ತುಮಕೂರು ಜಿಲ್ಲೆಯನ್ನು "ಬೆಂಗಳೂರು ಉತ್ತರ " ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ತುಮಕೂರಿನ ಪ್ರಗತಿಪರ, ಸಂಘಟನೆಗಳ ಸಭೆ ವಿರೋಧ ವ್ಯಕ್ತಪಡಿಸಿತು.
ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ಜಿಲ್ಲೆಯನ್ನು "ಬೆಂಗಳೂರು ಉತ್ತರ " ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ತುಮಕೂರಿನ ಪ್ರಗತಿಪರ, ಸಂಘಟನೆಗಳ ಸಭೆ ವಿರೋಧ ವ್ಯಕ್ತಪಡಿಸಿತು. ತುಮಕೂರಿನ ಜನಚಳುವಳಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮುಖಂಡರು, ತುಮಕೂರು ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಭೌಗೋಳಿಕ ಅಸ್ತಿತ್ವವನ್ನು ಅಳಿಸಿ ಹಾಕುವ ಯಾವುದೇ ಪ್ರಯತ್ನವನ್ನು ಜಿಲ್ಲೆಯ ಜನತೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಜಿಲ್ಲೆಯ ಅಭಿವೃದ್ಧಿಯ ಹೆಸರಿನಲ್ಲಿ ಭೂ ಮಾಫಿಯಾ ಮತ್ತು ರಿಯಲ್ ಎಸ್ಟೇಟ್ ಲಾಬಿಗಳ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ಈ ಹೆಸರು ಬದಲಾವಣೆಯ ಪ್ರಸ್ತಾವನೆ ಮುಂದಿಡಲಾಗಿದೆ ಎಂದು ಆರೋಪಿಸಿದರು. ತುಮಕೂರು ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ವಿಶ್ವ ಮನ್ನಣೆ ಗೋಳಿಸಬೇಕೆಂದು ಸಭೆಯು ಒತ್ತಾಯಿಸಿತು. ತುಮಕೂರು ಜಿಲ್ಲೆಯ ಭೂಮಿ, ನೀರು, ಪರಿಸರ, ರೈತರ ಬದುಕು ಮತ್ತು ಯುವಕರ ಉದ್ಯೋಗದ ಪ್ರಶ್ನೆಗಳನ್ನು ಬದಿಗಿಟ್ಟು ಕೇವಲ ಹೆಸರು ಬದಲಾವಣೆ ಮಾಡುವ ಮೂಲಕ ಅಭಿವೃದ್ಧಿಯ ಭ್ರಮೆ ಸೃಷ್ಟಿಸಲು ಸರ್ಕಾರ ಹೊರಟಿದೆ. ಇದು ಜಿಲ್ಲೆಯ ಜನರ ನಿಜವಾದ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯುವ ಯತ್ನ ಎಂದು ಸಭೆ ಅಭಿಪ್ರಾಯಪಟ್ಟಿತು.ಸಭೆಯಲ್ಲಿ ಮಾತನಾಡಿದ ಯತಿರಾಜು ಅವರು, ಜಿಎಸ್‌ಟಿ ಜಾರಿಯಾದ ನಂತರ ರಾಜ್ಯಗಳ ಆರ್ಥಿಕ ಸ್ವಾಯತ್ತತೆ ಕುಸಿದಿದೆ. ಜನರ ಬದುಕಿನ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲವಾದ ಸರ್ಕಾರ ಈಗ ಜಿಲ್ಲೆಯ ಹೆಸರನ್ನೇ ಬದಲಿಸಿ ರಾಜಕೀಯ ಲಾಭ ಪಡೆಯಲು ಹೊರಟಿದೆ. ತುಮಕೂರಿನ ಅಸ್ತಿತ್ವದ ಮೇಲೆ ದಾಳಿ ಮಾಡುವ ಈ ಪ್ರಸ್ತಾವನೆಯನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು. ಸಿ.ಪಿ.ಐ ಸೈಯದ್ ಮುಜಿಬ್ ಮತನಾಡಿ, ಸ್ಥಳೀಯ ಜನಪ್ರತಿಗಳು ಇಲ್ಲದೆ ಇರುವಾಗ ಹೆಸರು ಬದಲಾವಣೆ ವಿಷಯವನ್ನು ಜನಭೀಪ್ರಾಯ ಪಡೆಯದೆ ಮುಂದಾಗಿರುವದನ್ನು ಒಪ್ಪವುದಕ್ಕೆ ಸಾಧ್ಯವಿಲ್ಲವೆಂದರು.ರಮಾಕುಮಾರಿ ಅವರು ಮಾತನಾಡಿ, ತುಮಕೂರು ಜಿಲ್ಲೆಯ ಸಾಂಸ್ಕೃತಿಕ ವೈಶಿಷ್ಟ್ಯತೆ ಮತ್ತು ಜನರ ಆತ್ಮೀಯತೆಯನ್ನು ಅಳಿಸಿ ‘ಬೆಂಗಳೂರು ಉತ್ತರ’ ಎಂಬ ಹೆಸರಿನಲ್ಲಿ ಜಿಲ್ಲೆಯ ಗುರುತನ್ನೇ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ಜಿಲ್ಲೆಯ ಜನರ ಭಾವನೆಗಳಿಗೆ ಮಾಡಿದ ಅವಮಾನ ಎಂದು ಖಂಡಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ದೊರೈರಾಜು ಅವರು, ರೈತರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾದ ಸರ್ಕಾರಗಳು ಹೆಸರು ಬದಲಾವಣೆಯ ರಾಜಕಾರಣ ಮಾಡುತ್ತಿವೆ. ಈ ನಿರ್ಧಾರದಿಂದ ಯಾರಿಗೆ ಲಾಭ? ಜಿಲ್ಲೆಯ ಜನತೆಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಯಾವುದೇ ನಿರ್ಧಾರ ಕೈಗೊಂಡರೆ ಜಿಲ್ಲೆಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಎನ್.ಕೆ.ಸುಬ್ರಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಡಾ. ಅರುಂಧತಿ, ಅರುಣ, ಆಮ್ ಆದ್ಮಿ ಪಕ್ಷದ ಜೈರಾಮ್, ರಾಮಾಂಜಿನಪ್ಪ, ತಾಜುದ್ದೀನ್ ಶರೀಫ್, ಸಿಪಿಐ ಕಂಬೇಗೌಡ, ಕರ್ನಾಟಕ ಪ್ರಾಂತ ರೈತ ಸಂಘದ ಬಿ. ಉಮೇಶ್, ಪಂಡಿತ್ ಜವಾಹರ್, ಸಾಮಾಜಿಕ ಹೋರಾಟಗಾರ ಸುಬ್ರಮಣ್ಯ, ನಟರಾಜಪ್ಪ, ಕಲ್ಪನಾ, ರಾಜ್ಯ ರೈತ ಸಂಘಟನೆಯ ಮುಖಂಡರು, ಮುನ್ನಡೆ ಸಂಘಟನೆಯ ಮುಂಖಡರು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.