ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಂತ್ರಜ್ಞಾನ ಸಂಸ್ಥೆ (ಕೆಎಲ್ಎಸ್ ಜಿಐಟಿ)ಯಲ್ಲಿ 10ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಎಐ ತಂತ್ರಜ್ಞಾನವನ್ನು ತಮ್ಮ ಚಿಂತನೆ ಮತ್ತು ಕಾರ್ಯವೈಖರಿಯಲ್ಲಿ ಅಳವಡಿಸಿಕೊಳ್ಳಬೇಕು. ಆದರೆ, ತಂತ್ರಜ್ಞಾನದ ಬಳಕೆಯೊಂದಿಗೆ ನೈತಿಕತೆ, ಭಾವನಾತ್ಮಕ ಮೌಲ್ಯಗಳು ಹಾಗೂ ಸಹಾನುಭೂತಿಗೂ ಆದ್ಯತೆ ನೀಡಬೇಕು. ವೈಯಕ್ತಿಕ ಸಾಧನೆಯ ಜತೆಗೆ ರಾಷ್ಟ್ರಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ಬಯೋಮೆಟ್ರಿಕ್ ಸಿಸ್ಟಮ್ಸ್ ಸಂಸ್ಥಾಪಕ ಹಾಗೂ ಸಿಇಒ ರಾಮ್ ಕುಂಚೂರ್ ಮಾತನಾಡಿ, ಕೃತಕ ಬುದ್ಧಿಮತ್ತೆಯ ಯುಗದಲ್ಲಿಯೂ ಕೋಡಿಂಗ್‌ನ ಮೂಲಭೂತ ಅಂಶಗಳ ಕುರಿತು ಗಟ್ಟಿಯಾದ ಜ್ಞಾನ ಹೊಂದಿರುವುದು ಅತ್ಯಗತ್ಯ. ತಂತ್ರಜ್ಞಾನ ಬದಲಾದರೂ ಮೂಲಭೂತ ಜ್ಞಾನದ ಮಹತ್ವ ಕಡಿಮೆಯಾಗುವುದಿಲ್ಲ. ವಿದ್ಯಾರ್ಥಿಗಳು ನಿರಂತರ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಹಾಗೂ ಬೆಂಗಳೂರಿನ ಸುಂದರಸ್ವಾಮಿ ಆ್ಯಂಡ್ ರಾಮದಾಸ್ ಅಡ್ವೊಕೇಟ್ಸ್‌ನ ಹಿರಿಯ ಪಾಲುದಾರ ಪ್ರದೀಪ್ ಎಸ್.ಸಾವ್ಕಾರ್ ಅಧ್ಯಕ್ಷೀಯ ಭಾಷಣ ಮಾಡಿದರು.
ಸಂಸ್ಥೆಯ 47 ವರ್ಷಗಳ ಶೈಕ್ಷಣಿಕ ಸಾಧನೆಯ ಪಯಣದಲ್ಲಿ ಮತ್ತೊಂದು ಮೈಲಿಗಲ್ಲಾದ ಸಮಾರಂಭವು ಗಣ್ಯರ ಮೆರವಣಿಗೆಯೊಂದಿಗೆ ಆರಂಭವಾಯಿತು. ಕರ್ನಾಟಕ ಲಾ ಸೊಸೈಟಿಯ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲ ಡಾ.ವಿಜಯ ಆಥವಲೆ ಅವರು ಕಳೆದ ವರ್ಷದ ಶೈಕ್ಷಣಿಕ ಸಾಧನೆಗಳು ಹಾಗೂ ಸಂಸ್ಥೆಯ ಪ್ರಗತಿಯ ವರದಿ ಮಂಡಿಸಿದರು. ಸಮಾರಂಭದಲ್ಲಿ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ ಶೈಕ್ಷಣಿಕ ಸಾಧನೆ ಮಾಡಿದ 42 ವಿದ್ಯಾರ್ಥಿಗಳಿಗೆ ರ್‍ಯಾಂಕ್ ಮತ್ತು ಅರ್ಹತಾ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಕೆಎಲ್ಎಸ್ ಉಪಾಧ್ಯಕ್ಷ ಆರ್.ಬಿ.ಭಂಡಾರೆ, ಡಿ.ವಿ.ಕುಲಕರ್ಣಿ, ಕಾರ್ಯದರ್ಶಿಗಳಾದ ವಿ.ಎಂ.ದೇಶಪಾಂಡೆ, ಎಸ್.ವಿ.ಗಣಾಚಾರಿ, ಕೆಎಲ್ಎಸ್ ಬೆಳಗಾವಿ ಅಧ್ಯಕ್ಷ ಎ.ಕೆ.ತಗಾರೆ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಕರ್ನಾಟಕ ಲಾ ಸೊಸೈಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.