ಅಧಿಕಾರಿಗಳು ಜನಪರವಾಗಿ ಕೆಲಸ ಮಾಡಬೇಕು- ಶಾಸಕ ಲಮಾಣಿ

KannadaprabhaNewsNetwork |  
Published : Sep 04, 2024, 01:58 AM IST
೩ಎಚ್‌ವಿಆರ್೨ | Kannada Prabha

ಸಾರಾಂಶ

ಅಧಿಕಾರಿಗಳು ರೈತರ ಬಳಿ ಹೋಗದೇ ಕೇವಲ ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡಿದರೆ ನಡೆಯಲ್ಲ, ರೈತರು ಹಾಗೂ ಜನಪರವಾಗಿ ನೌಕರರು ಕೆಲಸ ಮಾಡಬೇಕು ಎಂದು ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

ಹಾವೇರಿ: ಅಧಿಕಾರಿಗಳು ರೈತರ ಬಳಿ ಹೋಗದೇ ಕೇವಲ ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡಿದರೆ ನಡೆಯಲ್ಲ, ರೈತರು ಹಾಗೂ ಜನಪರವಾಗಿ ನೌಕರರು ಕೆಲಸ ಮಾಡಬೇಕು ಎಂದು ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.ನಗರದ ತಾಪಂ ಸಾಮರ್ಥ್ಯಸೌಧದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಹಾವೇರಿ ತಾಲೂಕಿನಲ್ಲಿ ಮನರೇಗಾ ಯೋಜನೆಯಡಿ ಎಷ್ಟು ಕಾಮಗಾರಿಗಳನ್ನು ಕೈಗೊಂಡಿದ್ದೀರಿ. ಎಷ್ಟು ರೈತರಿಗೆ ಬಾಳೆ, ತೆಂಗು, ಪೇರಲ, ಎಲೆಬಳ್ಳಿ ಬೆಳೆಯುವುದಕ್ಕೆ ಸೌಲಭ್ಯ ಕಲ್ಪಿಸಿದ್ದೀರಿ ಎಂಬುದನ್ನು ವಿವರವಾದ ಮಾಹಿತಿ ನೀಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಆಗ ಸಭೆಗೆ ಸಮರ್ಪಕ ಮಾಹಿತಿ ನೀಡುವಲ್ಲಿ ತಡವರಿಸಿದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಗರಂ ಆದರು. ಜಿಲ್ಲೆಯಲ್ಲಿ ಈ ಬಾರಿ ಕಾಲಕಾಲಕ್ಕೆ ಜೋರು ಮಳೆಯಾಗದಿದ್ದರೂ ಅಲ್ಪ ಪ್ರಮಾಣದ ಮಳೆಗೆ ಬೆಳೆಗಳು ಸಮೃದ್ಧವಾಗಿ ಬೆಳೆದಿವೆ. ಆದರೆ ಬಹುತೇಕ ರೈತರು ನೀರಾವರಿ ಸೌಲಭ್ಯವನ್ನು ಹೊಂದಿಲ್ಲ. ನೀರಾವರಿ ಬೋರ್‌ವೆಲ್‌ಗಳ ರಿಚಾರ್ಜ್‌ಗೆ ಯುಟಿಪಿ ಕಾಲುವೆ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂದರು.ಕೃಷಿ ಜತೆಗೆ ಮಿಶ್ರಬೆಳೆಯಾಗಿ ತೋಟಗಾರಿಕೆ ಬೆಳೆಯನ್ನು ಬೆಳೆದುಕೊಳ್ಳಲು ಇಲಾಖೆ ಅಧಿಕಾರಿಗಳು ಆಸಕ್ತ ರೈತರಿಗೆ ಮನರೇಗಾ ಯೋಜನೆಯಡಿ ಹಲವು ಸೌಲಭ್ಯಗಳನ್ನು ನೀಡಬೇಕು. ಬಾಳೆ, ಪೇರಲ, ತೆಂಗು, ಅಡಕೆ, ಎಲೆಬಳ್ಳಿ, ಗುಲಾಬಿ, ಡ್ರ‍್ಯಾಗನ್ ಫ್ರೂಟ್ಸ್ ಹೀಗೆ ಅನೇಕ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡಬೇಕು. ಕೃಷಿ ಬೆಳೆ ಕೈಕೊಟ್ಟಾಗ ರೈತರು ವಿಮುಖರಾಗುವ ಸಮಯದಲ್ಲಾದರೂ ತೋಟಗಾರಿಕೆ ಬೆಳೆಗಳು ರೈತರ ಕೈಹಿಡಿಯುತ್ತವೆ. ಜತೆಗೆ ತಮ್ಮ ಜಮೀನುಗಳಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಯಾವ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ರೈತರಿಗೆ ಸೌಲಭ್ಯ ಕಲ್ಪಿಸಿದ್ದೀರಿ ಎಂಬುದನ್ನು ವರದಿ ನೀಡುವಂತೆ ಅಧಿಕಾರಿಗಳಿಗೆ ಖಡಕ್ ಆಗಿ ಸೂಚಿಸಿದರು.ರೇಷ್ಮೆ ಮಾರುಕಟ್ಟೆ ಸ್ಥಳಾಂತರಕ್ಕೆ ಗರಂ: ಜಿಲ್ಲಾ ಕೇಂದ್ರ ಹಾವೇರಿಗೆ ಮಂಜೂರಾಗಿದ್ದ ರೇಷ್ಮೆ ಮಾರುಕಟ್ಟೆ ರಾಣೆಬೆನ್ನೂರ ತಾಲೂಕಿಗೆ ಹೋಗಿದ್ದಕ್ಕೆ ಅಸಮಾಧಾನ ವ್ಯಕ್ತಡಿಸಿದ ಶಾಸಕ ರುದ್ರಪ್ಪ ಲಮಾಣಿ, ರೇಷ್ಮೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಾವೇರಿಯಲ್ಲಿ ಜಾಗವಿಲ್ಲವೆಂದು ಸರ್ಕಾರಕ್ಕೆ ವರದಿ ಕೊಟ್ಟವರು ಯಾರು., ರೇಷ್ಮೆ ಮಾರುಕಟ್ಟೆ ಬಗ್ಗೆ ನನ್ನ ಬಳಿ ಬಂದು ಏಕೆ ಚರ್ಚೆ ಮಾಡಲಿಲ್ಲ ಎಂದು ಕಿಡಿಕಾರಿದ ಅವರು, ಏನ್ರೀ ನನ್ನ ಒಳ್ಳೆತನವನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ಎಚ್ಚರಿಕೆಯಿಂದ ಕೆಲಸ ಮಾಡಿ ಎಂದರು.ಗ್ಯಾರಂಟಿ ಯೋಜನೆ ಕಲ್ಪಿಸಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಳೆದ ೨೦೧೯ರಿಂದ ೨೦೨೩ರವರೆಗೆ ರೇಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದ ಅರ್ಹ ಫಲಾನುಭವಿಗಳಿಗೆ ಇತ್ತೀಚೆಗೆ ೮೦೦ಕ್ಕೂ ಅಧಿಕ ರೇಷನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಇಂತಹ ಅರ್ಹರು ಸರ್ಕಾರದ ಗ್ಯಾರಂಟಿ ಸೌಲಭ್ಯಗಳಿಂದ ವಂಚಿತರಾಗದಂತೆ ಕ್ರಮಕೈಗೊಂಡು ಎಲ್ಲರಿಗೂ ಸೌಲಭ್ಯ ಸಿಗುವಂತೆ ಮಾಡಬೇಕೆಂದು ತಿಳಿಸಿದರು.ಕಂದಾಯ ಇಲಾಖೆಯಡಿ ಅತಿವೃಷ್ಟಿ ಮಳೆಗೆ ಮನೆ ಹಾನಿ, ಬೆಳೆಹಾನಿ ಬಗ್ಗೆ ಮಾಹಿತಿ ಪಡೆದುಕೊಂಡು ಪರಿಹಾರ ವಿತರಣೆಗೆ ಕೈಗೊಂಡ ಕ್ರಮ ಬಗ್ಗೆ ಮಾಹಿತಿ ಪಡೆದರು. ಲೋಕೋಪಯೋಗಿ ಇಲಾಖೆಯಡಿ ರಸ್ತೆಗಳನ್ನು ದುರಸ್ತಿ ಹಾಗೂ ಹೊಸ ರಸ್ತೆ ನಿರ್ಮಾಣ ಮಾಡುವಂತೆ, ಕೃಷಿ ಇಲಾಖೆಯಡಿ ಬೆಳೆ ಹಾನಿ ಪರಿಹಾರ, ಹಿಂಗಾರು ಬಿತ್ತನೆಗೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುವಂತೆ, ಕುಡಿಯುವ ನೀರು ಮತ್ತು ಪಂಚಾಯತ್‌ರಾಜ ಇಲಾಖೆಯ ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವಂತೆ, ಶಿಕ್ಷಣ ಇಲಾಖೆಯಡಿ ಕೊಠಡಿಗಳ ದುರಸ್ತಿ ಹಾಗೂ ಎಲ್ಲಾ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಶ್ರೀಪಾದ ಎಸ್.ಬಿ., ತಾಪಂ ಆಡಳಿತಾಧಿಕಾರಿ ಹಾಗೂ ಡಿಡಿಪಿಐ ಸುರೇಶ ಹುಗ್ಗಿ, ಡಾ. ಮಲ್ಲಿಕಾರ್ಜುನ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಎಸ್.ವಿ. ಸಂತಿ, ತಾಪಂ ಇಒ ನವೀನ ಪ್ರಸಾದ, ತಹಸೀಲ್ದಾರ್ ಶಂಕರ ಜಿ.ಎಸ್. ಸೇರಿದಂತೆ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!