ನರ ಹಂತಕ ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಆರಂಭ

KannadaprabhaNewsNetwork |  
Published : Nov 26, 2023, 01:15 AM IST
ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದ ದಿಣ್ಣೇಕೆರೆಗೆ ಶನಿವಾರ ಬಂದಿರುವ ಸಾಕಾನೆಗಳು.  | Kannada Prabha

ಸಾರಾಂಶ

ನರ ಹಂತಕ ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಆರಂಭ ದಿಣ್ಣೇಕೆರೆ ಆನೆ ಶಿಬಿರಕ್ಕೆ ಎಲ್ಲಾ ಸಾಕಾನೆಗಳು

6 ಆನೆಗಳು, 50 ಸಿಬ್ಬಂದಿಗಳು ಭಾಗಿ, ಮೂಡಿಗೆರೆ ತಾಲೂಕಿನ ದಿಣ್ಣೇಕೆರೆಯಿಂದ ಶುರು,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯ ಮೂಡಿಗೆರೆ ತಾಲೂಕಿನ ಭೈರಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ 3 ಕಾಡಾನೆ ಹಿಡಿಯಲು ಶನಿವಾರ ಕಾರ್ಯಾಚರಣೆ ಆರಂಭಗೊಂಡಿತು. ಶಿವಮೊಗ್ಗದ ಸಕ್ರೆಬೈಲಿನಿಂದ 3, ನಾಗರಹೊಳೆ, ಬಂಡಿಪುರ ಹಾಗೂ ಬಿಳಿಗಿರಿ ರಂಗನ ಬೆಟ್ಟದಿಂದ ತಲಾ ಒಂದರಂತೆ ಒಟ್ಟು 6 ಸಾಕಾನೆಗಳನ್ನು ಕರೆಸಿಕೊಳ್ಳಲಾಗಿದ್ದು, ಶನಿವಾರ ಬೆಳಗಿನ ವೇಳೆಗೆ ಮೂಡಿಗೆರೆ ವಲಯದ ದೇವರುಂದ ಶಾಖೆಯ ಬೈದುವಳ್ಳಿ ಗ್ರಾಮದ ದಿಣ್ಣೇಕೆರೆ ಆನೆ ಶಿಬಿರಕ್ಕೆ ಎಲ್ಲಾ ಸಾಕಾನೆಗಳು ಬಂದು ತಲುಪಿದವು. ಭೈರಾಪುರದ ಸುತ್ತಮುತ್ತ ಕೆಲವು ವರ್ಷಗಳಿಂದ ಓಡಾಡುತ್ತಿರುವ 3 ಕಾಡಾನೆಗಳನ್ನು ಹಿಡಿಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)ಗಳು ಆದೇಶ ಹೊರಡುತ್ತಿದ್ದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆ ನಡೆಸಿ ತುರ್ತಾಗಿ 50 ಮಂದಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಾರ್ಯಾಚರಣೆ ಸ್ಥಳಕ್ಕೆ ನಿಯೋಜನೆ ಮಾಡಿದ್ದಾರೆ. ಮೊದಲ ಹಂತದಲ್ಲಿ ಕಾಡಾನೆಗಳ ಓಡಾಡಿರುವ ಪ್ರದೇಶ ಗುರುತಿಸಲು 2 ತಂಡಗಳು ಕಾರ್ಯನಿರ್ವಹಣೆ ಮಾಡಲಿವೆ. ಆನೆಗಳ ಸಂಚಾರ ಇರುವ ಪ್ರದೇಶಗಳ ಸಾರ್ವಜನಿಕರ ಸುರಕ್ಷತೆ, ಸಾಕಾನೆಗಳು ಹಾಗೂ ಸಿಬ್ಬಂದಿಗೆ ಬೇಕಾದ ಆಹಾರ ಮತ್ತು ಇತರೆ ಸಾಮಾಗ್ರಿಗಳನ್ನು ಒದಗಿಸಲು 5 ತಂಡಗಳನ್ನು ರಚನೆ ಮಾಡಲಾಗಿದೆ. ಈ ಎಲ್ಲಾ 7 ತಂಡಗಳು ಶನಿವಾರ ದಿಂದಲೇ ಕಾರ್ಯ ನಿರ್ವಹಿಸುತ್ತಿವೆ. ಸಿಸಿಎಫ್‌ ಯು.ಪಿ. ಸಿಂಗ್, ಚಿಕ್ಕಮಗಳೂರು ವಿಭಾಗದ ಡಿಎಫ್‌ಒ ರಮೇಶ್‌ಬಾಬು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. -- ಬಾಕ್ಸ್ --

ಆರು ಗಂಡಾನೆಗಳು

ಈ ಹಿಂದೆ ಕಾಡಾನೆಗಳನ್ನು ಸೆರೆ ಹಿಡಿಯಲು ಗಂಡಾನೆಗಳ ಜತೆಗೆ ಹೆಣ್ಣಾನೆಗಳು ಕೂಡ ಬಳಕೆ ಮಾಡಲಾಗುತ್ತಿತ್ತು. ಆದರೆ, ಹಲವು ಕಾರ್ಯಾಚರಣೆಗಳು ವಿಫಲವಾಗಿದೆ. ಆದರೆ, ಈ ಬಾರಿ ಕರೆಸಿಕೊಂಡಿರುವ 6 ಆನೆಗಳು ಗಂಡಾನೆಗಳು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವಿಭಾಗದಿಂದ ಮಹೇಂದ್ರ, ಬಂಡಿಪುರದಿಂದ ಜಯಪ್ರಕಾಶ್, ಬಿಳಿಗಿರಿ ರಂಗನಬೆಟ್ಟದಿಂದ ಗಜೇಂದ್ರ ಹಾಗೂ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್‌ನ ಸೋಮಣ್ಣ, ಬಹದ್ದೂರ್, ಬಾಲಯ್ಯ ಎಂಬ ಸಾಕಾನೆಗಳು ಕರೆಸಿಕೊಳ್ಳಲಾಗಿದೆ. ಮೂಡಿಗೆರೆ ವಲಯ ವ್ಯಾಪ್ತಿಯ ಉರುಬಗೆ, ಗೌಡಹಳ್ಳಿ, ಭೈರಾಪುರ, ಹೊಸಕೆರೆ, ಮೇಕನಗದ್ದೆ ಭಾಗದಲ್ಲಿ ಕೆಲವು ವರ್ಷಗಳಿಂದ ಬೀಡು ಬಿಟ್ಟಿರುವ 3 ಕಾಡಾನೆಗಳು ಸಾರ್ವಜನಿಕರಿಗೆ ಆಗಾಗ ತೊಂದರೆ ನೀಡುವ ಜತೆಗೆ ಪ್ರಾಣಕ್ಕೆ ಕುತ್ತು ತಂದಿವೆ. ನ. 22 ರಂದು ಕಾರ್ತಿಕ್ ಎಂಬುವವರು ಆನೆ ತುಳಿತದಿಂದ ಮೃತಪಟ್ಟಿದ್ದರು. ಈ ಸಂಬಂಧ ಈ ಆನೆಗಳನ್ನು ಹಿಡಿದು ಬೇರೆಡೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಅನುಮತಿ ನೀಡುವಂತೆ ಚಿಕ್ಕಮಗಳೂರು ಡಿಎಫ್‌ಒ ರಮೇಶ್ ಬಾಬು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದ ಮೇರೆಗೆ ಶುಕ್ರವಾರ ಒಪ್ಪಿಗೆ ನೀಡಲಾಗಿತ್ತು. ಕೂಡಲೇ ಅರಣ್ಯ ಇಲಾಖೆ ಕಾರ್ಯ ಪ್ರವೃತ್ತವಾಗಿದ್ದು, 6 ಸಾಕಾನೆಗಳನ್ನು ತರಿಸಿಕೊಂಡು ದಿಣ್ಣೇಕೆರೆಯಿಂದ ಕಾರ್ಯಾ ಚರಣೆ ಆರಂಭಿಸಿದ್ದಾರೆ. ----

ಪೋಟೋ ಫೈಲ್ ನೇಮ್ 25 ಕೆಸಿಕೆಎಂ 2- 3ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದ ದಿಣ್ಣೇಕೆರೆಗೆ ಶನಿವಾರ ಬಂದಿರುವ ಸಾಕಾನೆಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀರಂಗನಾಥಸ್ವಾಮಿ ದೇಗುಲದಲ್ಲಿ ಸೌಕರ್ಯ ಕೊರತೆ
ಯುವಜನರನ್ನು ಸೆಳೆಯುವ ಶಕ್ತಿ ಕುವೆಂಪು ಸಾಹಿತ್ಯಕ್ಕಿದೆ: ತೇಜಸ್ವಿ