ಕನ್ನಡಪ್ರಭ ವಾರ್ತೆ ಬೆಂಗಳೂರು:ವಿಧಾನ ಪರಿಷತ್‌ನ 4 ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್‌ನ ಮೈತ್ರಿಕೂಟದ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಾಂತ ಬುಧವಾರ ಬಿಜೆಪಿಯಿಂದ ಸಿಹಿ ಹಂಚಿ, ಪಟಾಕಿ ಸಿಡಿಸಿ, ಸಂಭ್ರಮಾಚರಣೆ ಮಾಡಲಾಯಿತು.
ದಾವಣಗರೆಯಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ಪಟಾಕಿ ಸಿಡಿಸಿ, ಪರಸ್ಪರರಿಗೆ ಸಿಹಿ ತಿನ್ನಿಸುವ ಮೂಲಕ ಅದ್ಧೂರಿಯಾಗಿ ವಿಜಯೋತ್ಸವ ಆಚರಿಸಲಾಯಿತು. ಕೆ.ಬಿ.ಬಡಾವಣೆಯ ಬಿಜೆಪಿ ಜಿಲ್ಲಾ ಕಚೇರಿ ಮುಂಭಾಗದಲ್ಲಿ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಬಿಜೆಪಿ-ಜೆಡಿಎಸ್ ಪಕ್ಷದ ಎನ್‌ಡಿಎ ಮೈತ್ರಿಕೂಟವು ನಾಲ್ಕೂ ಕ್ಷೇತ್ರಗಳಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಯಘೋಷ ಮೊಳಗಿಸುವ ಮೂಲಕ ಸಂಭ್ರಮಿಸಿದರು.
ಶಿವಮೊಗ್ಗದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಾಲಯದ ಮುಂಭಾಗ ಬಿಜೆಪಿ ನಗರ ಗ್ರಾಮಾಂತರ ಮತ್ತು ಜಿಲ್ಲಾಮಟ್ಟದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಚಿಕ್ಕಮಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಆಜಾದ್ ಪಾರ್ಕ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಬಳಿಕ ಮಾತನಾಡಿದ ಸಿ.ಟಿ. ರವಿ ಅವರು, ವಿಧಾನ ಪರಿಷತ್‌ನ 4 ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಒಳಗೊಂಡ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ರಾಜ್ಯದ ಮುಂದಿನ ರಾಜಕಾರಣದ ದಿಕ್ಸೂಚಿಯಾಗಿದೆ. 2028ರ ವಿಧಾನಸಭೆ ಚುನಾವಣೆಗೆ ಮತದಾರರು ಈಗಲೇ ಸಂದೇಶ ನೀಡಿದ್ದಾರೆ ಎಂದು ಹೇಳಿದರು.ಇನ್ನು ಹುಬ್ಬಳ್ಳಿಯ ಬಿಜೆಪಿಯ ಕಚೇರಿಯಲ್ಲಿ ಶಾಸಕ ಅರವಿಂದ ಬೆಲ್ಲದ್, ಶಾಸಕ ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಕಾರ್ಯಕರ್ತರು ಸಂಸತ ಪಟ್ಟರು. ಬೆಳಗಾವಿಯಲ್ಲಿ ಮಾಜಿ ಸಚಿವ ಅಶ್ವತ್ ನಾರಾಯಣ್ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.