3.20 ಲಕ್ಷ ಕಾರ್ಮಿಕರಿಗೆ ಕೇವಲ 7500 ಮಂದಿ ನೋಂದಣಿ

KannadaprabhaNewsNetwork |  
Published : Feb 17, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪಿಎಂ ಶ್ರಮಯೋಗಿ ಮಾನ್‌ಧನ್ ಯೋಜನೆ ಸಭೆಯಲ್ಲಿ ಎಡಿಸಿ ಕುಮಾರಸ್ವಾಮಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯಲ್ಲಿ ಅಸಂಘಟಿತ ವಲಯದಲ್ಲಿ ಸುಮಾರು 3.20 ಲಕ್ಷ ಕಾರ್ಮಿಕರಿದ್ದುಇದುವರೆಗೂ ಪಿಎಂ ಶ್ರಮಯೋಗಿ ಮಾನ್‌ಧನ್ ಯೋಜನೆಯಡಿ ಕೇವಲ 7500 ಕಾರ್ಮಿಕರು ನೊಂದಾಯಿಸಿಕೊಂಡಿರುವುದಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಪಿಎಂ ಶ್ರಮಯೋಗಿ ಮಾನ್‌ಧನ್ ಯೋಜನೆ ಅನುಷ್ಠಾನ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಸಂಘಟಿತ ವಲಯದ ಕಾರ್ಮಿಕರಿಗೆ ನಿಶ್ಚಿತ ಪಿಂಚಣಿ ದೊರೆಯುವ ಈಯೋಜನೆಗೆ ಜಿಲ್ಲೆಯ ಹೆಚ್ಚಿನ ಕಾರ್ಮಿಕರನ್ನು ನೋಂದಾಯಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

18 ರಿಂದ 40 ವರ್ಷ ವಯೋಮಿತಿಯೊಳಗಿನ ಅಸಂಘಟಿತ ವಲಯದ ಕಾರ್ಮಿಕರು ಈ ಯೋಜನೆಯಡಿ ನೊಂದಾಯಿಸಲು ಅರ್ಹರಿದ್ದು, ಇಂತಹ ದುಡಿಮೆಯ ವರ್ಗ ತಮ್ಮ ಜೀವನ ಸಂಧ್ಯಾಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಯಾವುದೇ ಆರ್ಥಿಕ ಮೂಲ ಹೊಂದಿರುವುದಿಲ್ಲ. ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆಯನ್ನು ಪಿಎಂ ಶ್ರಮಯೋಗಿ ಮಾನ್‌ಧನ್ ಯೋಜನೆ ನೀಡಲಿದೆ. ಜಿಲ್ಲೆಯಲ್ಲಿ ಅಂಗನವಾಡಿಗಳ 5000 ಕ್ಕಿಂತ ಹೆಚ್ಚಿನ ಸಿಬ್ಬಂದಿ, 1380 ಆಶಾ ಕಾರ್ಯಕರ್ತೆಯರು, 4800 ರಷ್ಟು ನೇಕಾರರು, 4138 ಬಿಸಿಯೂಟ ತಯಾರಿ ಸಿಬ್ಬಂದಿಗಳು, 2650 ಮೀನುಗಾರರು, ನೀರುಗಂಟಿಗಳು, ಹಮಾಲರು, ಸ್ವಚ್ಛತೆಗಾರರು ಹೀಗೆ ಸಾವಿರಾರು ಸಂಖ್ಯೆಯಲ್ಲಿರುವ ಸಿಬ್ಬಂದಿಗಳು ಜಿಲ್ಲೆಯಲ್ಲಿದ್ದು, ಇವರೆಲ್ಲರನ್ನೂ ಕೂಡ ಈ ಯೋಜನೆಯ ವ್ಯಾಪ್ತಿಗೆ ತರಲು ಆಯಾ ಇಲಾಖಾ ಅಧಿಕಾರಿಗಳು ಶ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿಬ್ಬಂದಿ, ಹಮಾಲಿಗಳು, ಚಮ್ಮಾರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಕಟ್ಟಡ, ಬೀಡಿ, ಕೈಮಗ್ಗ, ಚರ್ಮೋದ್ಯಮ, ಇಟ್ಟಿಗೆಭಟ್ಟಿ, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಅಲ್ಲದೆ ಇದೇ ರೀತಿಯ ಇತರೆ ವೃತ್ತಿಯಲ್ಲಿ ದುಡಿಯುವ ವರ್ಗದವರೆಲ್ಲರೂ ಈ ಯೋಜನೆ ವ್ಯಾಪ್ತಿಗೆ ಸೇರಲು ಅರ್ಹರಿದ್ದಾರೆ. ಮಾಸಿಕ ಆದಾಯ 15 ಸಾವಿರ ರು ಗಿಂತ ಕಡಿಮೆ ಇರಬೇಕು. ಆದಾಯ ತೆರಿಗೆ, ಇಎಸ್‌ಐ, ಪಿಎಫ್, ಎನ್‌ಪಿಎಸ್ ಯೋಜನೆಗೆ ಒಳಪಟ್ಟಿರಬಾರದು. ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು. ಇಂತಹ ಎಲ್ಲ ಕಾರ್ಮಿಕರು ನೊಂದಣಿಗೆ ಅರ್ಹರಿದ್ದಾರೆ ಎಂದು ಕಾರ್ಮಿಕ ಅಧಿಕಾರಿ ಅನಿಲ್ ಕುಮಾರ್ ಬಗಟೆ ತಿಳಿಸಿದರು.

16 ರಿಂದ 40 ವರ್ಷದೊಳಗಿನ ವಯೋಮಿತಿಯ ಆಧಾರದಲ್ಲಿ ಮಾಸಿಕ ವಂತಿಗೆಯನ್ನು ನಿಗದಿಪಡಿಸಿದ್ದು, ಇದಕ್ಕೆ ಸಮಾನಾಂತರವಾಗಿ ಕೇಂದ್ರ ಸರ್ಕಾರ ಕೂಡ ವಂತಿಗೆಯನ್ನು ಪಾವತಿಸಲಿದೆ. 60 ವರ್ಷ ವಯಸ್ಸಿನವರೆಗೂ ಪ್ರತಿ ಮಾಹೆ ಪಾವತಿಸಬೇಕಿದ್ದು, 60 ವರ್ಷ ಬಳಿಕ ಪ್ರತಿ ತಿಂಗಳು ರು. 3000 ಗಳ ನಿಶ್ಚಿತ ಪಿಂಚಣಿಯನ್ನು ಕಾರ್ಮಿಕರು ಪಡೆಯಲಿದ್ದಾರೆ. ಹೀಗಾಗಿ ವಂತಿಗೆ ಪಾವತಿಯನ್ನು ಪ್ರತಿ ತಿಂಗಳು ಕಾರ್ಮಿಕರ ಬ್ಯಾಂಕ್ ಖಾತೆಯಿಂದ ಸ್ವಯಂ ಚಾಲಿತವಾಗಿ ಪಾವತಿಯಾಗುವ ರೀತಿ ವ್ಯವಸ್ಥೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಕಾರ್ಮಿಕ ನಿರೀಕ್ಷಕರುಗಳು, ಆರೋಗ್ಯ, ಕಾರ್ಮಿಕ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಸಮಾಜ ಕಲ್ಯಾಣ, ನಗರಾಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಆಟೋರಿಕ್ಷಾ ಚಾಲಕರ ಸಂಘ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಬಾರಿ ಉತ್ತಮ ಮಳೆ, ಕೆರೆ ಭರ್ತಿ: ಮುಳ್ಳುಗದ್ದುಗೆ ಕಾರ್ಣಿಕ
ಡಬ್ಬಿ ಮೆಣಸಿನಕಾಯಿ ಕ್ವಿಂಟಾಲ್‌ಗೆ 90 ಸಾವಿರ ರು. ದಾಖಲೆಯ ದರ!