ಫೆ.10ಕ್ಕೆ ಪಾರ್ವತಾಂಬ ನೂತನ ದೇಗುಲ ಲೋಕಾರ್ಪಣೆ

KannadaprabhaNewsNetwork |  
Published : Jan 31, 2025, 12:45 AM IST
30ಜಿಪಿಟಿ1ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮಸ್ಥರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮಸ್ಥರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಬೇಗೂರು ಹೋಬಳಿಯ ಹಸಗೂಲಿ ಗ್ರಾಮದಲ್ಲಿ 2 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಪಾರ್ವತಾಂಬ ನೂತನ ದೇವಸ್ಥಾನವನ್ನು ಗ್ರಾಮಸ್ಥರು ದಾನಿಗಳ ಸಹಾಯದಿಂದ ನಿರ್ಮಿಸಿದ್ದು,ಬರುವ ಫೆ.10ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಗ್ರಾಮದ ಮುಖಂಡ ಎಚ್.ಎಸ್.ಮಹೇಶ್‌ ತಿಳಿಸಿದರು.

ಗ್ರಾಮದ ನೂತನ ದೇವಸ್ಥಾನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀ ಪಾರ್ವತಾಂಬ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ, ದೇವಾಲಯದ ಕಳಸಾರೋಹಣ, ಧಾರ್ಮಿಕ ಸಮಾರಂಭ ಹಾಗೂ ದೇವಾಲಯದ ಲೋಕಾರ್ಪಣೆಗೆ ಗ್ರಾಮಸ್ಥರು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ ಎಂದರು. ಫೆ.2 ರಂದು ಪಾರ್ವತಾಂಬ ನೂತನ ಶಿಲಾ ಮೂರ್ತಿಯನ್ನು ರಥದಲ್ಲಿ ಕೂರಿಸಿ ವಿವಿಧ ಪೂಜೆಗಳನ್ನು ನೆರವೇರಿಸಿ ಕಲಾತಂಡಗಳೊಡನೆ ಗ್ರಾಮದ ಪ್ರಮುಖ ಬೀದಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಸ್ಥಳಕ್ಕೆ ಕರೆದೊಯ್ಯಲಿದ್ದಾರೆ ಎಂದರು.

ಫೆ.3 ರಂದು 9 ಕ್ಷೀರಾಧಿವಾಸ, ಫೆ.4 ರಂದು ಧಾನ್ಯಾಧಿವಾಸ, ಫೆ.5 ರಂದು ವಸ್ತ್ರಾಧಿವಾಸ, ಫೆ.6 ರಂದು ರತ್ನಾಧಿವಾಸ, ಫೆ.7 ರಂದು ಚಿತ್ರಪಟಾಧಿವಾಸ, ಫೆ.8 ರಂದು ಫಲಾಧಿವಾಸ ಹಾಗು ಫೆ.2 ರಿಂದ ಫೆ.10 ರವರೆಗೂ ದೇವಸ್ಥಾನದಲ್ಲಿ ಪ್ರತಿನಿತ್ಯ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ ಅಲ್ಲದೆ ಪ್ರತಿನಿತ್ಯ ರಾತ್ರಿ ಭಜನೆ ಕಾರ್ಯಕ್ರಮ ನಡೆಯಲಿವೆ ಎಂದರು.

ಫೆ.10 ರಂದು ಪಾರ್ವತಾಂಬ ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗುವುದು. ಬೆಳಗ್ಗೆ 10.30 ಕ್ಕೆ ಗ್ರಾಮದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರಮಹಾ ಸ್ವಾಮೀಜಿ, ಸಿದ್ದಗಂಗಾ ಮಠಾಧೀಶ ಸಿದ್ದಲಿಂಗಮಹಾ ಸ್ವಾಮೀಜಿ, ಕನಕಪುರದ ದೇಗುಲ ಮಠಾಧೀಶ ಚನ್ನಬಸವ ಸ್ವಾಮೀಜಿ, ದೇವನೂರು ಮಠಾಧೀಶ ಮಹಾಂತ ಸ್ವಾಮೀಜಿ, ಸೋಮಹಳ್ಳಿ ಮಠಾಧೀಶ ಸಿದ್ದಮಲ್ಲಸ್ವಾಮೀಜಿ, ಮಲ್ಲನಮೂಲೆ ಮಠಾಧೀಶ ಚೆನ್ನಬಸವಸ್ವಾಮೀಜಿ, ಪಡಗೂರು ಅಡವಿ ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ, ಮಾದಾಪಟ್ಟಣ ಮಠಾಧೀಶ ತೋಂಟದಾರ್ಯ ಸ್ವಾಮೀಜಿ ಸೇರಿದಂತೆ ಮೈಸೂರು,ಚಾಮರಾಜನಗರ ಜಿಲ್ಲೆಯ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದರು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್,ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ದೇವಸ್ಥಾನ ನಿರ್ಮಾಣದ ಶಿಲ್ಪಿ ಮಹೇಶ್ ಅರಸ್,ಸೋಮಶೇಖರ್ ಮತ್ತು ವಿಗ್ರಹ ಕೆತ್ತಿದ ಸುರೇಂದ್ರರನ್ನು ಸನ್ಮಾನಿಸಲಾಗುವುದು.

ಲಕ್ಷ ಜನರ ನಿರೀಕ್ಷೆ:

ಫೆ.10 ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆ ತನಕ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಬೆಳಗ್ಗೆ ಉಪಹಾರ ಮಧ್ಯಾಹ್ನ 1 ಗಂಟೆ ಬಳಿಕ ಅನ್ನಸಂತರ್ಪಣೆ ಕಾರ್ಯ ನಡೆಯಲಿದ್ದು, ಒಂದು ಲಕ್ಷ ಮಂದಿಗೆ ಊಟೋಪಚಾರ ಏರ್ಪಡಿಸಲಾಗಿದೆ ಎಂದರು. ಈ ಕಾರ್ಯಕ್ರಮಕ್ಕೆ ತಾಲೂಕಿನ ಪ್ರತಿ ಮನೆ ಮನೆಗೆ ಸುಮಾರು 75 ಸಾವಿರ ಆಹ್ವಾನ ಪತ್ರಿಕೆ ವಿತರಿಸಲಾಗಿದೆ. ಪತ್ರಿಕೆ ತಲುಪದಿದ್ದರೂ ಜಿಲ್ಲೆಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್‌, ಗೌಡಿಕೆ ಉಮೇಶ್‌, ಗ್ರಾಮಸ್ಥರಾದ ಶಂಕರಪ್ಪ, ಎಚ್.ಎಂ.ಗಂಗಾಧರಪ್ಪ, ರಾಮಣ್ಣ, ಅಶೋಕ್, ಎಚ್.ಎಸ್.ಪ್ರಭು, ಪ್ರಸಾದ್(ವಕೀಲರು), ಪ್ರಸಾದ್, ಜವರಶೆಟ್ಟಿ, ಮಾದಯ್ಯ ಇದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ