ಆಡಳಿತ ನಡೆಸಲು ಸಿಎಂ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಜನ ಗ್ಯಾರಂಟಿ ನೋಡಿ ಮತ ಹಾಕಲಿಲ್ಲ ಎಂಬ ಹತಾಶೆಯಿಂದ ತೈಲ ಬೆಲೆ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿ ಹಗಲು ದರೋಡೆ ನಡೆಸಿದ್ದಾರೆ. ಆ ಮೂಲಕ ರೈತರಿಗೆ ಕಾಂಗ್ರೆಸ್ ಸರ್ಕಾರ ಆರ್ಥಿಕ ಶಿಕ್ಷೆ ನೀಡಿದೆ
ಹಾವೇರಿ: ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ. ಆಡಳಿತ ನಡೆಸಲು ಸಿಎಂ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಜನ ಗ್ಯಾರಂಟಿ ನೋಡಿ ಮತ ಹಾಕಲಿಲ್ಲ ಎಂಬ ಹತಾಶೆಯಿಂದ ತೈಲ ಬೆಲೆ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿ ಹಗಲು ದರೋಡೆ ನಡೆಸಿದ್ದಾರೆ. ಆ ಮೂಲಕ ರೈತರಿಗೆ ಕಾಂಗ್ರೆಸ್ ಸರ್ಕಾರ ಆರ್ಥಿಕ ಶಿಕ್ಷೆ ನೀಡಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ತೈಲ ಬೆಲೆ ಏರಿಕೆ, ನೀರಾವರಿ, ಕುಡಿಯುವ ನೀರು ಪೂರೈಕೆ, ಮತ್ತಿತರ ಯೋಜನೆಗಳು ಸ್ಥಗಿತ, ಸಚಿವರಲ್ಲಿ ಅಸಮಾಧಾನ, ಮತ್ತಿತರ ಕಾರಣಗಳಿಂದ ರಾಜ್ಯ ಸರ್ಕಾರ ಅವನತಿಯತ್ತ ಸಾಗುತ್ತಿದೆ.ದಿಢೀರ್ ಆಗಿ ಇಂಧನ ಬೆಲೆ ಏರಿಕೆ ಮಾಡಿದ್ದರಿಂದ ಜನ ಕಂಗಾಲಾಗಿದ್ದಾರೆ. ಇದರ ವಿರುದ್ಧ ಸಾರ್ವಜನಿಕರೇ ಪ್ರತಿಭಟಿಸಬೇಕು ಎಂದು ಹೇಳಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ವಾಲ್ಮೀಕಿ ನಿಗಮದ ಮೂಲಕ ೧೮೭ ಕೋಟಿ ರು. ಭ್ರಷ್ಟಾಚಾರ ಮಾಡಿ ಆಂಧ್ರಪ್ರದೇಶದ ಚುನಾವಣೆಗೆ ಖರ್ಚು ಮಾಡಿದ್ದಾರೆ. ಹಣಕಾಸು ಇಲಾಖೆ ಗಮನಕ್ಕೆ ಬಾರದೇ ಹಣ ವರ್ಗಾವಣೆ ಅಸಾಧ್ಯ. ಹಾಗಾಗಿ, ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ದರ್ಶನ್ ಪ್ರಕರಣದಲ್ಲಿ ಪ್ರಭಾವ ಬೀರಲಾಗದು: ರೇಣುಕಾಸ್ವಾಮಿ ಹತ್ಯೆ ಹೇಯ ಕೃತ್ಯ. ಕಾನೂನು ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಕಾನೂನು ಎಲ್ಲರಿಗೂ ಒಂದೇ. ಒಬ್ಬ ಕಲಾವಿದನಾಗಿ ನನಗೂ ದರ್ಶನ್‌ಗೂ ಒಡನಾಟ ಇದೆ. ಸ್ನೇಹಿತನಾಗಿ ಅವರ ಬಗ್ಗೆ ಸ್ವಲ್ಪಮಟ್ಟಿಗೆ ಗೊತ್ತು. ಆದರೆ, ಅವರೊಟ್ಟಿಗೆ ಯರ‍್ಯಾರು ಇರುತ್ತಿದ್ದರು ಎಂಬುದು ಗೊತ್ತಿಲ್ಲ. ಈ ಪ್ರಕರಣದಲ್ಲಿ ರಾಜಕಾರಣಿಗಳು ಪ್ರಭಾವ ಬೀರಲು ಸಾಧ್ಯವಿಲ್ಲ. ದರ್ಶನ್‌ರನ್ನು ಬ್ಯಾನ್ ಮಾಡಲು ಆಗಲ್ಲವೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದೆ. ಈ ಬಗ್ಗೆ ಆರೋಪ ಸಾಬೀತಾದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತದೆ. ನಾನು ಕೃಷಿ ಸಚಿವನಿದ್ದಾಗ ನಟ ದರ್ಶನ್ ಕೃಷಿ ಇಲಾಖೆಯಿಂದ ರಾಯಭಾರಿ ಆಗಿದ್ದರು. ಆಗ ಅವರು ಇಂತಹ ಕೃತ್ಯ ಮಾಡಿದ ಆರೋಪ ಎದುರಿಸುತ್ತಿರಲಿಲ್ಲ ಎಂದರು.
ಶಿಗ್ಗಾಂವಿ ಟಿಕೆಟ್ ಸಮರ್ಥರಿಗೆ ಕೊಡಿಹಲವು ಕೆಲಸ ಮಾಡಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲಿಲ್ಲ. ಲೋಕಸಭೆ ಚುನಾವಣೆಯ ಆಕಾಂಕ್ಷಿಯಾಗಿದ್ದೆ. ಟಿಕೆಟ್ ಕೊಟ್ಟಿದ್ದರೆ ಗೆಲ್ಲುತ್ತಿದ್ದೆ. ಈಗ ಶಿಗ್ಗಾಂವಿಗೆ ಹೋಗಿ ಸ್ಪರ್ಧಿಸುತ್ತೇನೆ ಎಂದರೆ ಹಾಸ್ಯಾಸ್ಪದ ಆಗುತ್ತೆ. ನನಗೆ ಟಿಕೆಟ್ ಬೇಡ. ಸಮರ್ಥರಿಗೆ ಟಿಕೆಟ್ ಕೊಡಿ. ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಉತ್ತಮ. ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.
ಹಾಲಿನ ಪ್ರೋತ್ಸಾಹ ಧನ ಬಂದಿಲ್ಲ: ಒಂದು ವರ್ಷದಿಂದ ಹಾಲಿನ ಪ್ರೋತ್ಸಾಹ ಧನ ಬಿಡುಗಡೆಯಾಗಿಲ್ಲ. ಈ ನಡುವೆ ಹಾವೇರಿ ಹಾಲು ಒಕ್ಕೂಟ ಹಾಲಿನ ದರದಲ್ಲಿ ೨ ರು. ಕತ್ತರಿ ಹಾಕಿದೆ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೊದಲೇ ಬರದಿಂದ ನೊಂದವರಿಗೆ ಮತ್ತೆ ಬರೆ ಎಳೆದಂತಾಗಿದೆ ಎಂದು ಬಿ.ಸಿ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.ಸರ್ವಜ್ಞ ಪ್ರಾಧಿಕಾರಕ್ಕೆ ೨೫ ಕೋಟಿ ರು. ಅನುದಾನವನ್ನು ಬೊಮ್ಮಾಯಿ ಸರ್ಕಾರ ಘೋಷಿಸಿತ್ತು. ಅದಕ್ಕೂ ರಾಜ್ಯ ಸರ್ಕಾರ ಕೊಕ್ಕೆ ಹಾಕಿದೆ. ೩೩೫ ಕೋಟಿ ರು. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಿಂತಿದೆ. ಹಿರೇಕೆರೂರ ಕ್ಷೇತ್ರದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದಿದ್ದೇನೆ. ಮೂರು ತಿಂಗಳಲ್ಲಿ ತಾಲೂಕಿನ ನೀರಾವರಿ ಯೋಜನೆ ಪೂರ್ಣಗೊಳ್ಳದಿದ್ದರೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.