಾಲೂಕಿನ ಮಜ್ಜೂರ ಗ್ರಮದ ವಿಜಯಕುಮಾರ ಮರಿತಮ್ಮಪ್ಪ ಎಂಬವರು ತಮ್ಮ ತಾಯಿ ಹೆಸರಿನಲ್ಲಿದ್ದ ಜಮೀನನ್ನು ಮೋಸದಿಂದ ಬೇರೊಬ್ಬರ ಹೆಸರಿನಲ್ಲಿ ನೋಂದಣಿಯಾಗಿರುವ ಬಗ್ಗೆ ಅರ್ಜಿ ಸಲ್ಲಿಸಿದರು. ಶಂಕ್ರಪ್ಪ ಫಕ್ಕೀರಪ್ಪ ಕಲ್ಲಣ್ಣವರ ಇವರು ಪಟ್ಟಾ ಪ್ರಕಾರ ಆಸ್ತಿ ನೋಂದಣಿ ಮಾಡಿಸಿಕೊಡುವಂತೆ ಅರ್ಜಿ ಸಲ್ಲಿಸಿದರು.

ಸರ್ಕಾರಿ ಇಲಾಖೆ ಅಧಿಕಾರಿಗಳು ಕೂಡ ಸಾರ್ವಜನಿಕರಿಂದ ಹಣ ನೀಡುವಂತೆ ಒತ್ತಾಯಗಳು, ಬೇಡಿಕೆಗಳು, ಬೆದರಿಕೆಗಳು ಬಂದರೆ ನೀವು ಕೂಡ ಲೋಕಾಯುಕ್ತದಲ್ಲಿ ದೂರು ಸಲ್ಲಿಸಬಹುದು. ಇವತ್ತಿನ ವರೆಗೂ ಯಾವೊಬ್ಬ ಅಧಿಕಾರಿಗಳು ನಮ್ಮ ಬಳಿ ಬಂದು ದೂರು ನೀಡಿಲ್ಲ ಎಂದರು.ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ತಾಪಂ ಇಒ ರಾಮಪ್ಪ ದೊಡ್ಡಮನಿ, ಪಿಎಸ್‌ಐ ಈರಪ್ಪ ರಿತ್ತಿ, ಅರಣ್ಯ ಇಲಾಖೆಯ ರಾಮಪ್ಪ ಪೂಜಾರ, ರಂಗಪ್ಪ ಕಾಂಬ್ಳೆ, ಮೃತ್ಯುಂಜಯ ಗುಡ್ಡದಾನವೇರಿ, ಸುಭಾಸ ದೈಗೊಂಡ, ಕೃಷಿ ಇಲಾಖೆ ಅಧಿಕಾರಿ ಶಿವಕುಮಾರ ಕಾಶಪ್ಪನವರ, ವಿ.ಎ. ಮುಳಗುಂದಮಠ, ಗೋಪಾಲ ಲಮಾಣಿ, ಮಲ್ಲಿಕಾರ್ಜುನ ಪಾಟೀಲ ಸೇರಿ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖರ್ಗೆ ಹೇಳಿಕೆ ವಿರುದ್ಧ ಹಳಿಯಾಳ ಠಾಣೆಯಲ್ಲಿ ಬಿಜೆಪಿ ದೂರು
ನ್ಯಾಷನಲ್ ಪದವಿಪೂರ್ವ ಕಾಲೇಜಿಗೆ ಶೇ. 95 ಫಲಿತಾಂಶ