ಕಣಸಗಿರಿ ಗ್ರಾಮಸ್ಥರಿಂದ ಹೋರಾಟದ ಎಚ್ಚರಿಕೆ, ಜಿಲ್ಲಾಡಳಿತಕ್ಕೆ ಮನವಿಕನ್ನಡಪ್ರಭ ವಾರ್ತೆ ಕಾರವಾರ
ಸದಾಶಿವಗಡದಿಂದ ಕೇವಲ 2 ಕಿಮೀ ದೂರದಲ್ಲಿರುವ, ಕಾಳಿ ನದಿ ದಡದ ಮೇಲಿರುವ ಕಣಸಗಿರಿ ಗ್ರಾಮವು ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿನ ಸರ್ವೆ ನಂ. 95ರ 10 ಎಕರೆ ಜಮೀನಿನಲ್ಲಿ ಗೋಶಾಲೆ ನಿರ್ಮಾಣವಾಗಲಿ ಎಂಬುದು ಗ್ರಾಮಸ್ಥರ ಆಶಯವಾಗಿತ್ತು. ಆದರೆ, ಇದೇ ಜಾಗದಲ್ಲಿ ಕಸದ ಘಟಕ ಸ್ಥಾಪಿಸಿದರೆ ಅಂತರ್ಜಲ ಕಲುಷಿತವಾಗುವ ಜೊತೆಗೆ ವಾಯುಮಾಲಿನ್ಯ ಉಂಟಾಗಿ, ಸುಮಾರು 300 ಮನೆಗಳಲ್ಲಿ ವಾಸಿಸುತ್ತಿರುವ 1500ಕ್ಕೂ ಹೆಚ್ಚು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಘನತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ ವಸತಿ ಪ್ರದೇಶದಿಂದ ಕನಿಷ್ಠ 1000 ಮೀಟರ್ ದೂರದಲ್ಲಿ ಕಸದ ಸಂಗ್ರಹಣಾ ಸ್ಥಳವಿರಬೇಕು. ಆದರೆ, ಉದ್ದೇಶಿತ ಜಾಗದಿಂದ ಕೇವಲ 100 ಮೀಟರ್ ವ್ಯಾಪ್ತಿಯಲ್ಲೇ ಮನೆಗಳಿರುವುದರಿಂದ ಇದು ಕಾನೂನುಬಾಹಿರವಾಗಿದೆ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಮೀಸಲಿಟ್ಟ ಜಮೀನನ್ನು ಬೇರೆ ಉದ್ದೇಶಕ್ಕೆ ಬಳಸಬಾರದು ಎಂಬ ನ್ಯಾಯಾಲಯದ ತೀರ್ಪುಗಳನ್ನು ಉಲ್ಲೇಖಿಸಿರುವ ಗ್ರಾಮಸ್ಥರು, ತಕ್ಷಣವೇ ಈ ಯೋಜನೆಯನ್ನು ಕೈಬಿಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಂದೀಪ ರಾಣೆ, ಆನಂದ ನಾಯ್ಕ, ಧೀರಜ ಸಾವಂತ, ದೀಪದಾಸ್ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.