ಬಳ್ಳಾರಿಯಲ್ಲಿ ಸಾವಯವ ಸಂತೆ: ರೈತ–ಗ್ರಾಹಕರ ನಡುವೆ ಸೇತುವೆ

KannadaprabhaNewsNetwork |  
Published : Aug 12, 2026, 02:30 AM IST
ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ಸಾವಯವ ಕೃಷಿಕರು ಬೆಳೆದ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವುದರ ಜತೆಗೆ, ಗ್ರಾಹಕರಿಗೆ ಶುದ್ಧ ಹಾಗೂ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ತಲುಪಿಸುವ ಉದ್ದೇಶದಿಂದ ಬಳ್ಳಾರಿಯಲ್ಲಿ ನಮ್ದು ಸಂಸ್ಥೆಯ ವತಿಯಿಂದ ವಾರದ ಸಾವಯವ ಸಂತೆಗೆ ಶೀಘ್ರವೇ ಚಾಲನೆ ದೊರೆಯಲಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಆರೋಗ್ಯ ಸಮೃದ್ಧಿಗೆ ಯಾವುದೇ ರಾಸಾಯನಿಕವಿಲ್ಲದ ಆಹಾರ ಉತ್ಪನ್ನಗಳನ್ನು ನಿತ್ಯ ಬಳಕೆ ಮಾಡಬೇಕು ಎಂಬುವವರಿಗಿದು ಸಿಹಿಸುದ್ದಿ.

ಸಾವಯವ ಕೃಷಿಕರು ಬೆಳೆದ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವುದರ ಜತೆಗೆ, ಗ್ರಾಹಕರಿಗೆ ಶುದ್ಧ ಹಾಗೂ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ತಲುಪಿಸುವ ಉದ್ದೇಶದಿಂದ ಬಳ್ಳಾರಿಯಲ್ಲಿ ‘ನಮ್ದು’ ಸಂಸ್ಥೆಯ ವತಿಯಿಂದ ವಾರದ ಸಾವಯವ ಸಂತೆಗೆ ಶೀಘ್ರವೇ ಚಾಲನೆ ದೊರೆಯಲಿದೆ.

ನಗರದ ಸರ್ಕಾರಿ ಬಸ್‌ ನಿಲ್ದಾಣದ ಬಳಿಯಿರುವ ಗಾಂಧಿಭವನದಲ್ಲಿ ಆಗಸ್ಟ್ 26ರಿಂದ ಪ್ರತಿ ಬುಧವಾರ ಸಾವಯವ ಸಂತೆ ನಡೆಯಲಿದ್ದು, ಬೆಳಗ್ಗೆ 11.30ರಿಂದ ಸಂಜೆ 6.30ರ ವರೆಗೆ ಗ್ರಾಹಕರಿಗೆ ಮುಕ್ತವಾಗಿರಲಿದೆ.

ಬಳ್ಳಾರಿ, ವಿಜಯನಗರ ಹಾಗೂ ಚಿತ್ರದುರ್ಗ ಜಿಲ್ಲೆಗಳ ಸಾವಯವ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರೊಂದಿಗೆ ಮಂಡ್ಯ ಮತ್ತು ಮೈಸೂರು ಭಾಗದ ಸಾವಯವ ಕೃಷಿಕರೂ ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆ ತರಲಿದ್ದಾರೆ. ಸಾವಯವ ಸಂತೆ ಕೇವಲ ಉತ್ಪನ್ನಗಳ ಮಾರಾಟಕ್ಕೆ ಸೀಮಿತವಾಗದೆ, ರೈತರು ಮತ್ತು ಗ್ರಾಹಕರ ನಡುವಿನ ನೇರ ಸಂಪರ್ಕಕ್ಕೆ ವೇದಿಕೆಯಾಗಲಿದೆ.

200ಕ್ಕೂ ಅಧಿಕ ಉತ್ಪನ್ನ

ವಾರದ ಸಾವಯವ ಸಂತೆಯಲ್ಲಿ ಅಕ್ಕಿ, ವಿವಿಧ ಬಗೆಯ ಬೇಳೆ, ಒಣಮೆಣಸಿನಕಾಯಿ, ತರಕಾರಿಗಳು, ಸಿರಿಧಾನ್ಯಗಳು, ತುಪ್ಪ ಸೇರಿದಂತೆ ಸುಮಾರು 200ಕ್ಕೂ ಅಧಿಕ ಬಗೆಯ ಸಾವಯವ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಸ್ಥಳೀಯವಾಗಿ ಬೆಳೆಯುವ ಉತ್ಪನ್ನಗಳ ಜತೆಗೆ ರಾಜ್ಯದ ವಿವಿಧ ಭಾಗಗಳ ಕೃಷಿಕರು ಬೆಳೆಯುವ ವೈವಿಧ್ಯಮಯ ಸಾವಯವ ಉತ್ಪನ್ನಗಳೂ ಒಂದೇ ಸೂರಿನಡಿ ದೊರೆಯಲಿವೆ.

ಪ್ರಸ್ತುತ ಆಹಾರ ಪದ್ಧತಿಯಲ್ಲಿ ರಾಸಾಯನಿಕ ಬಳಕೆಯ ಬಗ್ಗೆ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾವಯವ ಉತ್ಪನ್ನಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಸಾವಯವ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಖರೀದಿಸಲು ಗ್ರಾಹಕರಿಗೆ ಸೂಕ್ತ ವೇದಿಕೆಗಳ ಕೊರತೆಯಿದೆ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸಾವಯವ ಸಂತೆ ಮಹತ್ವದ ಹೆಜ್ಜೆಯಾಗಲಿದೆ.

ರಾಜ್ಯಾದ್ಯಂತ ವಿಸ್ತರಣೆ ಗುರಿ

ಹಿರಿಯ ರೈತ ಹೋರಾಟಗಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ಅವರು ‘ನಮ್ದು’ ಸಂಸ್ಥೆಯ ಮೂಲಕ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸಾವಯವ ಸಂತೆಯನ್ನು ಆರಂಭಿಸಿ, ರೈತರಿಗೆ ನೆರವಾಗುತ್ತಿದ್ದಾರೆ. ಸಾವಯವ ಕೃಷಿಕರಿಗೆ ನೇರ ಮಾರುಕಟ್ಟೆ ಕಲ್ಪಿಸುವ ಈ ಪ್ರಯತ್ನವನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಸ್ತರಿಸುವ ಉದ್ದೇಶ ಹೊಂದಿದ್ದು, ಅದರ ಭಾಗವಾಗಿ ಬಳ್ಳಾರಿಯಲ್ಲೂ ಸಂತೆ ಆರಂಭಿಸಲಾಗುತ್ತಿದೆ.

ಕೃಷಿಗೆ ತರಬೇತಿ, ಬೀಜವೂ ಲಭ್ಯ

‘ನಮ್ದು’ ಸಂಸ್ಥೆಯ ಕಾರ್ಯ ಕೇವಲ ವಾರದ ಸಂತೆ ಆಯೋಜನೆಗೆ ಸೀಮಿತವಾಗಿಲ್ಲ. ಸಾವಯವ ಕೃಷಿಯತ್ತ ಆಸಕ್ತಿ ಹೊಂದಿರುವ ರೈತರಿಗೆ ಅಗತ್ಯ ಮಾರ್ಗದರ್ಶನ ಮತ್ತು ತರಬೇತಿ ನೀಡುವ ಕಾರ್ಯವೂ ನಡೆಯುತ್ತಿದೆ. ಬೀಜೋತ್ಪನ್ನಗಳು ಸೇರಿದಂತೆ ವಿವಿಧ ಸಂಪನ್ಮೂಲಗಳನ್ನು ರೈತರಿಗೆ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಸಾವಯವ ಕೃಷಿಯ ವಿಸ್ತರಣೆಗೆ ಈ ಪ್ರಯತ್ನ ಪೂರಕವಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಸಿರಿಧಾನ್ಯ, ಬೇಳೆ, ತರಕಾರಿ ಸೇರಿದಂತೆ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯಲು ರೈತರನ್ನು ಪ್ರೋತ್ಸಾಹಿಸುವ ಮೂಲಕ ಆರೋಗ್ಯಕರ ಆಹಾರ ಪದ್ಧತಿ ಮತ್ತು ಸುಸ್ಥಿರ ಕೃಷಿಗೆ ದಾರಿ ಮಾಡಿಕೊಡಬಹುದಾಗಿದೆ.

ಸಾವಯವ ಕೃಷಿಕರಿಗೆ ಮಾರುಕಟ್ಟೆ, ಗ್ರಾಹಕರಿಗೆ ಗುಣಮಟ್ಟದ ಆಹಾರ, ಕೃಷಿ ಆಸಕ್ತರಿಗೆ ಮಾರ್ಗದರ್ಶನ. ಈ ಮೂರು ಉದ್ದೇಶಗಳನ್ನು ಒಟ್ಟುಗೂಡಿಸಿಕೊಂಡು ಬಳ್ಳಾರಿಯಲ್ಲಿ ಆರಂಭವಾಗಲಿರುವ ಸಾವಯವ ಸಂತೆ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆಯುವ ನಿರೀಕ್ಷೆ ಮೂಡಿಸಿದೆ.

ಸಾವಯವ ಉತ್ಪನ್ನಗಳನ್ನು ಜನರಿಗೆ ತಲುಪಿಸಲು "ನಮ್ದು " ಸಂಸ್ಥೆ ನಿರ್ಧರಿಸಿ ವಾರದ ಸಂತೆ ಮಾಡಲು ನಿರ್ಧರಿಸಿದೆ. ಕೃಷಿಕರಿಗೆ ಬೇಕಾದ ಸಹಾಯ ಮಾಡಲಾಗುವುದು. ಬಳ್ಳಾರಿ ಜನರಿಗೆ ಗುಣಮಟ್ಟದ ಆಹಾರ ಉತ್ಪನ್ನ ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದು ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರ ಪಿ. ಗಾದೆಪ್ಪ ಹೇಳಿದರು.ಮೇಯರ್ ಗಾದೆಪ್ಪನವರ ಸಹಕಾರದಿಂದ ಸಾವಯವ ಕೃಷಿಕರ ಅನುಕೂಲಕ್ಕಾಗಿ ವಾರದಸಂತೆಯನ್ನು ಆ. 26ರಂದು ಶುರು ಮಾಡಲು ನಿರ್ಧರಿಸಲಾಗಿದೆ. ಇಲ್ಲಿ ರೈತರಿಗೆ ಸಾವಯವ ಕುರಿತು ಮಾಹಿತಿ, ತರಬೇತಿ ಸೇರಿದಂತೆ ಸಮಗ್ರ ಮಾಹಿತಿ ನೀಡಲಾಗುವುದು. ಸಾವಯವ ಕೃಷಿಯ ಪ್ರಮಾಣ ಹೆಚ್ಚಿಸುವ ಮಹತ್ವದ ನಿರ್ಧಾರವಿದು ಎಂದು ಬಳ್ಳಾರಿಯ ಸಾವಯವ ಕೃಷಿಕ ಈರಪ್ಪಯ್ಯ, ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲುವೆಗಳಿಗೆ 90 ದಿನಗಳ ಕಾಲ ನೀರು: ತಂಗಡಗಿ
ನಾಗೇಂದ್ರ ಯಾಕೆ ರಾಜೀನಾಮೆ ಕೊಡಬೇಕು: ತಂಗಡಗಿ