ಪಂಪ್ಡ್ ಸ್ಟೋರೇಜ್‌ಗೆ ವಿರೋಧ: 16ಕ್ಕೆ ಪ್ರತಿಭಟನೆ

KannadaprabhaNewsNetwork |  
Published : Apr 04, 2026, 01:30 AM IST
ಪೊಟೊ: 03ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಪರಿಸರಕ್ಕಾಗಿ ನಾವು, ರಾಷ್ಟ್ರಭಕ್ತರ ಬಳಗ ಹಾಗೂ ವಿವಿಧ ಪರಿಸರ ಸಂಘಟನೆಗಳ ಸಹಯೋಗದಲ್ಲಿ ಏ.16 ರಂದು ಶಿವಮೊಗ್ಗ ನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಪರಿಸರಕ್ಕಾಗಿ ನಾವು, ರಾಷ್ಟ್ರಭಕ್ತರ ಬಳಗ ಹಾಗೂ ವಿವಿಧ ಪರಿಸರ ಸಂಘಟನೆಗಳ ಸಹಯೋಗದಲ್ಲಿ ಏ.16 ರಂದು ಶಿವಮೊಗ್ಗ ನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪರಿಸರ ವಿನಾಶದ ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಸಂಬಂಧಿಸಿದಂತೆ ಕೆಪಿಸಿಎಲ್ ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದೆ. ಇಲ್ಲಿಯವರೆಗೆ ಯೋಜನೆ ಕುರಿತು ವಿವರ ಮಾಹಿತಿ ಕೊಡುವಂತೆ ನಾಲ್ಕೈದು ಬಾರಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರೂ ಯಾವುದೇ ಮಾಹಿತಿ ನೀಡುತ್ತಿಲ್ಲ. ಜಿಲ್ಲಾಧಿಕಾರಿಗಳು ಕೆಪಿಸಿಎಲ್‌ಗೆ ವಿವರ ನೀಡುವಂತೆ ಕೇಳಿಕೊಂಡರೂ ಮಾಹಿತಿ ನೀಡುತ್ತಿಲ್ಲ. ಕೆಪಿಸಿಎಲ್‌ನ ಈ ಬೇಜಾಬ್ದಾರಿಯನ್ನು ಮಾನ್ಯ ಉಚ್ಛ ನ್ಯಾಯಾಲಯದ ಗಮನಕ್ಕೆ ತರಲಾಗುವುದು. ಏ.7ರೊಳಗೆ ತಮ್ಮ ಪತ್ರದ ಬಗ್ಗೆ ಉತ್ತರ ಕೊಡಿ ಇಲ್ಲವಾದಲ್ಲಿ ಲಿಖಿತ ರೂಪದಲ್ಲಿ ಉತ್ತರ ಕೊಡಿ ಎಂದು ಜಿಲ್ಲಾಧಿಕಾರಿಗಳು ಕೆಪಿಸಿಎಲ್‌ಗೆ ತಾಕೀತು ಮಾಡಿದ್ದಾರೆ ಎಂದರು.

ಈ ಯೋಜನೆಯಲ್ಲಿ ಯಾವುದೇ ಉನ್ನತ ಸ್ಥರದ ಮಂತ್ರಿಗಳು ಪಾಲುದಾರರಾಗಿ ಲೂಟಿ ಹೊಡೆಯಲು ನಾವು ಬಿಡುವುದಿಲ್ಲ. ಬಂಗಾರಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರೂಜಿಯವರು ಪ್ರಸ್ತಾವಿತ ಯೋಜನೆಯನ್ನು ಉಗ್ರವಾಗಿ ವಿರೋಧಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರವು ಈ ಯೋಜನೆಗೆ ಇನ್ನು ಅನುಮತಿ ನೀಡಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಈ ಮಧ್ಯದಲ್ಲಿ ರಾಜ್ಯ ಸರ್ಕಾರ ಯೋಜನೆಯ ಕುರಿತು ಟೆಂಡರ್ ಕರೆದಿದ್ದಾದರೂ ಏಕೆ ಎಂದು ಕಟುವಾಗಿ ಪ್ರಶ್ನಿಸಿದರು.

ಪರಿಸರ ಹೋರಾಟಗಾರ ಡಾ.ಶ್ರೀಪತಿ ಎಲ್.ಕೆ. ಮಾತನಾಡಿ, 2021ರಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಬಲಿತ ಮರ ಕಡಿತಲೆಗೆ ಸಂಬಂಧಿಸಿದಂತೆ ಅದರ ಮೌಲ್ಯ ಅಂದಾಜು ಮಾಡಲು ವಿಶೇಷ ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿ ವರದಿ ಪ್ರಕಾರ ಒಂದು ಬಲಿತ ಮರಕ್ಕೆ ಒಂದು ವರ್ಷಕ್ಕೆ 74,500 ರು. ಮೌಲ್ಯ ಎಂದು ಅಂದಾಜಿಸಿತ್ತು. 2023ರಲ್ಲಿ ಸಮಿತಿಯು ಮರದ ಮೌಲ್ಯವನ್ನು ಒಂದು ವರ್ಷಕ್ಕೆ 1 ಕೋಟಿ ರುಪಾಯಿ ಎಂದು ನಿಗದಿ ಮಾಡಿತ್ತು. ಒಂದು ಮರ 100-600 ವರ್ಷಗಳವರೆಗೆ ಬದುಕುತ್ತದೆ. ಇದರ ಅನ್ವಯ ಪ್ರಸ್ತುತ ಯೋಜನೆಯಲ್ಲಿ ಧರೆಗುರುಳುವ ಮರವೊಂದಕ್ಕೆ 100 ವರ್ಷ ಆಯುಸ್ಸು ಎಂದು ಪರಿಗಣಿಸಿದರೂ ಈ ಯೋಜನೆಯಲ್ಲಿ ಕಡಿತಲೆಯಾಗುವ 16 ಸಾವಿರ ಮರಕ್ಕೆ 11,925 ಕೋಟಿ ರು. ಹಾನಿಯಾಗುತ್ತದೆ ಎಂದು ಪರಿಸರ ವಿನಾಶದ ಗಂಭೀರತೆಯನ್ನು ಬಿಚ್ಚಿಟ್ಟರು.

ಪಶ್ಚಿಮ ಬಂಗಾಳದಲ್ಲಿ ನಿರ್ಮಿತವಾದ ಐದು ಮೇಲ್ಸೇತುವೆ ನಿರ್ಮಾಣಕ್ಕೆ 300 ಮರ ಕಡಿತಲೆ ಮಾಡಿದ್ದು, ಅದರ ಮೌಲ್ಯ 223 ಕೋಟಿ ರು. ಎಂದು ನಿಗಧಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದಾಗುವ ಮರಗಳ ಹಾನಿಯ ಬಗ್ಗೆ ಕೆಪಿಸಿಎಲ್ ಗಮನಿಸಿ, ಕಡಿಮೆ ವೆಚ್ಚದ ಬ್ಯಾಟರಿ ಸ್ಟೋರೇಜ್ ಸ್ಥಾಪನೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಇನ್ನೋರ್ವ ಪರಿಸರ ಹೋರಾಟಗಾರ ಶ್ರೀಕಾಂತ್ ಮಾತನಾಡಿ, ಕೆಪಿಸಿಎಲ್ ತನ್ನ ಬಾಧ್ಯತೆಯನ್ನು ತಪ್ಪಿಸಿಕೊಳ್ಳುತ್ತಿದೆ. ಯೋಜನೆ ಡಿಪಿಆರ್ ಮಾಹಿತಿ ಕೋರಿದರೆ ಕೆಪಿಸಿಎಲ್ ಭದ್ರತೆ ನೆಪವೊಡ್ಡಿ ಕೊಡುತ್ತಿಲ್ಲ. ಇದರಿಂದ ಕೆಪಿಸಿಎಲ್ ಆರ್‌ಟಿಐ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ. ಈ ಹಿಂದಿನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಆಡಳಿತಾವಧಿಯಲ್ಲಿ ಕಾರ್ಗಲ್‌ನಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಯೋಜನೆಯ ವಿರುದ್ಧ ಸುಮಾರು 65 ಸಾವಿರಕ್ಕೂ ಹೆಚ್ಚು ದೂರುಗಳು ಸ್ವೀಕೃತವಾದರೂ ಯೋಜನೆಯ ವಿರುದ್ಧ ಯಾವುದೇ ಅರ್ಜಿಗಳು, ದೂರುಗಳು ಬಂದಿಲ್ಲ ಎಂದು ಗುರುದತ್ತ ಹೆಗಡೆ ಸರ್ಕಾರಕ್ಕೆ ವರದಿ ಸಲ್ಲಿಸುವುದರ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಮುಖಂಡ ಕೆ.ಈ. ಕಾಂತೇಶ್, ಈ.ವಿಶ್ವಾಸ್, ಮೋಹನ್ ಜಾದವ್, ಜನಾರ್ಧನ್ ಪೈ, ಪರಿಸರ ಪ್ರಕಾಶ್, ಹರೀಶ್ ಕಾರ್ಣಿಕ್ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಸಮರ್ಥ್ ಶಾಮನೂರು
ಜನಪರ ಯೋಜನೆ ಜಾರಿಗೆ ತರುವಲ್ಲಿ ಕಾಂಗ್ರೆಸ್‌ ಸರ್ಕಾರ ಯಶಸ್ವಿ: ಡಾ.ಪ್ರಭಾ