ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ । ಕೂಡಲೇ ಆದೇಶ ಹಿಂಪಡೆಯುವಂತೆ ಒತ್ತಾಯ
ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭಿಸುವ ಸರ್ಕಾರದ ನಿರ್ಧಾರ ವಿರೋಧಿಸಿ, ಕೂಡಲೇ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ವಿಶೇಷ ಎಪಿಎಂಸಿಯಲ್ಲಿನ ತಹಸೀಲ್ ಕಚೇರಿ ಮುಂದೆ ವಿವಿಧಡೆಯಿಂದ ಆಗಮಿಸಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಅಂಗನವಾಡಿ ಕಾರ್ಯಕರ್ತೆರು ರಾಜ್ಯ ಅಂಗನವಾಡಿ ನೌಕರರ ಸಂಘ ಮತ್ತು ಸಿಐಟಿಯು ನೇತೃತ್ವದಲ್ಲಿ ಅನಿರ್ದಿಷ್ಟ ಅವಧಿಯ ಪ್ರತಿಭಟನೆ ಪ್ರಾರಂಭಿಸಿದರು.ಜಿಲ್ಲಾ ಕೇಂದ್ರವನ್ನು ಬಿಟ್ಟು ರಾಜ್ಯ ಸರ್ಕಾರದ ಗಮನ ಸೆಳೆಯಲು ಜಿಲ್ಲಾ ಉಸ್ತುವಾರಿ ಸಚಿವರ ಊರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕ-ಕ ಭಾಗದಲ್ಲಿ ಎಲ್‌ಕೆಜಿ ಆರಂಭಿಸುವ ಆದೇಶ ರದ್ದುಗೊಳಿಸಬೇಕು. ೧೦೦೮ ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ, ಅಲ್ಲಿಯೇ ಈ ತರಗತಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಅಲ್ಲಿಯೇ ಎಲ್ಲ ಸೌಲಭ್ಯ ನೀಡಬೇಕು. ಇದೀಗ ನಾವು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರ ಮನೆಯ ಮುಂದೆ ಪ್ರತಿಭಟನೆ ಆರಂಭಿಸಿದ್ದೇವೆ. ಇಲ್ಲೂ ಕೂಡ ಸಚಿವರೇ ಖುದ್ದು ಸ್ಥಳಕ್ಕೆ ಬಂದು ನಮ್ಮ ಮನವಿ ಸ್ವೀಕರಿಸಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಒತ್ತಾಯಿಸಿದರು.
ಶಿಕ್ಷಣ ಇಲಾಖೆಯಿಂದ ಪ್ರಾರಂಭವಾಗುವ ಎಲ್‌ಕೆಜಿ ಮತ್ತು ಯುಕೆಜಿಗೆ ದಾಖಲಾಗುವ ಮಕ್ಕಳು ಐಸಿಡಿಎಸ್‌ನಲ್ಲಿ ಈಗಾಗಲೇ ದಾಖಲಾಗಿದ್ದಾರೆ. ಇಲಾಖೆಯಲ್ಲಿ ಅನೌಪಚಾರಿಕ ಶಿಕ್ಷಣವನ್ನು ಮತ್ತು ಇಂಗ್ಲಿಷ್ ವರ್ಣಮಾಲೆ ಹಾಗೂ ಪದ ಗುಚ್ಚಗಳನ್ನು ಮಾತ್ರವೇ ಬೋಧಿಸುವುದು ಇದೆ. ಮಕ್ಕಳ ಅಪೌಷ್ಠಿಕತೆಯಡೆಗೆ ಅವರ ಗಮನ ಇರುವುದಿಲ್ಲ. ಅಂಗನವಾಡಿ ಕೇಂದ್ರ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಠಿಕತೆ ಎರಡರ ಬಗ್ಗೆಯೂ ಕಾಳಜಿ ವಹಿಸಲಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಗಿರಿಜಮ್ಮ, ಅಮರಮ್ಮ, ಲಲಿತಮ್ಮ, ಲಕ್ಷ್ಮೀದೇವಿ, ಅನಂತಲಕ್ಷ್ಮೀ, ದುರುಗಮ್ಮ, ಸಿಐಟಿಯುನ ಕೃಷ್ಣಪ್ಪ ನಾಯಕ್, ಮಂಜುನಾಥ್ ಡಗ್ಗಿ, ಚಂದುಸಾಬ್ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರಿದ್ದರು.