ರಾಯಚೂರು: ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಗಣೇಶೋತ್ಸವದಲ್ಲಿ 5 ನೇ ದಿನ 150 ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ನಿಮಜ್ಜನಗೊಳಿಸಲಾಯಿತು.
ನಗರದ ವಿವಿಧ ವೃತ್ತ, ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಗಳನ್ನು 5ನೇ ದಿನದ ವಿಸರ್ಜನಾ ಪ್ರಕ್ರಿಯೆ ಭಾನುವಾರ ಸಂಜೆಯಿಂದ ಆರಂಭಗೊಂಡಿತು. ವಿವಿಧ ಗಜಾನನ ಮಂಡಳಿಗಳು ಇಡೀ ರಾತ್ರಿ ಬೃಹತ್ ಗಾತ್ರದ ಗಣೇಶ ಮೂರ್ತಿಗಳ ಮೆರವಣಿಗೆ ಕೈಗೊಂಡು ಸೋಮವಾರ ಮಧ್ಯಾಹ್ನದವರೆಗೂ ನಡೆಸಿ ನಂತರ ನಗರದ ಐತಿಹಾಸಿಕ ಖಾಸಬಾವಿಯಲ್ಲಿ ನಿಮಜ್ಜನಗೊಳಿಸಿದರು.ನಿಷೇಧದ ನಡುವೆಯೂ ಡಿಜೆ ಸದ್ದು : ಪ್ರತಿ ವರ್ಷದಂತೆ ಈ ಬಾರಿಯೂ ನಿಷೇಧದ ನಡುವೆಯೂ ಡಿಜೆ ಸದ್ದು ಜೋರಾಗಿಯೇ ಕೇಳಿಸಿತು. ನಗರದ ಪ್ರಮುಖ ವೃತ್ತ, ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ಬೃಹತ್ ಗಾತ್ರದ ಗಣೇಶ ಮೂರ್ತಿಗಳ ಐದನೇ ದಿನದ ವಿಸರ್ಜನೆಗಾಗಿ ನಡೆದ ಮೆರವಣಿಗೆಯಲ್ಲಿ ಇಡೀ ರಾತ್ರಿ ಡಿಜೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು. ಅತೀ ಹೆಚ್ಚಿನ ಪ್ರಮಾಣದ ಧ್ವನಿವರ್ಧಕಗಳ ಬಳಕೆಯಿಂದಾಗಿ ವೃದ್ಧರು, ಮಕ್ಕಳು, ಮಹಿಳೆಯರು ನಿದ್ದೆಗೆಟ್ಟರು.
ಐದನೇ ದಿನ ಗಣೇಶ ನಿಮಜ್ಜನ ಪ್ರಯುಕ್ತ ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿತ್ತು. ಪ್ರತಿ ಗಣೇಶ ಮೂರ್ತಿಯ ಮುಂದೆ ಒಬ್ಬ ಪೊಲೀಸ್ ಪೇದೆಯನ್ನು ನಿಯೋಜಿಸಲಾಗಿತ್ತು. ಅಷ್ಟೇ ಅಲ್ಲದೇ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿತ್ತು. ಆಯ್ದ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಇಡೀ ರಾತ್ರಿ ಮೆರವಣಿಗೆಯೊಂದಿಗೆ ಖಾಸಬಾವಿ ಸಮೀಪವು ಪೊಲೀಸ್ ಕಾವಲು ಹಾಕಲಾಗಿತ್ತು.ಕ್ಷುಲ್ಲಕ ಕಾರಣಕ್ಕೆ ಜಗಳ
ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಸಮಯದಲ್ಲಿ ಎರಡು ಕುಟುಂಬಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದ ಘಟನೆ ಸ್ಥಳೀಯ ವಾರ್ಡ್ ನಂ.22 ರಲ್ಲಿ ಸೋಮವಾರ ನಡೆಯಿತು.
ನಗರದ ಗದ್ವಾಲ್ ರಸ್ತೆಯಲ್ಲಿ ಬರುವ ವೀರಾಂಜನೇಯ ಗುಡಿ ಸಮೀಪ ಎರಡು ಕುಟುಂಬಸ್ಥರು ಜಗಳವಾಡುತ್ತಿದ್ದ ಸಮಯದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ತೀವ್ರ ಸ್ವರೂಪಕ್ಕೆ ತಲುಪಿತ್ತು. ಜಗಳವನ್ನು ನಿಯಂತ್ರಿಸಲು ಸ್ಥಳಕ್ಕೆ ಆಗಮಿಸಿದ್ದ ಮಾರ್ಕೇಯಾರ್ಡ್ ಪಿಎಸ್‌ಐ ಹಾಗೂ ಪೇದೆಗಳು ಲಘುಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು. ಈ ವೇಳೆ ದುಷ್ಕರ್ಮಿಗಳು ಪಿಎಸ್‌ಐ ಕಣ್ಣಿಗೆ ಖಾರದ ಪುಡಿಯನ್ನು ಎರಚಿದ್ದಾರೆ. ಬಳಿಕ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಸದ್ಯ ಎಲ್ಲೆಡೆ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.