ಅಧಿಕಾರಿಗಳೇ ಎಚ್ಚರ, ಕರ್ತವ್ಯ ಲೋಪ ಕಂಡರೆ ಲೋಕಾಯುಕ್ತ ಕೇಸ್‌

KannadaprabhaNewsNetwork |  
Published : Nov 02, 2026, 04:15 AM IST
ಉಪಲೋಕಾಯುಕ್ತ ಬಿ.ವೀರಪ್ಪ ಅವರು ಸಾರಿಗೆ ಇಲಾಖೆಗೆ ಭೇಟಿ ನೀಡಿ ಪರಿಶೀಲಿಸಿದರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ಲೋಪ, ಭ್ರಷ್ಟಾಚಾರ, ಸರ್ಕಾರಿ ಅನುದಾನದ ದುರ್ಬಳಕೆ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ವಿಳಂಬ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ಲೋಪ, ಭ್ರಷ್ಟಾಚಾರ, ಸರ್ಕಾರಿ ಅನುದಾನದ ದುರ್ಬಳಕೆ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ವಿಳಂಬ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ ನೀಡಿದರು.

ನಗರದ ರಾಮತೀರ್ಥ ನಗರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಗಳು, ತಹಶೀಲ್ದಾರ್ ಕಚೇರಿ, ಕುಮಾರಸ್ವಾಮಿ ಬಡಾವಣೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮ ಪಂಚಾಯಿತಿ ಹಾಗೂ ಶಿವಾಜಿ ನಗರದ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಕಚೇರಿಗಳಿಗೆ ಶನಿವಾರ ದಿಢೀರ್ ಭೇಟಿ ನೀಡಿದ ಅವರು, ಆಡಳಿತಾತ್ಮಕ ಕಾರ್ಯವೈಖರಿ, ದಾಖಲೆಗಳು ಹಾಗೂ ಸಾರ್ವಜನಿಕರಿಗೆ ಒದಗಿಸುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.

ವಸತಿ ಶಾಲೆಗಳಲ್ಲಿ ಸೌಲಭ್ಯಗಳ ಪರಿಶೀಲನೆ:

ರಾಮತೀರ್ಥ ನಗರದ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ವಿದ್ಯಾರ್ಥಿಗಳ ಹಾಸಿಗೆ, ಹೊದಿಕೆ, ಕಟ್ಟಡಗಳ ನಿರ್ವಹಣೆ, ಸ್ವಚ್ಛತೆ, ಶೌಚಾಲಯ, ಅಡುಗೆ ಕೋಣೆ, ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ದಿನಸಿ ಸಾಮಗ್ರಿಗಳ ಸಂಗ್ರಹಣೆಯನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ನಿಗದಿತ ಮೆನುವಿನಂತೆ ಆಹಾರ ನೀಡಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ವತಃ ಅಲ್ಪಾಹಾರ ಸೇವಿಸಿ ಗುಣಮಟ್ಟ ಪರೀಕ್ಷಿಸಿದರು.

ಅಡುಗೆ ಸಿಬ್ಬಂದಿಗೆ ಮಾಸಿಕ ವೇತನವನ್ನು ಸಕಾಲದಲ್ಲಿ ಪಾವತಿಸಬೇಕು. ಮೆರಿಟ್ ಆಧಾರದ ಮೇಲೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮೂಲಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಜಿಲ್ಲೆಯ ಎಲ್ಲ ವಸತಿ ನಿಲಯಗಳಲ್ಲಿ ಲೋಕಾಯುಕ್ತ ದೂರು ಸಲ್ಲಿಕೆ ಮತ್ತು ಸಂಪರ್ಕದ ವಿವರಗಳ ಮಾಹಿತಿ ಫಲಕ ಅಳವಡಿಸಬೇಕು. ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ನಿರ್ಮಿಸದೆ ಸ್ನೇಹಪರ ವಾತಾವರಣ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಂದಾಯ ಸೇವೆಯಲ್ಲಿ ವಿಳಂಬಕ್ಕೆ ಅವಕಾಶವಿಲ್ಲ:

ಬೆಳಗಾವಿ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ ಅವರು, ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಹಾನಿಯ ಪ್ರಮಾಣದ ಆಧಾರದ ಮೇಲೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿರುವ ವಿವರಗಳನ್ನು ಒದಗಿಸುವಂತೆ ಸೂಚಿಸಿದರು.

ಕಂದಾಯ ಇಲಾಖೆಯ ಎಲ್ಲ ಸೇವೆಗಳನ್ನು ನಿಗದಿತ ಕಾಲಮಿತಿಯಲ್ಲಿ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಬೇಕು. ಭ್ರಷ್ಟಾಚಾರ ನಿರ್ಮೂಲನೆಗೆ ಅಧಿಕಾರಿಗಳು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಅಕ್ರಮ ಗಣಿಗಾರಿಕೆ ಕಂಡುಬಂದರೆ ಕಠಿಣ ಕ್ರಮ:

ಕುಮಾರಸ್ವಾಮಿ ಬಡಾವಣೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಇಲಾಖೆಯ ದಾಖಲೆಗಳನ್ನು ಪರಿಶೀಲಿಸಿದರು. ಗುತ್ತಿಗೆ ಆಧಾರದ ಮೇಲೆ 346 ಅಧಿಕೃತ ಗಣಿಗಾರಿಕೆ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಅನಧಿಕೃತ ಗಣಿಗಾರಿಕೆ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಗಣಿಗಾರಿಕೆಗೆ ಬಳಸುವ ವಾಹನಗಳನ್ನು ಕಡ್ಡಾಯವಾಗಿ ಜಿಪಿಎಸ್ ವ್ಯವಸ್ಥೆಯಡಿ ನೋಂದಾಯಿಸಬೇಕು. ಅನಧಿಕೃತ ವಾಹನಗಳ ಬಳಕೆ ಕಂಡುಬಂದರೆ ಕ್ರಮ ಜರುಗಿಸಲಾಗುವುದು. ಗಣಿಗಾರಿಕೆ ಕಾರ್ಮಿಕರಿಗೆ ಕಡ್ಡಾಯವಾಗಿ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು. ಇಲಾಖೆಯ ಸಿಬ್ಬಂದಿ ಅಕ್ರಮ ಹಣದ ವಹಿವಾಟಿನಲ್ಲಿ ತೊಡಗಿರುವುದು ಕಂಡುಬಂದರೆ ಲೋಕಾಯುಕ್ತ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಚ್ಚಂಡಿ ಗ್ರಾಪಂ ಅಧಿಕಾರಿಗಳಿಗೆ ಎಚ್ಚರಿಕೆ:

ಮುಚ್ಚಂಡಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅವರು, ಸಿಬ್ಬಂದಿ ಹಾಜರಾತಿ ಪುಸ್ತಕ, ಚಲನವಲನ ದಾಖಲೆ, ಸಾರ್ವಜನಿಕ ಅರ್ಜಿಗಳ ವಿಲೇವಾರಿ ಹಾಗೂ ಹಣಕಾಸಿನ ವಹಿವಾಟಿನ ದಾಖಲೆಗಳನ್ನು ಪರಿಶೀಲಿಸಿದರು.

ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ಹಾಜರಾತಿ ನಿರ್ವಹಿಸಬೇಕು. ಕರ್ತವ್ಯದ ಅವಧಿಯಲ್ಲಿ ಕಚೇರಿಯಲ್ಲಿ ಲಭ್ಯವಿರಬೇಕು. ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕೆಟ್ಟುಹೋಗಿರುವ ಕೊಳವೆಬಾವಿಗಳನ್ನು ತಕ್ಷಣ ದುರಸ್ತಿಗೊಳಿಸಬೇಕು. ಚರಂಡಿ ನೀರಿನ ನಿರ್ವಹಣೆಗಾಗಿ ಅಗತ್ಯವಿರುವ ಕಡೆ ಇಂಗು ಗುಂಡಿಗಳನ್ನು ನಿರ್ಮಿಸಬೇಕು ಎಂದು ಸೂಚಿಸಿದರು.

ಕಾಮಗಾರಿ ನಡೆಸದೆ ಹಣ ಬಿಡುಗಡೆ ಮಾಡುವುದು, ನಕಲಿ ದಾಖಲೆ ಸೃಷ್ಟಿಸುವುದು, ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ ಹಾಗೂ ಸರ್ಕಾರಿ ಅನುದಾನದ ದುರ್ಬಳಕೆ ಕಂಡುಬಂದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಬಾಕ್ಸ್‌....

ಆರ್‌ಟಿಒ ಕಚೇರಿಯಲ್ಲಿ ಏಜೆಂಟರು ಕಂಡುಬಂದರೆ ಅಧಿಕಾರಿಗಳೇ ಹೊಣೆ!:

ಶಿವಾಜಿ ನಗರದ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಕಚೇರಿಗೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತರು, ಸಿಬ್ಬಂದಿ ಹಾಜರಾತಿ, ವಾಹನ ನೋಂದಣಿ, ವಾಣಿಜ್ಯ ವಾಹನಗಳ ಪರವಾನಗಿ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.

ಕಚೇರಿ ಆವರಣದಲ್ಲಿ ವಾಹನ ಚಾಲನಾ ಪರವಾನಗಿ, ವಾಹನ ನೋಂದಣಿ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಏಜೆಂಟರು ಕಂಡುಬಂದರೆ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳ ವಿರುದ್ಧ ನೇರವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನನಿತ್ಯದ ಬಳಕೆಗಾಗಿ ನೋಂದಾಯಿಸಿಕೊಂಡಿರುವ ವಾಹನಗಳನ್ನು ನಿಯಮಾನುಸಾರ ಮರುನೋಂದಣಿ ಮಾಡಿಸಿಕೊಳ್ಳದಿರುವುದು ಕಂಡುಬಂದಿದೆ. ಇಂತಹ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಈವರೆಗೆ ಕ್ರಮ ಕೈಗೊಳ್ಳದಿರುವುದು ಗಂಭೀರ ವಿಚಾರವಾಗಿದೆ. ಕೂಡಲೇ ಸಾರಿಗೆ ಕಾಯ್ದೆಯಡಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ಮರುನೋಂದಣಿ ಮಾಡಿಸದ ಶಾಲಾ ವಾಹನಗಳನ್ನು ತಕ್ಷಣ ಜಪ್ತಿ ಮಾಡಬೇಕು. ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಅನಧಿಕೃತ ವಾಹನಗಳನ್ನು ಪತ್ತೆಹಚ್ಚಿ ಯಾವುದೇ ಮುಲಾಜಿಲ್ಲದೆ ಜಪ್ತಿ ಮಾಡಬೇಕು. ಸಾರ್ವಜನಿಕರ ಸುರಕ್ಷತೆ ಹಾಗೂ ಸಾರಿಗೆ ನಿಯಮಗಳ ಪಾಲನೆಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಶಿವಕುಮಾರ್, ಲೋಕಾಯುಕ್ತ ಅಧೀಕ್ಷಕ ಪ್ರಸನ್ನ ದೇಸಾಯಿ, ಉಪ ನಿಬಂಧಕ ಅರವಿಂದ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲ ಕ್ಷೇತ್ರದಲ್ಲಿ ಎಐ ಮಹತ್ವದ ಬದಲಾವಣೆ
ಜಮಖಂಡಿಯಲ್ಲಿ ಗಮನ ಸೆಳೆದ ಜಂಬೂ ಸವಾರಿ