ಮಂಗಳೂರು: ವ್ಯಕ್ತಿಯನ್ನು ಅಪಹರಿಸಿ 1.5 ಕೋಟಿ ರು. ಮೌಲ್ಯದ ಒಂದೂವರೆ ಕೆಜಿಗೂ ಅಧಿಕ ಚಿನ್ನದ ಗಟ್ಟಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಮಂಗಳೂರು ಉತ್ತರ ಠಾಣೆ ಹಾಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಕೆ.ಸಿ.ರೋಡ್ ನಿವಾಸಿ ಫಾರಿಶ್ (18), ಮುಕ್ಕಚ್ಚೇರಿಯ ಸಫ್ವಾನ್ (23), ಉಳ್ಳಾಲ ಮಾಸ್ತಿಕಟ್ಟೆಯ ಅರಾಫತ್ ಆಲಿ (18), ಉಳ್ಳಾಲದ ಫರಾಝ್ (19) ಹಾಗೂ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನನ್ನು ಬಂಧಿಸಲಾಗಿದೆ.ಸೆ.26ರಂದು ಚಾಯ್ಸ್ ಗೋಲ್ಡ್ ಹೆಸರಿನ ಚಿನ್ನಾಭರಣದ ಅಂಗಡಿಯ ಕೆಲಸಗಾರ ಮುಸ್ತಾಫ ಎಂಬವರು ಸ್ಕೂಟರ್‌ನಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದಾಗ ರಾತ್ರಿ ಸುಮಾರು 8.45ಕ್ಕೆ ನಗರದ ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಇಬ್ಬರು ಆರೋಪಿಗಳು ಸ್ಕೂಟರಲ್ಲಿ ಬಂದು ತಡೆದಿದ್ದಾರೆ. ಇದೇ ವೇಳೆ ಉಳಿದ ಆರೋಪಿಗಳು ಕಾರಿನಲ್ಲಿ ಬಂದು ಮುಸ್ತಾಫ ಅವರನ್ನು ಕಾರಿನಲ್ಲಿ ಅಪಹರಿಸಿ, ಹಲ್ಲೆ ನಡೆಸಿ ನಗರದ ಹೊರವಲಯದ ಎಕ್ಕೂರಿನಲ್ಲಿ ಇಳಿಸಿ, ಚಿನ್ನದ ಗಟ್ಟಿಯನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಾಲಕನೇ ಸೂತ್ರಧಾರ:ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನೇ ಸೂತ್ರಧಾರ. ಈತ ಮುಸ್ತಾಫ ಕೆಲಸಕ್ಕಿದ್ದ ಹಂಪನಕಟ್ಟೆಯಲ್ಲಿರುವ ಚಾಯ್ಸ್ ಗೋಲ್ಡ್ ಅಂಗಡಿಯಲ್ಲೇ ಕೆಲಸ ಮಾಡಿಕೊಂಡಿದ್ದ. ಮುಸ್ತಾಫ ಅವರು ಚಿನ್ನದ ಗಟ್ಟಿಯನ್ನು ರಾತ್ರಿ 8.30ಕ್ಕೆ ತೆಗೆದುಕೊಂಡು ಹೋಗುವ ಸಂದರ್ಭ ಅವರ ಚಲನವಲನದ ಮಾಹಿತಿಯನ್ನು ಈ ಬಾಲಕನು ಆರೋಪಿ ಫಾರಿಶ್ (ಈತನೂ ಹಿಂದೆ ಇದೇ ಅಂಗಡಿಯಲ್ಲಿ ಕೆಲಸಕ್ಕಿದ್ದ)ನಿಗೆ ನೀಡಿದ್ದಾನೆ. ಅದರಂತೆ ಎಲ್ಲ ಆರೋಪಿಗಳು ಸೇರಿ ಚಿನ್ನದ ಗಟ್ಟಿ ದರೋಡೆ ಮಾಡಲು ಸಂಚು ರೂಪಿಸಿದ್ದಾರೆ. ಆರೋಪಿ ಸಫ್ವಾನ್ ಎಂಬಾತ ಕೃತ್ಯಕ್ಕೆ ಕಾರನ್ನು ಒದಗಿಸಿದ್ದ.
ಪ್ರಕರಣದಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ. ಕಾರು ಮತ್ತು ಇತರ ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.