ಒನಕೆ ಓಬವ್ವನ ಸಮಯಪ್ರಜ್ಞೆ ಎಲ್ಲರಿಗೂ ಸ್ಫೂರ್ತಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

KannadaprabhaNewsNetwork |  
Published : Nov 12, 2025, 02:30 AM IST
ಕಾರ್ಯಕ್ರಮವನ್ನ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಅಕ್ಬರಸಾಬ ಬಬರ್ಚಿ ಮಾತನಾಡಿ, ಒನಕೆ ಓಬವ್ವನ ಶೂರತನ, ಸಮಯಪ್ರಜ್ಞೆಯಂತಹ ತತ್ವಗಳನ್ನು ಎಲ್ಲ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಗದಗ: ವೀರವನಿತೆ ಒನಕೆ ಓಬವ್ವನ ಸಮಯಪ್ರಜ್ಞೆ, ಬುದ್ಧಿವಂತಿಕೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಒನಕೆ ಓಬಬ್ವ ಚಿತ್ರದುರ್ಗದ ಪಾಳೇಗಾರನಾದ ಮುದ್ದು ಹನುಮಪ್ಪನ ಹೆಂಡತಿಯಾಗಿದ್ದಳು. ಊಟ ಮಾಡಲು ಬಂದಿದ್ದ ತನ್ನ ಗಂಡನಿಗೆ ನೀರು ತರಲು ಹೋದಾಗ ಓಬವ್ವನಿಗೆ ಹೈದರಾಲಿಯ ಸೈನ್ಯವು ಚಿತ್ರದುರ್ಗದ ಮದಕರಿ ನಾಯಕರ ಕೋಟೆಯ ಕಿಂಡಿಯಿಂದ ಒಳನುಸುಳುತ್ತಿರುವುದು ಕಂಡುಬಂದಿತು. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತನ್ನ ಜಾಣ್ಮೆಯಿಂದಲೇ ಹೈದರಾಲಿಯ ಸೈನಿಕರನ್ನು ಮನೆಯಲ್ಲಿರುವ ಒನಕೆಯಿಂದ ಹೊಡೆದು ಉಪಾಯದಿಂದಲೇ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದಳು. ಕಷ್ಟ ಪರಿಸ್ಥಿತಿಯಲ್ಲಿ ನಮ್ಮಲ್ಲಿರುವ ಬುದ್ಧಿಯನ್ನು ವಿವೇಚನೆಯಿಂದ ಉಪಯೋಗಿಸಿಕೊಂಡು ಸಮರ್ಥವಾಗಿ ನಿಭಾಯಿಸುವುದು ಮುಖ್ಯವಾಗಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ಮಾತನಾಡಿ, ಒನಕೆ ಓಬವ್ವನ ಶೂರತನ, ಸಮಯಪ್ರಜ್ಞೆಯಂತಹ ತತ್ವಗಳನ್ನು ಎಲ್ಲ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.ಹುಲಕೋಟಿಯ ಜಿಸಿಟಿಎಂ ಪಪೂ ಕಾಲೇಜಿನ ಪ್ರಾ. ಡಾ. ಅರ್ಜುನ ಗೊಳಸಂಗಿ ಉಪನ್ಯಾಸ ನೀಡಿ, ಒನಕೆ ಓಬವ್ವ ದಲಿತ ಸಮುದಾಯದ ವೀರವನಿತೆಯಾಗಿದ್ದಾಳೆ. ಛಲವಾದಿ ಸಮುದಾಯದ ಪಾಳೆ ಕಾಯಕದವರಾದ ಮುದ್ದು ಹನುಮಪ್ಪನ ಹೆಂಡತಿಯೇ ಓಬವ್ವ. ಮುದ್ದು ಹನುಮಪ್ಪನು ಸ್ವಾಮಿನಿಷ್ಠೆ, ಸ್ವಾಭಿಮಾನ ಹಾಗೂ ಕಾಯಕನಿಷ್ಠೆ ಹೊಂದಿದವನು. ಓಬವ್ವ ಯಾವುದೇ ರಣತಂತ್ರ, ತರಬೇತಿಯನ್ನಾಗಲಿ, ಯುದ್ಧವಿದ್ಯೆಯನ್ನು ಕಲಿತವಳಲ್ಲ. ಆದರೂ ಹೈದರಾಲಿಯ ಸೈನ್ಯವು ವೀರ ಮದಕರಿನಾಯಕರ ಕೋಟೆಯನ್ನು ಆಕ್ರಮಿಸಿಕೊಂಡಾಗ ಉಪಾಯದಿಂದ ಯಾವುದೇ ಶಸ್ತ್ರಾಸ್ತ್ರ ಬಳಸದೇ ಮನೆಯಲ್ಲಿನ ಒನಕೆಯಿಂದ ವೈರಿಗಳನ್ನು ಸದೆಬಡೆದು ಕೋಟೆ ರಕ್ಷಿಸಿದ ಹಿರಿಮೆ ಓಬವ್ವಳದ್ದು. ಒನಕೆ ಓಬವ್ವ ಮನುಕುಲದ ಸಾಂಸ್ಕೃತಿಕ ಲೋಕದ ಧ್ರುವತಾರೆಯಾದ ಇವಳು ಇತಿಹಾಸದಲ್ಲಿ ಧೀಮಂತ ಮಹಿಳೆಯಾಗಿದ್ದಾಳೆ ಎಂದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್.ಕೆ.ಆರ್, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಡಿವೈಎಸ್‌ಪಿ ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಸನಗೌಡ್ರ ಕೊಟ್ಟೂರ, ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್., ಬುರುಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದ ಗಣ್ಯರು, ಹಿರಿಯರು ಇದ್ದರು.

ವಿರುಪಾಕ್ಷಪ್ಪ ಗೂರನವರ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಡಾ. ಬಸವರಾಜ ಬಳ್ಳಾರಿ ಸ್ವಾಗತಿಸಿ, ವಂದಿಸಿದರು. ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮ ಪ್ರಾರಂಭವಾಗುವುದಕ್ಕೂ ಮುನ್ನ ವೀರವನಿತೆ ಒನಕೆ ಓಬವ್ವ ಭಾವಚಿತ್ರದ ಮೆರವಣಿಗೆಯು ವಿವಿಧ ಕಲಾತಂಡಗಳೊಂದಿಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಹೊರಟು ನಗರದ ಜಿಲ್ಲಾಡಳಿತ ಭವನಕ್ಕೆ ಬಂದು ತಲುಪಿತು.

PREV

Recommended Stories

ಪರಪ್ಪನ ಅಗ್ರಹಾರ ಜೈಲಿಗೆ ಅಂಶು ಕುಮಾರ್‌ ಅಧೀಕ್ಷಕ
ಬಟ್ಟೆ ವ್ಯಾಪಾರ ಸೋಗಲ್ಲಿ 1 ಕೋಟಿಯ ಬುಲೆಟ್‌ ಬೈಕ್‌ ಕದ್ದ