ಶ್ರೀರಂಗನಾಥ ದೇವಾಲಯ ಬಳಿಯ ಸುತ್ತಲೂ ಕಸ ತ್ಯಾಜ್ಯಗಳ ನಿರ್ವಹಣೆ ಇಲ್ಲದೆ ಬರುವ ಭಕ್ತರಿಗೆ ಕಸದ ಗುಡ್ಡೆಗಳ ದರ್ಶನವಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ. ಪಾಚಿಗಟ್ಟಿರುವ ನಲ್ಲಿಗಳಿಂದ ಗಬ್ಬು ವಾಸನೆ ಬರುತ್ತಿದೆ. ಅದನ್ನು ಸರಿಪಡಿಸಿ ತ್ಯಾಜ್ಯ ನಿರ್ವಹಣೆ ಮಾಡುವುದರಲ್ಲಿ ದೇವಾಲಯ ಆಡಳಿತ ಮಂಡಳಿ ವಿಫಲವಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪ್ರಸಿದ್ಧ ಶ್ರೀರಂಗನಾಥ ದೇವಾಲಯಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರು, ಭಕ್ತರು ಸರತಿ ಸಾಲಿಗೆ ಮೇಲ್ಛಾವಣಿ, ನೆಲಕ್ಕೆ ಪಾದಚಾರಿ ಮ್ಯಾಟ್ ಸೇರಿದಂತೆ ಮೂಲ ಸೌಕರ್ಯಗಳಿಲ್ಲದೆ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಚಂದನ್ ಆರೋಪಿಸಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಶ್ರೀರಂಗನಾಥ ದೇವಾಲಯ ಬಳಿಯ ಸುತ್ತಲೂ ಕಸ ತ್ಯಾಜ್ಯಗಳ ನಿರ್ವಹಣೆ ಇಲ್ಲದೆ ಬರುವ ಭಕ್ತರಿಗೆ ಕಸದ ಗುಡ್ಡೆಗಳ ದರ್ಶನವಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ. ಪಾಚಿಗಟ್ಟಿರುವ ನಲ್ಲಿಗಳಿಂದ ಗಬ್ಬು ವಾಸನೆ ಬರುತ್ತಿದೆ. ಅದನ್ನು ಸರಿಪಡಿಸಿ ತ್ಯಾಜ್ಯ ನಿರ್ವಹಣೆ ಮಾಡುವುದರಲ್ಲಿ ದೇವಾಲಯ ಆಡಳಿತ ಮಂಡಳಿ ವಿಫಲವಾಗಿದೆ ಎಂದು ದೂರಿದರು.

ದೇವಾಲಯಕ್ಕೆ ಬರುವ ಭಕ್ತರು ಸರತಿ ಸಾಲಿನಲ್ಲಿ ನಿಲ್ಲಲು ಬಿಸಿಲಿನಲ್ಲೇ ಬ್ಯಾರಿಕೇಡ್ ಹಾಕಲಾಗಿದೆ. ಇದರಿಂದ ಬಿಸಿಲಿನ ಝಳಕ್ಕೆ ಕಾಲಿಡಲಾಗದೆ ಭಕ್ತರು ಪರದಾಡುವಂತಾಗಿದೆ. ಕೂಡಲೆ ಬಿಸಿಲಿನಿಂದ ತಡೆಯಲು ಕನಿಷ್ಠ ನೆಲಕ್ಕೆ ಪಾದಚಾರಿ ಮ್ಯಾಟ್ ಹಾಕಿಸುವಂತೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಉಮಾ ಅವರಿಗೆ ಮನವಿ ಮಾಡಿದರು.

ದಾಸೋಹ ವಿಳಂಬ:

ತಿಂಗಳ ಹಿಂದೆ ಶ್ರೀರಂಗನಾಥ ಸ್ವಾಮಿ ದೇವಾಲಯಕ್ಕೆ ಬಂದ ಭಕ್ತರಿಗೆ ಅನ್ನ ದಾಸೋಹ ಆರಂಭಿಸಿರುವುದಾಗಿ ಆಡಳಿತ ಮಂಡಳಿ ಮಾದ್ಯಮಗಳ ಮೂಲಕ ತಿಳಿಸಿದ್ದಾರೆ. ಆದರೆ, ದೇವಾಲಯದ ಪ್ರಸಾದವನ್ನು ಜೊನ್ನೆಯಲ್ಲಿ ನೀಡಿ ದಾಸೋಹ ಎಂದು ಭಕ್ತರಿಗೆ ಕೊಡಲಾಗುತ್ತಿದೆ. ಭಕ್ತರು ದಾಸೋಹ ಎಲ್ಲಿ ಎಂದು ಕೇಳುವ ಪರಿಸ್ಥಿತಿ ಇದೆ. ಕೂಡಲೇ ಒಂದು ಜಾಗ ನಿಗದಿ ಮಾಡಿ ಅನ್ನ ದಾಸೋಹವನ್ನು ಭಕ್ತರಿಗೆ ನೀಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಈ ವೇಳೆ ಹಿಂದು ಜಾಗರಣಾ ವೇದಿಕೆಯ ಇತರ ಕಾರ್ಯಕರ್ತರು ಹಾಜರಿದ್ದರು.