ಗದಗ: ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಪಟ್ಟಿರುವ ಪೆನ್‌ಡ್ರೈವ್ ಪ್ರಕರಣದ ತನಿಖೆಯನ್ನು ನ್ಯಾಯಾಂಗ ಉಸ್ತುವಾರಿಯಲ್ಲಿ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮೇ 13ರಂದು ಅಬಲೆಯರನ್ನು ಗೌರವಿಸೋಣ; ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ: ಹಾಸನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕೆಆರ್‌ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರನಗೌಡ ಮೂಗನೂರ ಹೇಳಿದರು.
ಸಂಸದ ಪ್ರಜ್ವಲ್ ರೇವಣ್ಣ ಸಹಾಯ ಕೇಳಿ ಬಂದ ಹೆಣ್ಣುಮಕ್ಕಳನ್ನು ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಹಣ ಮತ್ತು ಅಧಿಕಾರದ ದರ್ಪದಿಂದ ಲೈಂಗಿಕ ಶೋಷಣೆ ನಡೆಸಿದ್ದಾನೆ. ಇಲ್ಲಿ ಶೋಷಣೆಗೆ ಒಳಗಾಗಿರುವ ಹೆಣ್ಣುಮಕ್ಕಳದ್ದು ಯಾವುದೇ ತಪ್ಪಿಲ್ಲ, ಅವರು ಬಲಿಪಶುಗಳಾಗಿದ್ದಾರೆ. ಸಂತ್ರಸ್ತ ಮಹಿಳೆಯರ ಕುಟುಂಬದವರು ಸೇರಿದಂತೆ ಇಡೀ ಸಮಾಜ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.
ಅಸಹಾಯಕ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಷ್ಟೇ ಅಲ್ಲದೇ ವೀಡಿಯೋ ಮಾಡಿಕೊಂಡು ವಿಕೃತಿ ಮೆರೆದಿರುವ ಸಂಸದ ಪ್ರಜ್ವಲ್ ಗೆ ಕಠಿಣ ಶಿಕ್ಷೆ ವಿಧಿಸಬೇಕು. ಪೆನ್‌ಡ್ರೈವ್ ಪ್ರಕರಣ ಪಾರದರ್ಶಕವಾಗಿ ನಡೆಯಬೇಕಾದರೆ ರೇವಣ್ಣ ಕುಟುಂಬದ ಋಣದಲ್ಲಿದ್ದೇವೆ ಎಂದು ಭಾವಿಸಿರುವ ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಅಧಿಕಾರಿಗಳನ್ನು ಈ ಪ್ರಕರಣದ ತನಿಖೆ ಮುಗಿಯುವವರೆಗೆ ಬೇರೆಡೆಗೆ ವರ್ಗಾಯಿಸಬೇಕು. ಈ ಮೂಲಕ ಪ್ರಕರಣಕ್ಕೆ ಸಂಬಂಧಪಟ್ಟಿರುವ ಸಾಕ್ಷ್ಯಗಳನ್ನು ತಿರುಚುವ, ಬೆದರಿಸುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಆರ್‌ಎಸ್ ಪಕ್ಷವು ಏ. 27ರಂದೇ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಆದರೆ, ಅಧಿಕಾರಿಗಳು ನಮ್ಮ ದೂರನ್ನು ಗಂಭೀರವಾಗಿ ಪರಿಗಣಿಸದ ಕಾರಣ ಪ್ರಜ್ವಲ್ ರೇವಣ್ಣ ದೇಶಬಿಟ್ಟು ಪರಾರಿಯಾದ ಎಂದು ಆರೋಪಿಸಿದರು.
ಹೆಣ್ಣುಮಕ್ಕಳ ಸುರಕ್ಷತೆ, ಸಾಕ್ಷ್ಯ ನಾಶ, ಸಂತ್ರಸ್ತರಿಗೆ ಬೆದರಿಗೆ ಒಡ್ಡುವುದನ್ನು ತಪ್ಪಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅದೇ ರೀತಿ, ಅಶ್ಲೀಲ ವೀಡಿಯೋಗಳನ್ನು ಹಂಚಿಕೆ ಮಾಡಿದವರನ್ನೂ ಬಂಧಿಸಿ, ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಹಾಸನ ಚಲೋ ಹಮ್ಮಿಕೊಳ್ಳಲಾಗಿದೆ. ಗದಗ ಜಿಲ್ಲೆಯಿಂದಲೂ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಈ ವೇಳೆ ಕೆಆರ್‌ಎಸ್ ಮುಖಂಡರಾದ ನೀಲಪ್ಪ ಕಟಗಿ, ಖಾದರ್ ತೆಕ್ಕಲಕೋಟೆ, ಅನಿಲ್ ಅರಗಂಜಿ, ರಫೀಕ್ ಅಣ್ಣಿಗೇರಿ, ಕೊಟ್ರೇಶ ಮುಳಗುಂದ, ಎಸ್.ಎನ್. ಪಾಟೀಲ, ಫಾರೂಕ್ ಕಟ್ಟಿಮನಿ, ಮೌಲಾಸಾಬ್ ಪೆಂಡಾರಿ, ಖಾನ್‌ಸಾಬ್ ಇದ್ದರು.