ಹುಟ್ಟಿದ ಮೇಲೆ ಸಾಧಕನಾಗಬೇಕು, ನಮ್ಮ ದೇಶದ ಹೆಸರನ್ನು ಬೆಳಗಿಸಬೇಕು: ಡಾ.ಡಿ.ತಿಮ್ಮಯ್ಯ

KannadaprabhaNewsNetwork |  
Published : Apr 06, 2026, 01:15 AM IST
4 | Kannada Prabha

ಸಾರಾಂಶ

ಸಮಾಜಕ್ಕೆ ಕೊಡುಗೆಯನ್ನು ನೀಡಿದ ಮಹನೀಯರಾದ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಡಾ.ಬಾಬು ಜಗಜೀವನ್ ರಾಮ್ ಮುಂತಾದವರನ್ನು ಆಧಾರವಾಗಿಟ್ಟಿಕೊಂಡು ಪ್ರಾಮಾಣಿಕವಾಗಿ, ಪರಿಶುದ್ಧ ಮನಸ್ಸಿನಿಂದ ಪ್ರತಿಯೊಬ್ಬರೂ ಸಾಧನೆ ಮಾಡಲೇಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಹುಟ್ಟಿದ ಮೇಲೆ ಸಾಧಕನಾಗಬೇಕು, ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ನಮ್ಮ ದೇಶದ ಹೆಸರನ್ನು ಬೆಳಗಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ ರಾಮ್ ಸಂಘಗಳ ಒಕ್ಕೂಟವು ಭಾನುವಾರ ಆಯೋಜಿಸಿದ್ದ ಡಾ. ಬಾಬು ಜಗಜೀವನರಾಮ್ ಅವರ 119ನೇ ಜನ್ಮ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸಮಾಜಕ್ಕೆ ಕೊಡುಗೆಯನ್ನು ನೀಡಿದ ಮಹನೀಯರಾದ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಡಾ.ಬಾಬು ಜಗಜೀವನ್ ರಾಮ್ ಮುಂತಾದವರನ್ನು ಆಧಾರವಾಗಿಟ್ಟಿಕೊಂಡು ಪ್ರಾಮಾಣಿಕವಾಗಿ, ಪರಿಶುದ್ಧ ಮನಸ್ಸಿನಿಂದ ಪ್ರತಿಯೊಬ್ಬರೂ ಸಾಧನೆ ಮಾಡಲೇಬೇಕು ಎಂದರು.

ಅಂತರ್ಜಾತಿಯ ವಿವಾಹವಾದರೆ ಕೊಲೆಗಳು ಹಾಗೂ ಹಳ್ಳಿಗಳಲ್ಲೋ ದಲಿತರನ್ನು ದೂರ ಇಡುವುದು ಹಿಂದಿನ ಕಾಲದಿಂದಲೂ ನಡೆಯುತ್ತಿತ್ತು, ಇದರ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದವರು ಬಾಬೂಜಿ ಅವರು. ಸ್ವತಂತ್ರ ಪೂರ್ವದಲ್ಲಿ ಚಳವಳಿಯನ್ನು ಮಾಡಿ ಗಾಂಧೀಜಿ ಅವರ ಬೆನ್ನೆಲುಬಾಗಿ ನಿಂತು, ದೇಶಕ್ಕೆ ಅಪಾರ ಕೊಡುಗೆ ನೀಡಿದರು. ಅವರ ಕೊಡುಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಬಾಬೂಜಿ ಅವರು ಕೂಲಿಕಾರ್ಮಿಕರಿಗಾಗಿ ಜಾರಿಗೆ ತಂದಂತಹ ಕಾಯ್ದೆಗಳು ಇಂದಿಗೂ ಜಾರಿಯಲ್ಲಿವೆ. ಇಡೀ ದೇಶಾದ್ಯಂತ ಪ್ರತಿ ಹಳ್ಳಿಗಳಿಗೂ ಅಂಚೆ ಕಚೇರಿಯನ್ನು ಕೊಡುಗೆ ನೀಡಿ, ಜನರಿಗೆ ಸಂಪರ್ಕ ಸಾಧಿಸಲು ಕಾರಣಿಕರ್ತರಾದರು. ರೈಲ್ವೆ ಮಂತ್ರಿಯಾಗಿ 10 ಲಕ್ಷ ನೌಕರರಿಗೆ ಕೆಲಸ ನೀಡುತ್ತಾರೆ. ರೈತರ ಕಷ್ಟಗಳನ್ನು ನೀಗಿಸುವುದರೊಂದಿಗೆ ಜನರಿಗೆ ಆಹಾರ ಭದ್ರತೆ ನೀಡಿ ಹಸಿರು ಕ್ರಾಂತಿಯ ಹರಿಕಾರಾದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಎಲ್ಲರೂ ಸಂಘಟಿತರಾಗಿ ಸಮಾಜಮುಖಿ ಕೆಲಸಗಳನ್ನು ಮಾಡೋಣ ಎಂದು ಕರೆ ನೀಡಿದರು.

ಶಾಸಕರಾದ ಕೆ. ಹರೀಶ್ ಗೌಡ, ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸೀಫ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಸಹಾಯಕ ನಿರ್ದೇಶಕ ಎ.ಎನ್. ಜನಾರ್ಧನ್ ಮೊದಲಾದವರು ಇದ್ದರು.

ಎಲ್ಲಾ ಕ್ಷೇತ್ರದಲ್ಲೂ ಬಾಬೂಜಿ ಕೊಡುಗೆ: ಕೆ.ಹರೀಶ್ ಗೌಡ

ಡಾ. ಬಾಬು ಜಗಜೀವನ ರಾಮ್ ಅವರು ಕೃಷಿ ಸಚಿವ, ರಕ್ಷಣಾ ಸಚಿವ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಅವರು ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಕೆ.ಹರೀಶ್ ಗೌಡ ತಿಳಿಸಿದರು.

ಶೋಷಿತ ಹಾಗೂ ದಲಿತ ವರ್ಗದವರು ಇಂದು ಸಮಾಜದಲ್ಲಿ ಸಮಾನತೆ ಹಾಗೂ ಸ್ವತಂತ್ರವಾಗಿ ಇರುವುದಕ್ಕೆ ಬಾಬೂಜಿ ಮುಖ್ಯ ಪಾತ್ರ ವಹಿಸಿದ್ದಾರೆ. ಶೋಷಿತ ಹಾಗೂ ದಲಿತ ವರ್ಗದವರಿಗೆ ಬಾಬೂಜಿ ಮಾಡಿದಂತಹ ಯೋಜನೆಗಳನ್ನು ಸಮಪರ್ಕವಾಗಿ ಅನುಷ್ಠಾನವಾಗಬೇಕು‌ ಎಂದರು.

ಶಿಕ್ಷಣಕ್ಕೆ ಪ್ರತಿಯೊಬ್ಬರೂ ಹೆಚ್ಚು ಒತ್ತು ನೀಡಬೇಕು. ಬಡವರು, ಹಿಂದುಳಿದ ಪ್ರತಿಯೊಂದು ಸ್ತರದ ಜನರು ಶಿಕ್ಷಣ ಪಡೆಯಬೇಕು. ಇಂದಿನ ದಿನಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೆಣ್ಣು ಮಕ್ಕಳು ಆಸಕ್ತಿ ತೋರುತ್ತಿದ್ದು, ಇತ್ತೀಚಿಗೆ ಗಂಡು ಮಕ್ಕಳಲ್ಲಿ ಶಿಕ್ಷಣದ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಶಿಕ್ಷಣದಿಂದ ಎಲ್ಲಾ ಸಮುದಾಯಗಳು ಇಂದು ಮುಂದುವರೆಯುತ್ತಿವೆ. ಎಲ್ಲರೂ ಉನ್ನತ ಶಿಕ್ಷಣವನ್ನು ಪಡೆದು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಆಗ ಮಾತ್ರ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಾಬೂಜಿ ಅವರು ಕಂಡಂತಹ ಕನಸು ನಿಜವಾಗಿ, ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಲು ಸಾಧ್ಯ ಎಂದರು.

ಜಯಂತಿಗಳನ್ನು ಆಚರಿಸುವ ಉದ್ದೇಶ ಮಹಾನ್ ವ್ಯಕ್ತಿಗಳು ಬಿಟ್ಟು ಹೋಗಿರುವ ಆಶಯಗಳನ್ನು ಅಳವಡಿಸಿಕೊಳ್ಳಲೆಂದು, ಅವರ ಆದರ್ಶ ಹಾಗೂ ವ್ಯಕ್ತಿತ್ವವನ್ನು ಅನುಸರಿಸಲು. ಈ ದೇಶವನ್ನು ಭವ್ಯ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕಾದರೆ ಪ್ರಜೆಗಳಾಗಿರುವ ನಾವು ಮಹಾನೀಯರ ಮಾರ್ಗದರ್ಶನವನ್ನು ಅನುಸರಿಸಿ ಅಳವಡಿಸಿಕೊಳ್ಳಬೇಕು.

- ಸಿ.ಎನ್. ಮಂಜೇಗೌಡ, ವಿಧಾನಪರಿಷತ್ ಸದಸ್ಯರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಬೂಜಿ ಭಾರತ ರಾಜಕಾರಣದಲ್ಲಿ ಪ್ರಾತಃ ಸ್ಮರಣೀಯರು
ಶೀಘ್ರ ಬಾಬು ಜಗಜೀವನರಾಮ್‌ ಭವನ ಕಾಮಗಾರಿ ಪೂರ್ಣ