ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಎಲ್ಲಾ ಸಮಸ್ಯೆಗಳ ಕುರಿತು ಕನ್ನಡಪ್ರಭ ಪತ್ರಿಕೆ 14.05.2026ರಂದು ವಿದ್ಯಾರ್ಥಿಗಳಿಗೆ ತಾಲೂಕು ನಾಮಫಲಕದ ಗೊಂದಲ ಎಂಬ ಶಿರ್ಷಿಕೆಯಡಿ ವಿಶೇಷ ವರದಿಯ ಮೂಲಕ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಇದರಿಂದ ಎಚ್ಚೆತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ ಅವರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸುತ್ತೋಲೆ ಹೊರಡಿಸುವ ಮೂಲಕ ಸಮಸ್ಯೆಗೆ ತೆರೆ ಎಳೆದಿದ್ದಾರೆ.
ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅನುದಾನ/ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಜ್ಞಾಪನ ಪತ್ರದ ಮೂಲಕ ಸುತ್ತೋಲೆ ಹೊರಡಿಸಲಾಗಿದೆ ಹಾಗೂ ಸಿ.ಆರ್.ಪಿ ಅಧಿಕಾರಿಗಳಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.ದೇವರಹಿಪ್ಪರಗಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಒಂದೇ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕಿಗೆ ಸಂಬಂಧಿಸಿದ ತಾಲೂಕು ನಾಮಫಲಕ ಹಾಗೂ ಶಾಲೆಗಳ ಮೊಹರುಗಳಲ್ಲಿ ದೇವರಹಿಪ್ಪರಗಿ ಹಾಗೂ ಸಿಂದಗಿ, ತಾಳಿಕೋಟಿ ಹಾಗೂ ಸಿಂದಗಿ ಎಂದು ನಮೂದಾಗಿದ್ದು ಹಾಗೂ ತಾಲೂಕು ನಾಮಫಲಕಗಳಲ್ಲಿ ಹಲವು ಶಾಲೆಯಲ್ಲಿ ಎರಡು ತಾಲೂಕಿನ ಹೆಸರು ಕಂಡು ಬಂದಿತ್ತು. ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನಾ ಸಮಯದಲ್ಲಿ ಕೂಡ ಬಹಳ ಸಮಸ್ಯೆಯಾಗಿತ್ತು.
ದೇವರಹಿಪ್ಪರಗಿ, ಆಲಮೇಲ, ತಾಳಿಕೋಟೆಯ ಹೊಸ ಕಂದಾಯ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಅನುದಾನಿತ/ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯಗುರುಗಳು ಹೊಸ ತಾಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆರಂಭವಾಗುವವರೆಗೆ ಶಾಲೆಯ ತಾಲೂಕು ನಾಮಫಲಕ ಹಾಗೂ ಶಾಲಾ ಮೊಹರಿನಲ್ಲಿ ಸಂಬಂಧಿಸಿದ ಕಂದಾಯ ತಾಲೂಕಿನ ಹೆಸರಿನ ಜೊತೆಗೆ, ಶೈಕ್ಷಣಿಕ ತಾಲೂಕು ಸಿಂದಗಿ ಎಂದು ನಮೂದಿಸುವುದು ಹಾಗೂ ಶಾಲೆಯ ಮೊಹರಿನಲ್ಲಿ ಕೂಡ ನಿಮ್ಮ ಕಂದಾಯ ತಾಲೂಕಿನ ಜೊತೆಗೆ ಶೈಕ್ಷಣಿಕ ತಾಲೂಕು ಸಿಂದಗಿ ನಮೂದಿಸಲು ಆದೇಶ ಹೊರಡಿಸಿ, ಮುಖ್ಯಶಿಕ್ಷಕರು ಈ ನಿಟ್ಟಿನಲ್ಲಿ ಕೂಡಲೇ ಕಾರ್ಯೋನ್ಮುಖರಾಗುವಂತೆ ತಿಳಿಸಿದ್ದಾರೆ.