ಮುಂಡರಗಿ:
ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಒಬ್ಬೊಬ್ಬ ಬಸವಾದಿ ಶಿವಶರಣರನ್ನು ಒಂದೊಂದು ಜಾತಿಯವರು ಸೀಮಿತಗೊಳಿಸಿಕೊಂಡಿದ್ದಾರೆ. ವಿವಿಧ ಶರಣರ ಜಯಂತಿಯಲ್ಲಿ ಆಯಾ ಸಮುದಾಯದವರು ಉಪಸ್ಥಿತರಿದ್ದು, ಕಾರ್ಯಕ್ರಮ ಆಚರಿಸುತ್ತಾರೆ. ಸಮುದಾಯದವರು ತರಾಟೆಗೆ ತೆಗೆದುಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಅಧಿಕಾರಿಗಳು ಆಗಮಿಸುತ್ತಾರೆ. ಆದರೆ ಬಸವಣ್ಣನವರನ್ನು ಲಿಂಗಾಯತರು ಸೇರಿದಂತೆ ಯಾವ ಜಾತಿಯವರೂ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಾರೆ. ಒಂದೆರಡು ಇಲಾಖೆಯವರು ಹೊರತುಪಡಿಸಿದರೆ ಉಳಿದ್ಯಾವ ಇಲಾಖೆಯವರೂ ಬಸವ ಜಯಂತಿ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ನಿಯಮದ ಪ್ರಕಾರ ತಾಲೂಕು ಇಲಾಖೆಯ ಎಲ್ಲ ಇಲಾಖೆಯವರೂ ಕಾರ್ಯಕ್ರಮಕ್ಕೆ ಬರಬೇಕು. ಬಸವ ಜಯಂತಿಗೆ ಗೈರಾದ ಎಲ್ಲ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಬೇಕು ಎಂದು ಒತ್ತಾಯಿಸಿದರು.ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ಪ್ರತಿ ವರ್ಷ ಬಸವ ಜಯಂತಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ.ಕಾರ್ಯಕ್ರಮಕ್ಕೆ ಗೈರಾದ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರೇಡ್-2 ತಹಸೀಲ್ದಾರ್ ರಾಧಾ ಕೆ. ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ಬಸವಲಿಂಗಪ್ಪ, ಬಿಸಿಎಂ ಇಲಾಖೆಯ ಶಿವಯೋಗಿ ಕಲ್ಮಠ, ಕಾಶೀನಾಥ ಶಿರಬಡಗಿ, ಶಿವಾನಂದ ಇಟಗಿ, ಧ್ರುವಕುಮಾರ ಹೂಗಾರ, ವಿ.ಜೆ. ಹಿರೇಮಠ, ಐ.ಎಸ್. ದೊಡ್ಡಮನಿ, ಜೆ.ಬಿ. ಅಮಾತಿ, ವಿನಯ್ ಗಂಧದ, ಚಂದ್ರಶೇಖರಯ್ಯ ತಂಬ್ರಳ್ಳಿ ಹಿರೇಮಠ ಉಪಸ್ಥಿತರಿದ್ದರು.