- ಅಕ್ರಮ ಭೂ ಮಂಜೂರು ರದ್ದುಪಡಿಸಿ ಸರ್ಕಾರದ ಹೆಸರಲ್ಲಿ ಆರ್‌ಟಿಸಿ ಸಿದ್ಧಪಡಿಸಲಾಗಿದೆ, ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಸಂವಾದ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಳೆದ ಒಂದು ವರ್ಷ, ನಾಲ್ಕು ತಿಂಗಳ ಅವಧಿಯಲ್ಲಿ ಚಿಕ್ಕಮಗಳೂರು ಕಂದಾಯ ಉಪ ವಿಭಾಗದ ವ್ಯಾಪ್ತಿಯಲ್ಲಿ ಸುಮಾರು 270 ಪ್ರಕರಣಗಳಲ್ಲಿ ಒಂದು ಸಾವಿರ ಎಕರೆ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ನಿರ್ಗಮಿತ ಚಿಕ್ಕ ಮಗಳೂರು ಉಪ ವಿಭಾಗಾಧಿಕಾರಿ ಎಚ್.ಡಿ. ರಾಜೇಶ್ ಹೇಳಿದರು. ಚಿಕ್ಕಮಗಳೂರು ಪ್ರೆಸ್ ಕ್ಲಬ್ ಶನಿವಾರ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2019 ರ ನಂತರದಲ್ಲಿ ಭೂ ಮಂಜೂರಾತಿಯ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ, ಮೂಡಿಗೆರೆ ತಾಲೂಕು ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದ್ದರು. ಅವರು ಕೊಟ್ಟ ವರದಿ ಪ್ರಕಾರ 611 ಪ್ರಕರಣಗಳಿಗೆ ಮಂಜೂರಾತಿ ನೀಡಲಾಗಿದೆ. ಇವುಗಳಲ್ಲಿ ಅಂಗನ ವಾಡಿ, ಶಾಲಾ ಕಟ್ಟಡ, ಆಸ್ಪತ್ರೆ ಕಟ್ಟಡ ನಿರ್ಮಾಣ ಸೇರಿದಂತೆ ಸರ್ಕಾರಿ ಉದ್ದೇಶಕ್ಕೆ ಮಂಜೂರು ಮಾಡಿರು ವುದನ್ನು ಹೊರತುಪಡಿಸಿ ಖಾಸಗಿಯವರಿಗೆ ಅಕ್ರಮವಾಗಿ ಮಂಜೂರಾತಿ ನೀಡಿರುವ 270 ಪ್ರಕರಣಗಳು ಬೆಳಕಿಗೆ ಬಂದಿತು. ನಿಯಮಬದ್ಧವಾಗಿ ಜಮೀನು ವಶಕ್ಕೆ ಪಡೆದು ಪಹಣಿ ಕೂಡ ಸರ್ಕಾರದ ಹೆಸರಿನಲ್ಲಿ ಸಿದ್ಧಪಡಿಸಲಾಗಿದೆ ಎಂದರು.ಸಾರಗೋಡು ನಿರಾಶ್ರಿತರಿಗೆ ಭೂಮಿ ಗುರುತಿಸಿದ್ದು, ಮುಂದಿನ ದಿನಗಳಲ್ಲಿ ಪುರ್ನವಸತಿ ಕಲ್ಪಿಸುವ ಕಾರ್ಯ ಪೂರ್ಣ ಗೊಳ್ಳಲಿದೆ. ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕಾರದಲ್ಲಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿದ ಸಂತೃಪ್ತಿ ತಮ್ಮಗಿದೆ ಎಂದು ಹೇಳಿದರು.ಅರಣ್ಯಭೂಮಿ ಒತ್ತುವರಿ ತೆರವಿನಿಂದ ಮೂಡಿಗೆರೆ ತಾಲೂಕು ಸಾರಗೋಡು ಗ್ರಾಮದ 18 ಕುಟುಂಬಗಳು ನಿರಾಶ್ರಿತ ರಾಗಿದ್ದರು. ಸರ್ಕಾರಿ ಭೂಮಿ ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಪ್ರಯತ್ನ ಹಿಂದಿನಿಂದಲೂ ನಡೆಯುತ್ತಿತ್ತು. ಇದಕ್ಕಾಗಿ ವಿಶೇಷ ತಂಡ ರಚಿಸಿ ಜಮೀನು ಗುರುತಿಸಲಾಗಿದೆ. ಅವರಿಗೆ ಜಮೀನು ಹಸ್ತಾಂತರಿಸುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ ಎಂದರು. ಕಳೆದ ಒಂದೂವರೆ ವರ್ಷ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಸಾರಗೋಡು ನಿರಾಶ್ರಿತರಿಗೆ ಪುರ್ನವಸತಿ ಕಲ್ಪಿಸಿದ ಆತ್ಮತೃಪ್ತಿ ಇದೆ ಎಂದ ಅವರು, ಅತಿವೃಷ್ಟಿಯಿಂದ ಮನೆ ಜಮೀನು ಕಳೆದುಕೊಂಡ ಕಳಸ ತಾಲೂಕಿನ ಮಲೆಮನೆ, ಮಧುಗುಂಡಿ, ಮೇಗೂರು ಗ್ರಾಮದ 10 ರಿಂದ 12 ಕುಟುಂಬಗಳಿಗೆ ಜಮೀನು ಗುರುತಿಸ ಲಾಗಿದೆ. ಈ ಎರಡು ಕಾರ್ಯಗಳು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವ ಕೆಲಸಗಳಾಗಿವೆ ಎಂದು ಹೇಳಿದರು. ಚಿಕ್ಕಮಗಳೂರು ಉಪ ವಿಭಾಗದಲ್ಲಿ ರಸ್ತೆ ಸಮಸ್ಯೆಗಳು ಇವೆ. ರಸ್ತೆಗೆ ಅಡ್ಡಿಪಡಿಸುವುದು ಸರಿಯಲ್ಲ, ನಕಾಶೆ ಕಂಡ ರಸ್ತೆ, ಬಂಡಿ ರಸ್ತೆ, ಕಾಲುರಸ್ತೆಗಳಿಗೆ ಬೇಲಿ ಹಾಕುವಂತಿಲ್ಲ. ಇದು ಕಾನೂನು ಬಾಹಿರವಾಗುತ್ತದೆ. ರಸ್ತೆಗೆ ತಡೆಯೊಡ್ಡಿದ ನಾಲ್ಕು ಪ್ರಕರಣಗಳಲ್ಲಿ ಸರ್ಕಾರದಿಂದ ಮಂಜೂರಾಗಿದ್ದ ಭೂಮಿಯನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಮತ್ತು ಅರಣ್ಯ ಭೂಮಿ, ಡೀಮ್ಡ್ ಫಾರೆಸ್ಟ್ ಸಮಸ್ಯೆ ಇದೆ. ನಾನು ಮೊದಲು ಉಪ ವಿಭಾಗಾಧಿಕಾರಿಯಾಗಿ ಇಲ್ಲಿಗೆ ಬಂದಾಗ ಇದೊಂದು ಚಾಲೆಂಜಿಂಗ್ ಆಗಿತ್ತು. ಜಂಟಿ ಸರ್ವೇ ಕಾರ್ಯ ಕೆಲವು ಕಡೆ ಗಳಲ್ಲಿ ಆಗಿದೆ. ಕೆಲವು ಕಡೆಗಳಲ್ಲಿ ಆಗುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ಆಗ ಬೇಕಿದೆ. ಸರ್ಕಾರ ಜಂಟಿ ಸರ್ವೇ ಕಾರ್ಯಕ್ಕೆ ಮುಂದಾಗಿದ್ದು, ಕಂದಾಯ ಮತ್ತು ಅರಣ್ಯ ಭೂಮಿ, ಡೀಮ್ಡ್ ಫಾರೆಸ್ಟ್ ಸಮಸ್ಯೆ ಇತ್ಯರ್ಥವಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆರ್.ತಾರಾನಾಥ್ ಉಪಸ್ಥಿತರಿದ್ದರು. 6 ಕೆಸಿಕೆಎಂ 3 6 ಕೆಸಿಕೆಎಂ 3