ಬ್ಯಾಡಗಿ: ಕಬಡ್ಡಿ ಪಂದ್ಯಾವಳಿಯಲ್ಲಿ ಆಡಲು ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಕ್ರೀಡಾಪಟುಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ಹಾವೇರಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಆದೇಶಿಸಿದ್ದು, ಹಿರಿಯ ಕಬಡ್ಡಿ ಕ್ರೀಡಾಪಟು ಹಾಗೂ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಸ್ವಾಗತಿಸಿದ್ದಾರೆ.
ಇತ್ತೀಚೆಗೆ ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಹಾವೇರಿ ಜಿಪಂ ಮಹಿಳಾ ಕಬಡ್ಡಿ ತಂಡಕ್ಕೆ ಅವಮಾನವಾಗಿತ್ತು. ತಂಡ ಆಹ್ವಾನಿಸಿ, ಕೊನೆ ಗಳಿಗೆಯಲ್ಲಿ ಪಂದ್ಯಾವಳಿಯಿಂದ ಹೊರಹಾಕಲಾಗಿತ್ತು. ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಕಾರ್ಯದರ್ಶಿ ಶ್ರೀಧರ ಕಾಗಿನೆಲೆ ಈ ತಂಡ ಆಡಿಸಿದಂತೆ ಆಯೋಜಕರಿಗೆ ದೂರವಾಣಿ ಕರೆ ಮಾಡಿ ಹೇಳಿದ್ದರು. ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತು ಎಂದು ಹೇಳಿದರು.
ಪ್ರಕರಣದ ಕುರಿತು ಜಿಲ್ಲಾಧಿಕಾರಿ ಸುದೀರ್ಘ ವಿಚಾರಣೆ ನಡೆಸಿದ್ದಾರೆ. ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಬೈಲಾ ವಿರುದ್ಧ ನಡೆದುಕೊಳ್ಳುತ್ತಿದೆ. ಯಾವುದೇ ಕ್ರೀಡಾಪಟುಗಳಿಗೆ ಆಡದಂತೆ ತಾಕೀತು ಮಾಡುವ ಹಕ್ಕು ಸಂಸ್ಥೆಗೆ ಇಲ್ಲ. ರಾಷ್ಟ್ರ ಮಟ್ಟದ ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿಯೂ ಮುಕ್ತ ಅವಕಾಶ ಕಲ್ಪಿಸಬೇಕು. ಒಂದು ವೇಳೆ ಇದಕ್ಕೆ ತಪ್ಪಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಸಂಸ್ಥೆಯ ನೋಂದಣಿ ರದ್ದುಪಡಿಸುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ ಎಂದು ಹೇಳಿದರು.ಹಿರಿಯ ಕಬಡ್ಡಿ ಕ್ರೀಡಾಪಟು ಹಾಗೂ ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಮಹಿಳಾ ತಂಡದ ಕೋಚ್ ಮಂಜುಳಾ ಭಜಂತ್ರಿ (ಎನ್‌ಐಎಸ್), ಹಿರಿಯ ರಾಷ್ಟ್ರೀಯ ನಿರ್ಣಾಯಕ ಮಲ್ಲಿಕಾರ್ಜುನ ಕೋಡಿಹಳ್ಳಿ ಹಾಗೂ ರೈತ ಸಂಘದ ಕಾರ್ಯಕರ್ತರು ಕ್ರೀಡಾಪಟುಗಳೊಂದಿಗೆ ತೆರಳಿ ಹಾವೇರಿ ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರಿಗೆ ಲಿಖಿತ ದೂರು ಸಲ್ಲಿಸಿದ್ದರು ಎಂದು ಹೇಳಿದರು.