ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ವಿರೋಧ

KannadaprabhaNewsNetwork | Published : Jun 18, 2024 12:50 AM

ಸಾರಾಂಶ

ಚಳ್ಳಕೆರೆ ನಗರದ ನೆಹರೂ ವೃತ್ತದಲ್ಲಿ ಸಿಐಟಿಯು ನೇತೃತ್ವದ ತಾಲೂಕು ಅಂಗನವಾಡಿ ಕಾರ್ಯಕತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಾಸಕ ಟಿ.ರಘುಮೂರ್ತಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ರಾಜ್ಯ ಸರ್ಕಾರ ಕಳೆದ ವರ್ಷದಿಂದ ಜಾರಿಗೆ ತಂದಿರುವ ಶಿಕ್ಷಣ ನೀತಿಯಿಂದ ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಹಾಜರಾತಿ ಇಲ್ಲದೆ ಅಂಗನವಾಡಿ ಕೇಂದ್ರಗಳು ಮುಚ್ಚುವ ಸ್ಥಿತಿ ಬಂದಿದ್ದು, ಅಂಗನವಾಡಿ ಸಹಾಯಕರು, ಕಾರ್ಯಕರ್ತರ ಬದುಕು ಬೀದಿಗೆ ಬರಲಿದೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಪ್ರಾರಂಭ ನಿರ್ಣಯ ಕೈಬಿಡಬೇಕೆಂದು ಸಿಐಟಿಯು ನೇತೃತ್ವದ ತಾಲೂಕು ಅಂಗನವಾಡಿ ಕಾರ್ಯಕರ್ತರು ಶಾಸಕರಲ್ಲಿ ಮನವಿ ಮಾಡಿದರು.

ನಗರದ ನೆಹರು ವೃತ್ತದಿಂದ ಚಿತ್ರದುರ್ಗ ರಸ್ತೆಯ ಶಾಸಕರ ಭವನದತ್ತ ಮೆರವಣಿಗೆ ಮೂಲಕ ಆಗಮಿಸಿದ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಹೊಸ ಶಿಕ್ಷಣ ನೀತಿಯಿಂದ ಗ್ರಾಮೀಣ ಭಾಗಗಳ ಮುಗ್ದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ದಾಖಲಾತಿಯೇ ಆಧಾರ. ಆದ್ದರಿಂದ ಸರ್ಕಾರ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಶಾಲೆಗಳಲ್ಲಿ ಆರಂಭಿಸುವ ಪ್ರಯತ್ನ ಕೈಬಿಡಬೇಕೆಂದು ಸಿಐಟಿಯುಸಿ ತಾಲೂಕು ಅಧ್ಯಕ್ಷ ಟಿ.ನಿಂಗಣ್ಣ ಒತ್ತಾಯಿಸಿದ್ದಾರೆ.

ಜಿಲ್ಲಾ ಸಂಚಾಲಕ ಟಿ.ತಿಪ್ಪೇಸ್ವಾಮಿ ಮಾಹಿತಿ ನೀಡಿ, ಕಳೆದ ಸುಮಾರು 30 ವರ್ಷಗಳಿಂದ ಅಂಗನವಾಡಿ ಕೇಂದ್ರಗಳ ಬದಲಾವಣೆಗಾಗಿ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಾ ಬಂದಿದೆ. ಅಂಗನವಾಡಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭವಾದರೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗದು ಮತ್ತು ಸಾವಿರಾರು ಅಂಗನವಾಡಿ ಶಿಕ್ಷಕರು ಹಾಗೂ ಸಹಾಯಕಿಯರ ಬದುಕು ಬೀದಿಗೆ ಬರಲಿದೆ ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ರಾಜ್ಯಾದ್ಯಂತ ಸಿಐಟಿಯು ನೇತೃತ್ವದ ಕಾರ್ಮಿಕ ಸಂಘಟನೆ ಅಂಗನವಾಡಿ ನೌಕರರ ಸಂಘದ ಆಶ್ರಯದಲ್ಲಿ ಹೋರಾಟ ನಡೆಸುತ್ತಿದೆ. ತಮ್ಮ ಹೋರಾಟದ ಬಗ್ಗೆ ನನಗೂ ಸಾಕಷ್ಟು ಮಾಹಿತಿ ಇದೆ. ತಮ್ಮ ಮನವಿ ಪುರಸ್ಕರಿಸುವಂತೆ ಪತ್ರದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.

ಈ ವೇಳೆ ಖಜಾಂಚಿ ಎಚ್.ಒ.ನಾಗರಾಜು, ಅಧ್ಯಕ್ಷೆ ಇಂದಿರಮ್ಮ, ಖಜಾಂಚಿ ಜೆ.ಎನ್.ಗಂಗಮ್ಮ, ಪುಟ್ಟಮ್ಮ, ಮಂಜಮ್ಮ, ಗಂಗಮ್ಮ, ಕರಿಬಸಮ್ಮ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.

Share this article