ಅಕ್ರಮಗಳ ವಿರುದ್ಧ ಹೋರಾಟದಲ್ಲಿ ಸಂಘಟನೆ ಪಾತ್ರ ಪ್ರಮುಖ

KannadaprabhaNewsNetwork |  
Published : May 12, 2024, 01:20 AM IST
11ಕೆಆರ್ ಎಂಎನ್ 3.ಜೆಪಿಜಿರಾಮನಗರ ತಾಲೂಕಿನ ಬಿಡದಿ ಹೋಬಳಿ ಹೆಜ್ಜಾಲದಲ್ಲಿ ಶನಿವಾರ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಪಿ.ಕೃಷ್ಣೇಗೌಡ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮನಗರ: ರಾಜ್ಯಾದ್ಯಂತ ಅನ್ಯಾಯ, ಅಕ್ರಮಗಳ ವಿರುದ್ಧ ನಿರಂತರ ಹೋರಾಟ ಮಾಡುವ ಮೂಲಕ ನಾಡಿನ ಘನತೆಯನ್ನು ಎತ್ತಿ ಹಿಡಿಯುವ ಕೆಲಸದಲ್ಲಿ ಸಂಘಟನೆಯ ಪದಾಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಿರುವುದು ಸಂತಸ ತಂದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಮನಗರ: ರಾಜ್ಯಾದ್ಯಂತ ಅನ್ಯಾಯ, ಅಕ್ರಮಗಳ ವಿರುದ್ಧ ನಿರಂತರ ಹೋರಾಟ ಮಾಡುವ ಮೂಲಕ ನಾಡಿನ ಘನತೆಯನ್ನು ಎತ್ತಿ ಹಿಡಿಯುವ ಕೆಲಸದಲ್ಲಿ ಸಂಘಟನೆಯ ಪದಾಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಿರುವುದು ಸಂತಸ ತಂದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಬಿಡದಿ ಹೋಬಳಿ ಹೆಜ್ಜಾಲದಲ್ಲಿ ಶನಿವಾರ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ 28 ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿ, ಜಿಲ್ಲೆಗಳಲ್ಲಿ ಕೈಗೊಂಡಿರುವ ಹೋರಾಟಗಳ ಬಗ್ಗೆ ನೀಡಿರುವ ವರದಿಗಳ ಬಗ್ಗೆ ಚರ್ಚೆ ನಡೆದಿದ್ದು, ನನಗೆ ಬಹಳ ತೃಪ್ತಿ ತಂದಿದೆ ಎಂದು ಹೇಳಿದರು.

ಪ್ರಸ್ತುತ ರಾಜ್ಯದ ಅಂಗನವಾಡಿಗಳಲ್ಲಿ ಗುಣಮಟ್ಟದ ಆಹಾರ ವಿತರಣೆ ಮಾಡುವಲ್ಲಿ ಇಲಾಖೆ ವಿಫಲವಾಗಿದ್ದು ಹಣ ದೋಖಾ ನಡೆಯುತ್ತಿದೆ. ಈ ಸಂಬಂಧ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಸಂಘಟನೆ ಮನವಿ ನೀಡಿದ್ದು, ಕೂಡಲೆ ಕ್ರಮ ವಹಿಸದೆ ಇದ್ದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೋರಾಟ ಅನಿವಾರ್ಯವಾಗಲಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ರೈತರ, ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ನೀರಾವರಿ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿಲ್ಲ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೂಲ ಸೌಕರ್ಯಗಳು ಇಂದಿಗೂ ಮರೀಚಿಕೆಯಾಗಿವೆ. ಸರ್ಕಾರದ ಮಂತ್ರಿಗಳು ಜವಾಬ್ದಾರಿ ಕೆಲಸ ನಿರ್ವಹಿಸುವಲ್ಲಿ ವಿಫಲರಾಗಿದ್ದು, ಲಂಚದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಇದನ್ನು ಪ್ರಶ್ನಿಸಿ ಹೋರಾಟ ಮಾಡಲು ಹೋಗುವ ಕನ್ನಡ ಪರ ಸಂಘಟನೆಗಳ ಮೇಲೆ ಭಯದ ವಾತಾವರಣ ನಿರ್ಮಿಸುತ್ತಿದ್ದು. ಒಟ್ಟಾರೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುವ ವಾತಾವರಣವಿದೆ ಎಂದು ಹೇಳಿದರು.

ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಜನತೆಗೆ ಬೇಡವಾದ ವಿಷಯಗಳ ಬಗ್ಗೆ ಅನಗತ್ಯ ಚರ್ಚೆ ನಡೆಯುತ್ತಿವೆ. ಸಮಾಜ ಘಾತುಕ ಶಕ್ತಿಗಳನ್ನು ರಕ್ಷಣೆ ಮಾಡುವ ಹುನ್ನಾರ ಕಣ್ಣ ಮುಂದೆ ನಡೆಯುತ್ತಿದ್ದು, ಅಧಿಕಾರಿಗಳು ರಾಜಕಾರಣಿಗಳ ಕಪಿಮುಷ್ಡಿಯಲ್ಲಿ ಸಿಲುಕಿ ಭಯದಲ್ಲಿ ಕೆಲಸ ಮಾಡಬೇಕಾಗಿದೆ. ಮೂರು ರಾಜಕೀಯ ಪಕ್ಷಗಳಿಂದ ರಾಜ್ಯದ ಜನರಿಗೆ ನ್ಯಾಯ ಸಿಗುತ್ತಿಲ್ಲ. ಚುನಾವಣೆಗಳಲ್ಲಿ ಜನರಿಗೆ ಹೊಸ ಹೊಸ ಟೋಪಿಗಳನ್ನು ಹಾಕುತ್ತಾ ಜಾತಿ, ಧರ್ಮ ಆಧಾರದ ಮೇಲೆ ಜನರನ್ನು ಎತ್ತಿಕಟ್ಟುವ ಮೂಲಕ ಸ್ಥಾರ್ಥಕ್ಕಾಗಿ ರಾಜಕಾರಣ ಮಾಡುತ್ತಾ ತಮ್ಮ ಸಾಮ್ರಾಜ್ಯ ಕಟ್ಟಲು ಹೊರಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡ ಅಪಾಯಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂಘಟನೆಯ ರಾಜ್ಯ ಉಸ್ತುವಾರಿ ಅಧ್ಯಕ್ಷ ಶಿವುಗೌಡ ಮಾತನಾಡಿ, ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಆಯಾಯ ಭಾಗದ ಸಮಸ್ಯೆಗಳ ಬಗ್ಗೆ ಸಂಘಟನೆ ಹೋರಾಟ ಕೈಗೆತ್ತಿಕೊಂಡು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಘಟನೆಯ ಶಾಖೆಗಳನ್ನು ತೆರೆದು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದು, ರೈತ, ಕಾರ್ಮಿಕ, ಶೋಷಿತ ಹಾಗೂ ಕನ್ನಡಪರ ಸಂಘಟನೆಯಾಗಿರುವ ಕರ್ನಾಟಕ ಸ್ವಾಭಿಮಾನಿ ಬಣ ಜವಬ್ದಾರಿಯಿಂದ ಹೋರಾಟ ಮಾಡುವ ಕೆಲಸದಲ್ಲಿ ಎಲ್ಲ ಜಿಲ್ಲೆಯ ಅಧ್ಯಕ್ಷರು, ಪದಾಧಿಕಾರಿಗಳು ಮೂಂಚೂಣಿಯಲ್ಲಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜಸೇವೆ ಕಾರ್ಯವನ್ನು ಪರಿಗಣಿಸಿ ನಿವೃತ್ತ ತಹಸೀಲ್ದಾರ್ ಶಿವಣ್ಣ ಅವರನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಶಿವಕುಮಾರ್‌ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭು, ರಾಜ್ಯ ಉಪಾಧ್ಯಕ್ಷ ಶಿವಾಜಿ, ಉತ್ತರ ಕರ್ನಾಟಕದ ಕಾರ್ಯಾಧ್ಯಕ್ಷ ನಾಗರಾಜ, ಅಧ್ಯಕ್ಷ ಲಕ್ಮಣ, ಬೆಳಗಾವಿ ವಿಭಾಗೀಯ ಅಧ್ಯಕ್ಷ ರಾಜುಶಿರಹಟ್ಟಿ, ದಾವಣಗೆರೆ ಜಿಲ್ಲಾಧ್ಯಕ್ಷೆ ಕವಿತಾ, ವಿಭಾಗೀಯ ಜಿಲ್ಲಾಧ್ಯಕ್ಷೆ ಗೀತಾಪಾಟೀಲ್ ಸೇರಿದಂತೆ 28 ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

ಬಾಕ್ಸ್‌............

ಸಭೆಯಲ್ಲಿ ಕೈಗೊಂಡ ನಿರ್ಣಯಗಳು

-ಗಡಿ ಭಾಗದ ಸರ್ಕಾರಿ ಕನ್ನಡ ಶಾಲೆಗಳಿಗೆ ಹೆಚ್ಚಿನ ಆದ್ಯತೆ ಮತ್ತು ಜಾಗೃತಿ ಶಿಬಿರಗಳನ್ನು ನಡೆಸಬೇಕು.

-ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡಬೇಕು.

-ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ವೈಜ್ಙಾನಿಕ ಬೆಲೆ ನಿಗದಿಪಡಿಸಬೇಕು.

-ರಾಜ್ಯದ ಅಂಗನವಾಡಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಸೂಕ್ತ ತನಿಖೆಗೆ ಒಳಪಡಿಸಬೇಕೆಂಬ ನಿರ್ಣಯಗಳನ್ನು ರಾಜ್ಯಕಾರಿಣಿ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಂಡಿದ್ದು, ನಿರ್ಣಯ ಪತ್ರವನ್ನು ಸರ್ಕಾರಕ್ಕೆ ತಲುಪಿಸಿ ಅನುಷ್ಠಾನಕ್ಕೆ ಒತ್ತಾಯಿಸುವುದು.

ಕೋಟ್ ...........

ರಾಜ್ಯದ ಪ್ರಮುಖ ಜಲಾಶಯ ಹಾಗೂ ಕಾವೇರಿ, ತುಂಗಾ, ಭದ್ರಾ ನದಿ ವಿಷಯಗಳಲ್ಲಿ ನಾವು ನಮ್ಮ ತನವನ್ನು ಕಾಪಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೆ ಧಕ್ಕೆ ಬರಲಿದೆ. ಇದನ್ನು ಅರಿಯದ ರಾಜಕೀಯ ಪಕ್ಷಗಳ ಮುಖಂಡರು ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿನ ಜ್ವಲಂತ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿ, ಅನ್ಯಾಯ, ಅಕ್ರಮ ಹಾಗೂ ಹೊಲಸು ರಾಜಕೀಯ ವ್ಯಕ್ತಿಗಳ ವಿರುದ್ಧ ಹೋರಾಟ ಮಾಡಿ ಅವರನ್ನು ಎಚ್ಚರಿಸುವ ಕೆಲಸ ಕರ್ನಾಟಕ ರಕ್ಣಣಾ ವೇದಿಕೆ ಸ್ವಾಭಿಮಾನಿ ಬಣ ನಿರಂತರವಾಗಿ ಮಾಡುತ್ತಿದೆ.

-ಪಿ.ಕೃಷ್ಣೇಗೌಡ, ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ

11ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ತಾಲೂಕಿನ ಬಿಡದಿ ಹೋಬಳಿ ಹೆಜ್ಜಾಲದಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಉದ್ಘಾಟಿಸಿದರು. ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಶಿವಕುಮಾರ್‌ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭು, ರಾಜ್ಯ ಉಪಾಧ್ಯಕ್ಷ ಶಿವಾಜಿ ಇತರರಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ