ಶಿರಹಟ್ಟಿ: ಫಕೀರೇಶ್ವರರಿಗೆ ಮಾತ್ರ ಅನ್ವಯಿಸುವ ಭಾವೈಕ್ಯತಾ ಹರಿಕಾರ ಎಂಬ ವಿಶೇಷಣ ಪದವನ್ನು ಡಾ. ತೋಂಟದ ಸಿದ್ಧಲಿಂಗ ಶ್ರೀಗಳವರ ೭೫ನೇ ಜಯಂತಿ ದಿನವನ್ನು ಭಾವೈಕ್ಯತಾ ದಿನ ಎಂದು ಆಚರಿಸುತ್ತಿರುವುದನ್ನು ಖಂಡಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸೋಮವಾರ ಪಟ್ಟಣದ ಫಕೀರೇಶ್ವರ ಮಠದಿಂದ ಸದ್ಭಕ್ತರೆಲ್ಲರೂ ಮೆರವಣಿಗೆ ಮೂಲಕ ತಹಸೀಲ್ದಾರ್ ಕಾರ್ಯಾಲಯಕ್ಕೆ ಆಗಮಿಸಿ ಲಿಖಿತ ಮನವಿ ಸಲ್ಲಿಸಿದರು. ಈ ವೇಳೆ ಹಿರಿಯರು ಮಾತನಾಡಿ, ಫೆ. ೨೧ರಂದು ಭಾವೈಕ್ಯತಾ ದಿನ ಎಂದು ಆಚರಣೆ ಮಾಡುತ್ತಿರುವ ಗದುಗಿನ ತೋಟದಾರ್ಯ ಮಠದ ಕಾರ್ಯಕ್ರಮವನ್ನು ಖಂಡಿಸಿದರು.ತೋಂಟದಾರ್ಯ ಮಠದ ಲಿಂ. ತೋಟದ ಸಿದ್ಧಲಿಂಗ ಪೂಜ್ಯರು ಜೀವಿತಾವಧಿಯಲ್ಲಿ ಅನೇಕ ಧಾರ್ಮಿಕ ಸಮಾರಂಭಗಳಲ್ಲಿ ಶಿರಹಟ್ಟಿ ಮಠದ ಪೂಜ್ಯ ಕರ್ತೃಗಳನ್ನು ಭಾವೈಕ್ಯತೆಯ ಹರಿಕಾರೆಂದು ಸಂಬೋಧಿಸಿರುವುದು ಅವರ ಪ್ರವಚನ ಪ್ರಿಯರಾದ ನಮ್ಮ ಕಿವಿಗಳಲ್ಲಿ ಇಂದಿಗೂ ಮಾರ್ದನಿಸುತ್ತಿವೆ. ವಸ್ತುಸ್ಥಿತಿ ಹೀಗಿದ್ದರೂ ಸಹ ಸದ್ಯದ ಗದುಗಿನ ತೋಂಟದಾರ್ಯ ಮಠದ ಪೂಜ್ಯರು ಹಾಗೂ ಆಡಳಿತಗಾರರು ಭಾವೈಕ್ಯತೆಯ ಹರಿಕಾರರೆಂಬ ಪದವನ್ನು ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳವರಿಗೆ ಅನ್ವಯಿಸಿ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿರುವುದು ಲಿಂಗೈಕ್ಯ ಪೂಜ್ಯರ ಭಾವನೆಗಳಿಗೆ ಅಪಚಾರ ಮಾಡಿದಂತೆ ಭಾಸವಾಗುತ್ತಿದೆ ಎಂದು ಹೇಳಿದರು.
ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ೭೫ನೇ ಜಯಂತಿ ಆಚರಿಸುತ್ತಿರುವುದು ಸಂತೋಷ ತಂದಿದೆ. ಆದರೆ ಭಾವೈಕ್ಯತೆಯ ಹರಿಕಾರ ಎಂಬ ವಿಶೇಷಣವನ್ನು ಬಳಸುತ್ತಿರುವುದು ಸರಿಯಲ್ಲ. ಅಲ್ಲದೇ ಇವರ ಜಯಂತಿ ದಿನವನ್ನು ಭಾವೈಕ್ಯತೆಯ ದಿನ ಎಂದು ಪ್ರಕಟಿಸಿರುವುದು ಶಿರಹಟ್ಟಿ ಮಠದ ಭಕ್ತ ವೃಂದಕ್ಕೆ ಅಪಾರ ನೋವುಂಟು ಮಾಡಿದೆ ಎಂದರು.ಶಿರಹಟ್ಟಿ ಮಠದ ಹಿರಿಯ ಶ್ರೀ ಅಪ್ಪಣೆ ಮೇರೆಗೆ ಶ್ರೀಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಗದುಗಿನ ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳಿಗೆ ದೂರವಾಣಿ ಮೂಲಕ ಗಮನಕ್ಕೆ ತಂದಿದ್ದರೂ ಸೂಕ್ತ ಸ್ಪಂದನೆ ಸಿಗದಿರುವುದು ಹಾಗೂ ನಮ್ಮ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಆಗುತ್ತಿಲ್ಲ ಎಂದು ಶ್ರೀಮಠದ ಶ್ರೀಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಭಾವೈಕ್ಯತಾ ಪದ ಬಳಕೆ ಬಿಟ್ಟು ತೋಂಟದ ಸಿದ್ಧಲಿಂಗ ಶ್ರೀಗಳ ೭೫ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ನಮ್ಮ ಯಾವುದೇ ತಕರಾರಿಲ್ಲ ಎಂದ ಭಕ್ತರು, ಶಿರಹಟ್ಟಿ ಜಗದ್ಗುರುಗಳಿಗೆ ಮೀಸಲಿರುವ ಭಾವೈಕ್ಯತೆಯ ಹರಿಕಾರ ಎಂಬ ಪದವನ್ನು ಬಳಸುವುದಿಲ್ಲ ಎಂದು ಒಪ್ಪಿ ಪತ್ರಿಕಾ ಹೇಳಿಕೆ ನೀಡಬೇಕು. ಇದಕ್ಕೆ ಒಪ್ಪದಿದ್ದರೆ ಕರ್ತುೃಗಳ ಸಾಕ್ಷಿಯಾಗಿ ಉಗ್ರವಾಗಿ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದರು.ಅಲ್ಲದೆ ಫೆ. ೨೧ರಂದು ಭಾವೈಕ್ಯತಾ ದಿನ ಕಾರ್ಯಕ್ರಮದ ಆಚರಣೆಗೆ ಶ್ರೀ ಮಠದ ಭಕ್ತರೆಲ್ಲರ ಪಾಲಿಗೆ ಕರಾಳ ದಿನವಾಗಿದ್ದು, ಅಂದು ಮುಂಜಾನೆ ೭ಗಂಟೆಗೆ ಗದುಗಿನಲ್ಲಿ ಬನ್ನಿಕಟ್ಟಿ ಸಮೀಪದಲ್ಲಿರುವ ಶ್ರೀಮಠದ ಶಾಖಾ ಮಠದಲ್ಲಿ ಗದ್ದುಗೆ ಪೂಜೆ ನೆರವೇರಿಸಿ ಮಾಲಾರ್ಪಣೆ ಮಾಡಿ ಬನ್ನಿಕಟ್ಟಿ, ಪಂಚರ ಹೊಂಡ, ಟಾಂಗಾ ಕೂಟ ಮಾರ್ಗವಾಗಿ ಗಾಂಧಿ ವೃತ್ತದ ವರೆಗೆ ಮೋಟಾರ್ ಬೈಕ್ ರ‍್ಯಾಲಿ ಹಾಗೂ ಪಥ ಸಂಚಲನ ನಡೆಸಿ ತೋಂಟದಾರ್ಯ ರಥ ಬೀದಿಯಲ್ಲಿ ಸಾರ್ವಜನಿಕ ಸಭೆ ಆಯೋಜಿಸಿ ನಮಗಾಗಿರುವ ನೋವನ್ನು ಸಾರ್ವಜನಿಕರ ಮತ್ತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ತಹಸೀಲ್ದಾರ್ ಅನಿಲ ಬಡಿಗೇರ ಮನವಿ ಸ್ವೀಕರಿಸಿದರು. ಸಿ.ಸಿ. ನೂರಶೆಟ್ಟರ, ಎನ್.ಆರ್. ಕುಲಕರ್ಣಿ, ನಾಗರಾಜ ಲಕ್ಕುಂಡಿ, ಎಂ.ಕೆ. ಲಮಾಣಿ, ಫಕ್ಕೀರೇಶ ರಟ್ಟಿಹಳ್ಳಿ, ಅಶೋಕ ವರವಿ, ಹೊನ್ನಪ್ಪ ಶಿರಹಟ್ಟಿ, ಪರಮೇಶ ಪರಬ, ಎಂ.ಸಿ. ಹಿರೇಮಠ, ಪುಲಕೇಶ ಸ್ವಾಮಿ, ಬಸವಣ್ಣೆಪ್ಪ ತುಳಿ, ಅಜ್ಜು ಪಾಟೀಲ, ಸಂದೇಶ ಗಾಣಗೇರ, ಅಕ್ಬರಸಾಬ ಯಾದಗೀರಿ, ಬಸಪ್ಪ ನಾಯ್ಕರ, ಬಸವರಾಜ ವಡವಿ, ಸಂತೋಷ ಕುರಿ, ಮಹಾಂತೇಶ ದಶಮನಿ, ಪರಸು ಡೊಂಕಬಳ್ಳಿ ಮುತ್ತು ಬಡಿಗೇರ ಇತರರು ಇದ್ದರು.