31ರಂದು ಉಡುಪಿ ಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ

KannadaprabhaNewsNetwork | Published : Dec 29, 2023 1:32 AM

ಸಾರಾಂಶ

ಪರ್ಯಾಯ ಶ್ರೀಪಾದರು ಮತ್ತು ಅಷ್ಟಮಠಗಳ ಯತಿಗಳು ತುಳಸಿ ಅರ್ಚನೆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಒಟ್ಟು 4 ಆವೃತ್ತಿಯಲ್ಲಿ ಸಾಂಪ್ರದಾಯಿಕ ಸಮವಸ್ತ್ರಧಾರಿ ಸುಮಾರು 2,500 ಮಂದಿ ವಿಪ್ರರು ತುಳಸಿ ಅರ್ಚನೆ ನಡೆಸುವರು.

ಕನ್ನಡಪ್ರಭ ವಾರ್ತೆ ಉಡುಪಿ

ತುಳು ಶಿವಳ್ಳಿ ಮಾಧ್ವ ಮಹಾಮಂಡಲ (ತುಶಿಮಾಮ) ಇದರ ಕಡಿಯಾಳಿ ಘಟಕ ನೇತೃತ್ವದಲ್ಲಿ ಉಡುಪಿ ಶ್ರೀಕೃಷ್ಣನಿಗೆ ಡಿ. 31ರಂದು ಕೋಟಿ ತುಳಸಿ ಅರ್ಚನೆ ಮಾಡಲಾಗುವುದು ಎಂದು ಮಹಾಮಂಡಲದ ಕಾರ್ಯಾಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ತಿಳಿಸಿದರು.

ಅವರು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.

ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಆಶಯದಂತೆ ತುಶಿಮಾಮ ಕಡಿಯಾಳಿ ಘಟಕ ಮತ್ತು ಉಡುಪಿ-ದ.ಕ. ಜಿಲ್ಲೆಗಳ ವಿವಿಧ ಬ್ರಾಹ್ಮಣ ಸಮುದಾಯಗಳ ಸಹಯೋಗದೊಂದಿಗೆ ಲೋಕಕಲ್ಯಾಣಾರ್ಥ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 7.30 ಗಂಟೆಗೆ ಪರ್ಯಾಯ ಶ್ರೀಪಾದರು ಮತ್ತು ಅಷ್ಟಮಠಗಳ ಯತಿಗಳು ತುಳಸಿ ಅರ್ಚನೆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ಶ್ರೀ ವಿಷ್ಣು ಸಹಸ್ರನಾಮಾವಳಿ ಪಠಣಯುಕ್ತವಾಗಿ ಒಟ್ಟು 4 ಆವೃತ್ತಿಯಲ್ಲಿ ಸಾಂಪ್ರದಾಯಿಕ ಸಮವಸ್ತ್ರಧಾರಿ ಸುಮಾರು 2,500 ಮಂದಿ ವಿಪ್ರರು ತುಳಸಿ ಅರ್ಚನೆ ನಡೆಸುವರು. ಮಹಿಳೆಯರು ಲಕ್ಷ್ಮೀಶೋಭಾನೆ ಪಠಿಸುವರು ಎಂದು ಕಲ್ಕೂರ ವಿವರಿಸಿದರು.

11.30 ವರೆಗೆ ತುಳಸಿ ಅರ್ಚನೆ ನಡೆಯಲಿದ್ದು, ಬಳಿಕ ತುಳಸಿ ಅರ್ಚನೆಯಲ್ಲಿ ಭಾಗವಹಿಸಿದವರಿಗೆ ಪ್ರಸಾದ ವಿತರಣೆ, ಶ್ರಿಗಳಿಂದ ಆಶೀರ್ವಚನ ನಡೆಯಲಿದೆ ಎಂದು ಕಾರ್ಯದರ್ಶಿ ರಾಜೇಶ ಭಟ್ ಪಣಿಪಾಡಿ ವಿವರಿಸಿದರು.

ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ತುಳಸಿಯನ್ನು ಭಕ್ತರು ಡಿ.30ರ ಸಂಜೆ 5 ಗಂಟೆಯೊಳಗೆ ಕೃಷ್ಣ ಮಠಕ್ಕೆ ತಂದೊಪ್ಪಿಸಬೇಕು ಗೌರವಾಧ್ಯಕ್ಷ ಅರವಿಂದ ಆಚಾರ್ಯ ತಿಳಿಸಿದರು.

ಈ ಹಿಂದೆ ಪಲಿಮಾರು ಪರ್ಯಾಯ ಸಂದರ್ಭದಲ್ಲಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶ್ರೀಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ ನಡೆಸಲಾಗಿತ್ತು. ಇದಿಗ ದ್ವಿತೀಯ ಬಾರಿಗೆ ಕೋಟಿ ತುಳಸಿ ಅರ್ಚನೆ ನಡೆಯಲಿದೆ.

ಸುದ್ದಿಗೋಷ್ಟಿಯಲ್ಲಿ ತುಶಿಮಾಮ ಅಧ್ಯಕ್ಷ ರವಿಪ್ರಕಾಶ ಭಟ್, ಕಡಿಯಾಳಿ ಘಟಕ ಅಧ್ಯಕ್ಷ ರಘುಪತಿ ಉಪಾಧ್ಯ, ಕೋಶಾಧಿಕಾರಿ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ, ಗೌರವ ಸಲಹೆಗಾರ ರಂಜನ್ ಕಲ್ಕೂರ, ಪಲಿಮಾರು ಮಠ ಪಿಆರ್‌ಓ ಶ್ರೀಶ ಭಟ್ ಕಡೆಕಾರ್ ಇದ್ದರು.

Share this article