ನಮ್ಮ ಪಕ್ಷದ ಅಭ್ಯರ್ಥಿಗಳು ಬಿಜೆಪಿ ಅಥವಾ ಜೆಡಿಎಸ್ ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮತಯಾಚನೆ ಮಾಡಿರಲಿಲ್ಲ. ವಿಪಕ್ಷಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮತ್ತು ನಾಯಕತ್ವದ ವೈಫಲ್ಯದಿಂದ ಆ ಪಕ್ಷಗಳ ಶಾಸಕರು ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆ.ಈ ಫಲಿತಾಂಶದಿಂದ ಬಿಜೆಪಿ- ಜೆಡಿಎಸ್ ಮೈತ್ರಿ ನಾಯಕರಿಗೆ ತೀವ್ರ ಮುಖಭಂಗವಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿನ ನಾಯಕತ್ವದ ಬಗ್ಗೆ ಬೇಸರದಿಂದಾಗಿ ಆ ಪಕ್ಷದ ಶಾಸಕರು ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಯಕತ್ವದ ಬಗ್ಗೆ ವಿರೋಧ ಪಕ್ಷದ ಶಾಸಕರಿಗೆ ಗೊತ್ತಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಆ ಪಕ್ಷಗಳ ಹಲವು ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ನಮ್ಮ ಪಕ್ಷದ ಅಭ್ಯರ್ಥಿಗಳು ಬಿಜೆಪಿ ಅಥವಾ ಜೆಡಿಎಸ್ ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮತಯಾಚನೆ ಮಾಡಿರಲಿಲ್ಲ.
ವಿಪಕ್ಷಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮತ್ತು ನಾಯಕತ್ವದ ವೈಫಲ್ಯದಿಂದ ಆ ಪಕ್ಷಗಳ ಶಾಸಕರು ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆ.ಈ ಫಲಿತಾಂಶದಿಂದ ಬಿಜೆಪಿ- ಜೆಡಿಎಸ್ ಮೈತ್ರಿ ನಾಯಕರಿಗೆ ತೀವ್ರ ಮುಖಭಂಗವಾಗಿದೆ ಎಂದು ಟೀಕಿಸಿದರು.
ನಮ್ಮ ಅಭ್ಯರ್ಥಿಗಳು ಯಾವುದೇ ರೀತಿಯ ಆಸೆ- ಆಮಿಷಗಳನ್ನೂ ಒಡ್ಡಿರಲಿಲ್ಲ. ಸಂಪೂರ್ಣ ಗೌಪ್ಯ ಮತದಾನದ ಮೂಲಕವೇ ಈ ಚುನಾವಣೆ ನಡೆದಿದೆ. ಆದರೂ ವಿಪಕ್ಷಗಳ ಶಾಸಕರು ಕಾಂಗ್ರೆಸ್ ಪರ ಮತ ಚಲಾಯಿಸಿದ್ದು, ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐದೂ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ ಎಂದರು.
ಬಿಜೆಪಿಯಲ್ಲಿ ಈಗ ಗುಂಪು ರಾಜಕಾರಣ ಮಿತಿ ಮೀರಿದೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕಾರ್ಯವೈಖರಿ, ನಾಯಕತ್ವದ ವಿರುದ್ಧ ಹಲವು ಶಾಸಕರಲ್ಲಿ ತೀವ್ರ ಅಸಮಾಧಾನವಿರುವುದು ಬಹಿರಂಗ ಸತ್ಯ. ರಾಜಕೀಯದಲ್ಲಿ ಯಾರೂ ಒಂದೇ ಪಕ್ಷಕ್ಕೆ ಅಂಟಿಕೊಳ್ಳುವುದಿಲ್ಲ. ತಮ್ಮ ಉಜ್ವಲ ರಾಜಕೀಯ ಭವಿಷ್ಯಕ್ಕಾಗಿ ಶೀಘ್ರ ಹಲವರು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬರಲಿದ್ದಾರೆ ಹೇಳಿದರು.
ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವುದೇ ಪಕ್ಷದ ಶಾಸಕರ ಬಗ್ಗೆ ತಾರತಮ್ಯ ಮಾಡದೆ ಎಲ್ಲ ಕ್ಷೇತ್ರಗಳಿಗೂ ಸಮಾನವಾಗಿ ಅಭಿವೃದ್ಧಿ ಅನುದಾನ ನೀಡುತ್ತಾ ಅತ್ಯುತ್ತಮ ಆಡಳಿತ ನೀಡುತ್ತಿದ್ದಾರೆ. ಸರ್ಕಾರದ ಜನಪರ ಆಡಳಿತವನ್ನು ಮೆಚ್ಚಿ ನಮ್ಮ ಪಕ್ಷಕ್ಕೆ ಯಾರೇ ಬಂದರೂ ಅವರನ್ನು ಮುಕ್ತವಾಗಿ ಸ್ವಾಗತಿಸಲಾಗುವುದು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.