ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಇಂದಿರಾನಗರ, ವಿಜಯನಗರ, ಮಲ್ಲೇಶ್ವರಂ ಸೇರಿದಂತೆ ಕೇಂದ್ರ ಪಾಲಿಕೆ ಹಾಗೂ ಪಶ್ಚಿಮ ಪಾಲಿಕೆ ವ್ಯಾಪ್ತಿಗಳಲ್ಲಿ ಹಲವು ಮರಗಳು ಧರೆಗೆ ಉರುಳಿದ್ದು, ಪಾಲಿಕೆ ಸಿಬ್ಬಂದಿ ಹಾಗೂ ಖಾಸಗಿ ತಂಡಗಳು ಕ್ರೇನ್ ಮೂಲಕ ಮರ ಕತ್ತರಿಸಿ ಪಕ್ಕಕ್ಕೆ ಸರಿಸುವ ಕಾರ್ಯ ಮಾಡುತ್ತಿವೆ.ಸುಮಾರು 157 ಬೃಹದಾಕಾರದ ಮರಗಳು ಮುರಿದು ಬಿದ್ದಿದ್ದು, ಅವುಗಳನ್ನು ಕತ್ತರಿಸಿ ತೆಗೆಯುವುದು ನಿಧಾನಗತಿಯಲ್ಲಿ ನಡೆಯುತ್ತಿದೆ.
ಒಂದು ವೇಳೆ ಕತ್ತರಿಸಿದ ತುಂಡು ಮನೆ ಮೇಲೆ ಬಿದ್ದರೆ ಅಲ್ಲಿಯೂ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಅವುಗಳನ್ನು ಹಗ್ಗ ಹಾಗೂ ಸರಪಳಿಗಳ ಮೂಲಕ ಕಟ್ಟಿ ತೆಗೆಯಲಾಗುತ್ತಿದೆ. ಮೊದಲ ಹಂತದಲ್ಲಿ 157 ಮರಗಳನ್ನು ಟ್ರಾಕ್ಟರ್, ಟಿಪ್ಪರ್ ಹಾಗೂ ಲಾರಿಗಳಲ್ಲಿ ಸಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅರಣ್ಯ ವಿಭಾಗದ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.ಶನಿವಾರ ಬೆಳಿಗ್ಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಮರಗಳು ಉರುಳಿಬಿದ್ದ ಸ್ಥಳಗಳಿಗೆ ಭೇಟಿ ನೀಡಿ ಕೂಡಲೆ ಅವುಗಳನ್ನು ಸ್ಥಳದಿಂದ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.