ಧಾರವಾಡ
ರೈತರಿಗೆ ₹ 12.78 ಲಕ್ಷ ವಿಮಾ ಹಣ ಮತ್ತು ಅದರ ಮೇಲೆ ದೂರು ದಾಖಲಾದ ದಿನದಿಂದ ಶೇ. 8ರಷ್ಟು ಬಡ್ಡಿ ಹಣ ಸಂದಾಯವಾಗುವವರೆಗೆ ಲೆಕ್ಕ ಹಾಕಿ ಕೊಡುವಂತೆ ಆಯೋಗ ಎಸ್‌ಬಿಐ ವಿಮಾ ಕಂಪನಿಗೆ ನಿರ್ದೇಶಿಸಿದೆ.
ಶಿರಸಿಯ ನೀಲಕುಂದ, ತಂಡಾಗುಡಿ ಪ್ರದೇಶದ ಅಡಕೆ ಬೆಳೆಗಾರ ರೈತರು 2017-18ರಲ್ಲಿ ಅಡಕೆ ಬೆಳೆದಿದ್ದರು. ಆ ಬೆಳೆಗೆ ರೈತರು ಕೆನರಾ ಕೋ-ಆಪ್ ರೆಟಿವ್ ಸಂಘದೊಂದಿಗೆ ಎಸ್‌ಬಿಐನ ವಿಮಾ ಕಂಪನಿಗೆ ತಮ್ಮ ಅಡಕೆ ಬೆಳೆಯನ್ನು ಅದೇ ವರ್ಷಕ್ಕೆ ವಿಮೆ ಮಾಡಿಸಿದ್ದರು. ಮಳೆ ನಿಗದಿಗಿಂತ ಜಾಸ್ತಿಯಾಗಿ ಅತಿವೃಷ್ಟಿಯಾದರೆ ಆ ರೈತರು ವಿಮೆ ಪರಿಹಾರ ಪಡೆಯಲು ಅರ್ಹತೆ ಹೊಂದಿದ್ದರು. ಅಂತೆಯೇ, 2017ರ ಜುಲೈ ತಿಂಗಳಲ್ಲಿ ಅತಿ ಹೆಚ್ಚಿನ ಮಳೆಯಾಗಿ ಅಡಕೆ ಬೆಳೆ ನಾಶವಾಗಿ ರೈತರಿಗೆ ಆರ್ಥಿಕ ತೊಂದರೆಯಾಗಿತ್ತು. ವಿಮಾ ಪಾಲಸಿಯ ನಿಯಮದಂತೆ ತಮಗೆ ಬೆಳೆ ಹಾನಿ ಮತ್ತು ಪರಿಹಾರ ಕೊಡಲು ವಿಮಾ ಕಂಪನಿಗೆ ಮನವಿ ಮಾಡಿದ್ದರು. ಆದರೆ, ಕಂಪನಿಯವರು ವಿಮಾ ಹಣ ಅಥವಾ ಪರಿಹಾರ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ನಷ್ಟಕ್ಕೆ ಒಳಗಾದ 473 ರೈತರು ಧಾರವಾಡದ ಜನಾದೇಶ ಗ್ರಾಹಕರ ಸ್ವಯಂ ಸೇವಾ ಸಂಘದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.ದೂರಿನ ಬಗ್ಗೆ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ವಿಚಾರಣೆ ನಡೆಸಿದರು.
ಅಂತಿಮವಾಗಿ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ವಿಮಾ ಕಂಪನಿಯು ಸೇವಾ ನ್ಯೂನತೆ ಎಸಗಿದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಒಟ್ಟು 473 ರೈತರಿಗೆ ₹ 12.78 ಲಕ್ಷ ವಿಮಾ ಹಣ ಮತ್ತು ಅದರ ಮೇಲೆ ದೂರು ದಾಖಲಾದ ದಿನದಿಂದ ಶೇ. 8ರಷ್ಟು ಬಡ್ಡಿ ಹಣ ಸಂದಾಯವಾಗುವವರೆಗೆ ಲೆಕ್ಕ ಹಾಕಿ ಕೊಡುವಂತೆ ಆಯೋಗ ಎಸ್‌ಬಿಐ ವಿಮಾ ಕಂಪನಿಗೆ ನಿರ್ದೇಶಿಸಿದೆ. ಎಲ್ಲ ರೈತರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ ತಲಾ ₹ 2000ದಂತೆ ₹ 9.46 ಲಕ್ಷ ಪರಿಹಾರ ನೀಡುವಂತೆ ಆಯೋಗ ವಿಮಾ ಕಂಪನಿಗೆ ಆದೇಶಿಸಿದೆ. ಜತೆಗೆ ಒಟ್ಟು ₹ 30 ಸಾವಿರ ಹಣವನ್ನು ಪ್ರಕರಣಗಳ ಖರ್ಚು ವೆಚ್ಚ ನೀಡಲು ಸಹ ಆಯೋಗ ವಿಮಾ ಕಂಪನಿಗೆ ತಿಳಿಸಿದೆ.