ಗೃಹಜ್ಯೋತಿ ಸಮೀಕ್ಷೆಗೆ ಮೂರೇ ದಿನ ಬಾಕಿ!

KannadaprabhaNewsNetwork |  
Published : Oct 29, 2026, 02:00 AM IST
ಹೆಸ್ಕಾಂ ಕಚೇರಿ. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಪರಿಷ್ಕರಣೆಗೆ ಅ.31 ಅಂತಿಮ ದಿನವಾಗಿದ್ದು ಈ ವರೆಗೆ ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಯಲ್ಲಿ ಶೇ.98.13ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಪರಿಷ್ಕರಣೆಗೆ ಅ.31 ಅಂತಿಮ ದಿನವಾಗಿದ್ದು ಈ ವರೆಗೆ ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಯಲ್ಲಿ ಶೇ.98.13ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಉಳಿದ ಫಲಾನುಭವಿಗಳು ಅಂತಿಮ ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ತಮ್ಮ ಉಪವಿಭಾಗ ಕಚೇರಿಗೆ ಭೇಟಿ ನೀಡುವಂತೆ ಹೆಸ್ಕಾಂ ತಿಳಿಸಿದೆ.

ಹೆಸ್ಕಾಂ ವ್ಯಾಪ್ತಿಯಲ್ಲಿ ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಉತ್ತರಕನ್ನಡ ಸೇರಿ 7 ಜಿಲ್ಲೆಗಳು ಬರಲಿದ್ದು ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಯೋಜನೆಗಳ ಫಲಾನುಭವಿಗಳು ಸೇರಿದಂತೆ ಒಟ್ಟು 34,65,585 ಗ್ರಾಹಕರು ಗೃಹಜ್ಯೋತಿ ಯೋಜನೆಯ ವ್ಯಾಪ್ತಿಯಲ್ಲಿದ್ದಾರೆ.

ಅ. 15ರ ವೇಳೆಗೆ 33,70,406 ಗ್ರಾಹಕರ ಸಮೀಕ್ಷೆ ಪೂರ್ಣಗೊಂಡಿದ್ದು, ಶೇ. 98.13ರಷ್ಟು ಪ್ರಗತಿ ಸಾಧಿಸಲಾಗಿದೆ. 95,179 ಮನೆ ಸೇರಿ ಮನೆಗೆ ಬೀಗ ಹಾಕಿರುವುದು, ಮನೆ ಖಾಲಿ ಇರುವುದು, ದಾಖಲೆ ಸರಿಹೊಂದದಿರುವುದು ಹಾಗೂ ಇತರ ಕಾರಣಗಳಿಂದ ಸುಮಾರು 2.95 ಲಕ್ಷ ಗ್ರಾಹಕರ ಸಮೀಕ್ಷೆ ಪೂರ್ಣಗೊಳ್ಳಬೇಕಿದೆ. ಬಾಕಿ ಉಳಿದಿರುವವರ ದಾಖಲೆ ಪರಿಶೀಲನೆ ಈಗ ಹೆಸ್ಕಾಂಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯಿಂದ ಹೊರಗುಳಿದ ಗ್ರಾಹಕರಿಗೆ ಕಚೇರಿಯಲ್ಲೇ ದಾಖಲೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

3 ಬಾರಿ ಭೇಟಿ, ಮೊಬೈಲ್‌ ಸಂದೇಶ:

ಸಮೀಕ್ಷೆಗಾಗಿ ಹೆಸ್ಕಾಂ ಸಿಬ್ಬಂದಿ ಬೀಗ ಹಾಕಿರುವ ಹಾಗೂ ಖಾಲಿ ಮನೆಗಳಿಗೆ ಈಗಾಗಲೇ ಮೂರು ಬಾರಿ ಭೇಟಿ ನೀಡಿದ್ದಾರೆ. ಸಂಬಂಧಪಟ್ಟ ಗ್ರಾಹಕರ ಮೊಬೈಲ್‌ಗಳಿಗೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಸಂದೇಶ ಕಳುಹಿಸಲಾಗಿದೆ. ಆದರೂ ಸಮೀಕ್ಷೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹೆಸ್ಕಾಂ ಮನವಿ ಮೇರೆಗೆ ರಾಜ್ಯ ಸರ್ಕಾರ ಅ. 31ರ ವರೆಗೆ ಕಾಲಾವಕಾಶ ನೀಡಿದೆ. ಇದೀಗ ಆ ಗಡುವು ಮುಕ್ತಾಯದ ಹಂತಕ್ಕೆ ಬಂದಿದೆ.

ಗ್ರಾಹಕರು ಏನು ಮಾಡಬೇಕು?:

ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದವರು ಕೊನೆಯ ದಿನದ ವರೆಗೆ ಕಾಯದೆ, ತಮ್ಮ ಹತ್ತಿರದ ಹೆಸ್ಕಾಂ ಉಪವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಅಗತ್ಯ ದಾಖಲೆ ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಿಕೊಳ್ಳಬೇಕು. ಸಲ್ಲಿಸಬೇಕಾದ ದಾಖಲೆಗಳ ಕುರಿತು ಸಂಬಂಧಪಟ್ಟ ಹೆಸ್ಕಾಂ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು.

ಗೃಹಜ್ಯೋತಿ ಫಲಾನುಭವಿಗಳು ದಾಖಲೆ ಪರಿಶೀಲನೆಗೆ ನೀಡಿರುವ ಅಂತಿಮ ಅವಕಾಶ ಬಳಸಿಕೊಳ್ಳುವುದು ಅಗತ್ಯ. ಅ. 31ರೊಳಗೆ ಕ್ರಮಕೈಗೊಳ್ಳುವ ಮೂಲಕ ಕೊನೆಯ ಕ್ಷಣದ ಗೊಂದಲ ತಪ್ಪಿಸಿಕೊಳ್ಳಬಹುದಾಗಿದೆ.ಗೃಹಜ್ಯೋತಿ ಯೋಜನೆಯ ಸಮೀಕ್ಷೆಗೆ ಅ. 31 ಕೊನೆಯ ದಿನವಾಗಿದ್ದು ವಿಸ್ತರಣೆ ಕುರಿತು ಸರ್ಕಾರದಿಂದ ಸದ್ಯಕ್ಕೆ ಯಾವುದೇ ಮಾಹಿತಿ ಬಂದಿಲ್ಲ. ಈಗಾಗಲೇ ಶೇ. 98ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ಉಳಿದ ಫಲಾನುಭವಿಗಳು ಗಡುವಿನೊಳಗೆ ದಾಖಲೆ ಸಲ್ಲಿಸಬೇಕು. ತಪ್ಪಿದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು.

ಹೇಮಂತ ಎನ್., ವ್ಯವಸ್ಥಾಪಕ ನಿರ್ದೇಶಕರು, ಹೆಸ್ಕಾಂ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್
ಕಸ ವಿಲೇ ವಿಚಾರಕ್ಕೆ ಹಲ್ಲೆ: ಕೇಸ್‌ ರದ್ದತಿಗೆ ಹೈಕೋರ್ಟ್ ನಿರಾಕರಣೆ