- ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ, ನೇತ್ರದಾನ, ದೇಹದಾನ ನೊಂದಣಿ ಶಿಬಿರ
ವಿದ್ಯಾದಾನ, ಅನ್ನದಾನವೇ ಶ್ರೇಷ್ಠವಾಗಿತ್ತು ಆದರೆ ಅದಕ್ಕೂ ಮಿಗಿಲಾದ ದಾನ ಅಂಗಾಂಗ ದಾನ. ಇದರಿಂದ ಇತರೆ ಜೀವಗಳು ಬೆಳಕನ್ನು ಕಾಣುತ್ತವೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.
ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ, ನೇತ್ರದಾನ, ದೇಹದಾನ ನೋಂದಣಿ ಶಿಬಿರ ಹಾಗೂ ಹಿರಿಯ ನಾಗರಿಕರಿಗೆ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ, ಅದು ಶಕ್ತಿ. ಅಜ್ಞಾನದ ಕತ್ತಲೆಯಿಂದ ಬೇಳಕಿನೆಡೆಗೆ ಕೊಂಡೊಯ್ಯುವ ಸುಜ್ಞಾನವೇ ಗುರು ಎಂಬ ಸ್ವಾಮಿ ವಿವೇಕಾನಂದರ ನುಡಿಯಂತೆ ಜೀವವು ಯಾರ ಮಾತನ್ನೂ ಕೇಳುವುದಿಲ್ಲ. ಯಾವ ಸಂಧರ್ಭ ದಲ್ಲಿಯೂ ಸಹ ಅದು ನಮ್ಮಿಂದ ದೂರಾಗಬಹುದು. ಆದರೆ ಜೀವನ ಮಾತ್ರ ನಮ್ಮ ಮಾತನ್ನು ಕೇಳಬಲ್ಲದು, ಹಾಗಾಗಿ ಜೀವನವನ್ನು ನಾಲ್ಕು ಜನರಿಗೆ ಉಪಯೋಗವಾಗುವಂತೆ ರೂಪಿಸಿಕೊಂಡರೆ ಸಾರ್ಥಕವಾಗಬಹುದು. ಅಂತೆಯೇ ಸಾವಿನ ನಂತರದ ಅಂಗಾಂಗ ದಾನವೂ ಜೀವನವನ್ನು ಸಾರ್ಥಕತೆಯತ್ತ ಕೊಂಡೊಯ್ಯುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಕರ್ತ ಅನಿಲ್ ಆನಂದ್ ಅವರು, ರಕ್ತದಾನಕ್ಕೆ ಯುವಕರು ಮುಂದಾಗ ಬೇಕು. ಮನುಷ್ಯನ ವಯಸ್ಸು ರಕ್ತದ ಶುದ್ಧತೆ ಮಾನದಂಡವಾಗಿದ್ದು ವಯೋವೃದ್ದರ ದೇಹದಿಂದ ರಕ್ತ ಪಡೆದರೆ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ, ಅಷ್ಟಕ್ಕೂ ವಯೋವೃದ್ಧರ ದೇಹದಲ್ಲಿ ಅದಾಗಲೇ ರಕ್ತ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿ ತಗುಲಿರುತ್ತವೆ. ಹೀಗಾಗಿ ಅವರಲ್ಲಿ ರಕ್ತದ ಉತ್ಪದನಾ ಸಾಮರ್ಥ್ಯ ಕೂಡ ಕಡಿಮೆಯಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ , ಪೌರಾಯುಕ್ತ ಬಿ.ಸಿ. ಬಸವರಾಜ್, ಕೆಆರ್‌ಎಸ್ ಆಸ್ಪತ್ರೆಯ ಡಾ.ಯೋಗೀಶ್, ಜಿಲ್ಲಾಸ್ಪತ್ರೆ ರಕ್ತ ನಿಧಿ ಕೇಂದ್ರದ ಮುಖ್ಯಸ್ಥರಾದ ಡಾ. ಮುರುಳಿಧರ್, ಜಲಜಾಕ್ಷಿ, ಇ ಎನ್ ಟಿ ತಜ್ಞ ಡಾ.ಶಾಂಭವಿ, ನಗರಸಭಾ ಮಾಜಿ ಸದಸ್ಯ ಮಧು, ಕನ್ನಡ ಸೇನೆ ತಾಲೂಕು ಅಧ್ಯಕ್ಷ ಜಯಪ್ರಕಾಶ್, ಕಾಂಗ್ರೆಸ್ ಮುಖಂಡ ರೂಬಿನ್ ಮೋಸಸ್, ಪತ್ರಕರ್ತರಾದ ರಾಜ್‌ಶೇಖರ್, ಅಕ್ಷಯ್ ಕುಮಾರ್, ಎಸ್‌ಟಿಜೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಭಾರತಿ, ಮಧುಕರ್ ಶೆಟ್ಟಿ ಯುವ ಬಳಗದ ಚೌಡಪ್ಪ ಇದ್ದರು.7 ಕೆಸಿಕೆಎಂ 5