ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನಾದ್ಯಂತ ಶುಕ್ರವಾರ ಸಹ ಗಾಳಿ ಮಳೆಯ ರುದ್ರನರ್ತನ ಮುಂದುವರಿದಿದ್ದು, ಜನಜೀವನ ಸ್ತಬ್ಧಗೊಂಡಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಮಂಗಳೂರು-ಬೆಂಗಳೂರು ನಡುವಿನ ಸಂಚಾರಕ್ಕೆ ಮುಂಜಾನೆ ಆರರಿಂದ ಸಂಜೆ ಆರರವರಗೆ ಮಾತ್ರ ಅವಕಾಶ ಕಲ್ಪಿಸಿದ್ದು ಸಂಜೆ ಆರರಿಂದ ಶಿರಾಡಿಘಾಟ್‌ನಲ್ಲಿ ಸಂಚಾರ ನಿಷೇಧಿಸಲಾಗಿದೆ.ಗುರುವಾರ ಸಂಜೆಯಿಂದ ಮಳೆಗಿಂತ ಗಾಳಿಯ ವೇಗ ಹೆಚ್ಚಿದ್ದು ಈಗಾಗಲೇ ಒಂದೂವರೆ ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ಭೂಮಿ ಶೀತಗೊಂಡಿದ್ದು, ಸದ್ಯ ಬೀಸುತ್ತಿರುವ ಆಷಾಢದ ಗಾಳಿಗೆ ಸಾಕಷ್ಟು ಮರಗಳು ಧರಾಶಾಹಿಯಾಗಿವೆ. ರಾಷ್ಟಿಯ ಹೆದ್ದಾರಿ 75 ರಲ್ಲಿ ಶುಕ್ರವಾರ ಸಹ ಸಾಕಷ್ಟು ಭೂಕುಸಿತ ಸಂಭವಿಸಿದೆ. ವಿಪರೀತ ಗಾಳಿಗೆ ಸಾಕಷ್ಟು ಮರಗಳು ಉರುಳಿರುವುದರಿಂದ ಸೆಸ್ಕಾಂ ಸಿಬ್ಬಂದಿ ಮಳೆಯ ನಡುವೆ ಕೆಲಸ ನಿರ್ವಹಿಸುತ್ತಿದ್ದರು.
ಮತ್ತಷ್ಟು ಗ್ರಾಮಗಳು ಕತ್ತಲಲ್ಲಿ ಮಳುಗಿದ್ದು ಸದ್ಯ ಹಾನಿಗೊಂಡಿರುವ ವಿದ್ಯುತ್ ಲೈನ್ ದುರಸ್ತಿಗೆ ಕನಿಷ್ಠ 8 ದಿನಗಳ ಅವಕಾಶ ಬೇಕು ಎನ್ನಲಾಗುತ್ತಿದೆ. ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಇನ್ನೊಂದು ಅಡಿ ನದಿ ನೀರು ಹೆಚ್ಚಾದಲ್ಲಿ ಪಟ್ಟಣದ ಹೊಳೆಮಲ್ಲೇಶ್ವರಸ್ವಾಮಿಗೆ ಜಲಾಭಿಷೇಕವಾಗಲಿದೆ. ನದಿ ನೀರಿನ ಮಟ್ಟ ಗಂಟೆಗಂಟೆಗೂ ಹೆಚ್ಚಾಗುತ್ತಿರುವುದರಿಂದ ಪಟ್ಟಣದ ಅಜಾದ್ ರಸ್ತೆಯ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಗಿದೆ. ಸದ್ಯ ನದಿಯಲ್ಲಿ ೧೦ ಅಡಿಯಷ್ಟು ನೀರು ಹರಿಯುತ್ತಿದೆ. ತಾಲೂಕಿನ ಇನ್ನುಳಿದ 7 ಉಪನದಿಗಳು ಸಹ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಹಲವೇಡೆ ಭತ್ತದ ಗದ್ದೆಗಳಿಗೂ ನದಿ ನೀರು ವಿಸ್ತರಿಸಿದೆ.ಬಾಗಿನ ಅರ್ಪಣೆ:
ತುಂಬಿ ಹರಿಯುತ್ತಿರುವ ಹೇಮಾವತಿ ನದಿಗೆ ಶಾಸಕ ಸೀಮೆಂಟ್ ಮಂಜು ದಂಪತಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು ಈ ವೇಳೆ ತಹಸೀಲ್ದಾರ್ ಮೇಘನಾ, ಇಒ ರಾಮಕೃಷ್ಣ ಸೇರಿದಂತೆ ಹಲವರು ಸಾಥ್ ನೀಡಿದರು.ಶಾಸಕರ ಭೇಟಿ:
ನಿರಂತರ ಭೂಕುಸಿತ ಸಂಭವಿಸುತ್ತಿರುವ ರಾಷ್ಟಿಯಹೆದ್ದಾರಿ 75ರ ದೋಣಿಗಾಲ್ ಗ್ರಾಮದಿಂದ ದೊಡ್ಡತಪ್ಪಲೆ ಗ್ರಾಮದವರಗಿನ ಅವ್ಯವಸ್ಥೆಯನ್ನು ಶಾಸಕ ಸಿಮೆಂಟ್ ಮಂಜು ವೀಕ್ಷಣೆ ನಡೆಸಿ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಚತುಷ್ಪಥ ರಸ್ತೆ ಕಾಮಗಾರಿ ಹೊಣೆ ಹೊತ್ತಿರುವ ರಾಜ್‌ಕಮಲ್ ಗುತ್ತಿಗೆದಾರ ಕಂಪನಿಯ ಅಧಿಕಾರಿಗಳು ಅಪಾಯಕಾರಿ ಪ್ರದೇಶದಲ್ಲೆ ಠಿಕಾಣಿ ಹೊಡಿ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಗುರುವಾರ ಸಂಜೆ ಆರು ಗಂಟೆ ವೇಳೆಯಲ್ಲಿ ಶಿರಾಡಿಘಾಟ್ ಮಾರ್ಗದಲ್ಲಿ ಸಂಜೆ 7ರ ನಂತರ ವಾಹನ ಸಂಚಾರಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಸ್ಥಳೀಯ ಅಧಿಕಾರಿಗಳು ಜಿಲ್ಲಾಧಿಕಾರಿ ಅದೇಶವನ್ನು ಚಾಚುತಪ್ಪದೆ ಪಾಲಿಸಿದ ಪರಿಣಾಮ, ಜಿಲ್ಲಾಧಿಕಾರಿ ಆದೇಶ ತಿಳಿಯದೆ ಈ ಮಾರ್ಗದಲ್ಲಿ ಬಂದ ಸಾಕಷ್ಟು ವಾಹನ ಸವಾರರು ರಾತ್ರಿ ಇಡಿ ಹೆದ್ದಾರಿಯಲ್ಲೆ ಕಳೆಯುವಂತಾಗಿತ್ತು. ಗುರುವಾರ ಮುಸ್ಸಂಜೆಯಿಂದ ಶುಕ್ರವಾರ ಮುಂಜಾನೆಯವರೆಗೆ ರಾಷ್ಟಿಯ ಹೆದ್ದಾರಿ ಎರಡು ಬದಿ ಬೃಹತ್ ವಾಹನಗಳು ಹಾಗೂ ಲಘುವಾಹನಗಳ ಹತ್ತಾರು ಕಿ.ಮಿ ಸರತಿ ಸಾಲಿನಲ್ಲಿ ನಿಲುಗಡೆಯಾಗುವಂತಾಗಿತ್ತು. ಜಿಲ್ಲಾಧಿಕಾರಿಗಳ ತತ್‌ಕ್ಷಣದ ನಿರ್ಧಾರದಿಂದ ಕುಟುಂಬ ಸಹಿತ ಹೆದ್ದಾರಿಯಲ್ಲೆ ರಾತ್ರಿ ಕಳೆಯುವಂತಾಗಿತ್ತು.
27 ಮನೆಗೆ ಹಾನಿ:ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನಲ್ಲಿ 27 ಮನೆಗಳು ಹಾನಿಗೊಂಡಿವೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದ್ದಾರೆ.