ಪಿಎಂ ವಿಶ್ವಕರ್ಮ ಸಾಲ ಮೇಳದಲ್ಲಿ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ಪಿ.ಪ್ರವೀಣ್ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಪಿಎಂ ವಿಶ್ವಕರ್ಮ ಸಾಲ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ಕಸುಬುಗಳಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯ ಪ್ರತಿಯೊಂದು ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಜುಲೈ 14 ರಿಂದ 24 ರವರೆಗೆ 10 ದಿನಗಳ ಕಾಲ ವಿಶೇಷ ಸಾಲ ಸಂಪರ್ಕ ಶಿಬಿರ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ ಸುಮಾರು 5,400ಕ್ಕೂ ಹೆಚ್ಚು ನಾಗರಿಕರು ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಸಲ್ಲಿಸಿದ ನಂತರ ಅರ್ಜಿದಾರರು ಸಂಬಂಧಪಟ್ಟ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡದ ಕಾರಣ ಅಥವಾ ಬ್ಯಾಂಕ್ ಅಧಿಕಾರಿಗಳಿಗೆ ಸಂಪರ್ಕಕ್ಕೆ ಸಿಗದ ಕಾರಣ ತಾಂತ್ರಿಕವಾಗಿ ಸಾಲದ ಅರ್ಜಿಗಳು ತಿರಸ್ಕೃತಗೊಂಡಿದ್ದವು. ಇಂತಹ ಅರ್ಜಿಗಳನ್ನು ಪುನಃ ಸಕ್ರಿಯಗೊಳಿಸಲು ಈ ವಿಶೇಷ ಸಾಲ ಮೇಳ ಆಯೋಜಿಸಲಾಗಿದೆ. ಪಿಎಂ ವಿಶ್ವಕರ್ಮ ಯೋಜನೆಯಡಿ ಈ ಹಿಂದೆ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿರುವ ಅರ್ಹ ವಿಶ್ವಕರ್ಮ ಫಲಾನುಭವಿಗಳಿಗೆ ಬ್ಯಾಂಕ್‍ನ ಕಾಲ್ ಸೆಂಟರ್ ಮೂಲಕ ದೂರವಾಣಿ ಕರೆ ಮಾಡಿ ಮಾಹಿತಿ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು ತಮ್ಮ ಆಧಾರ್‌ಕಾರ್ಡ್, ಫ್ಯಾನ್‌ಕಾರ್ಡ್ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ಈ ಶಿಬಿರಕ್ಕೆ ಭೇಟಿ ನೀಡಬೇಕು. ಬ್ಯಾಂಕ್ ವ್ಯವಸ್ಥಾಪಕರನ್ನು ಭೇಟಿಯಾಗಿ ಅಗತ್ಯ ಫಾರಂಗಳನ್ನು ಸಲ್ಲಿಸುವ ಮೂಲಕ ಯೋಜನೆಯಡಿ ಸಿಗುವ ಸಾಲ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಎಂಎಸ್‍ಎಂಇ ಡಿಎಫ್‍ಒ ಸಂಜೀವ್ ಕುಮಾರ್ ಗುಪ್ತ ಮಾತನಾಡಿ, ಕಮ್ಮಾರರು, ಚಿನ್ನದ ಕೆಲಸ ಮಾಡುವವರು, ಮಾಲೆಗಾರರು ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತರಬೇತಿ ಪಡೆದ ಅರ್ಹ ಫಲಾನುಭವಿಗಳಿಗೆ ತಮ್ಮದೇ ಆದ ಸ್ವಂತ ಉದ್ಯಮ ಪ್ರಾರಂಭಿಸಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಈ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು. ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಮಂಜೂರಾತಿ ಆದೇಶ ಪತ್ರ ನೀಡಲಾಯಿತು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಂಜುನಾಥಸ್ವಾಮಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಜಗನ್ನಾಥ್, ಚಿತ್ರದುರ್ಗ ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಎಂ.ರಾಘವೇಂದ್ರ ಇದ್ದರು.