ವಿಜಯಪುರ: ಸಂಘಟನೆಗಳು ಅನ್ಯಾಯ, ಅಕ್ರಮಗಳ ವಿರುದ್ಧ ಧ್ವನಿಯೆತ್ತಬೇಕು, ಧ್ವನಿಯಿಲ್ಲದವರಿಗೆ ಧ್ವನಿಯಾಗಬೇಕು ಎಂದು ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿ ಆಯೋಜಿಸಿದ್ದ ಸಂಘಟನೆಯ ಪದಾಧಿಕಾರಿಗಳಿಗೆ ಗುರುತಿನ ಚೀಟಿಗಳ ವಿತರಣೆ ಹಾಗೂ ಸಂಘಟನಾತ್ಮಕ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹೋರಾಟ ಮಾಡುವ ಹಕ್ಕನ್ನು ಕೊಟ್ಟಿದ್ದಾರೆ. ಜೊತೆಗೆ ದೇಶದ ಪ್ರತಿಯೊಬ್ಬ ಪ್ರಜೆಯೂ ಕಡ್ಡಾಯವಾಗಿ ಪಾಲಿಸಬೇಕಾಗಿರುವ ಕರ್ತವ್ಯಗಳನ್ನು ತಿಳಿಸಿದ್ದಾರೆ. ಅಂಬೇಡ್ಕರ್ ಎನ್ನುವುದು ಕೇವಲ ಹೆಸರಲ್ಲ. ನೊಂದವರ ಪಾಲಿಗೆ ಅದೊಂದು ಶಕ್ತಿಯಾಗಿದೆ ಎಂದರು.ಜೆಡಿಎಸ್ ಮುಖಂಡ ರವೀಶ್ ಮಾತನಾಡಿ, ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು, ಸಂಘಟಿತರಾಗಿ ಹೋರಾಟ ಮಾಡಬೇಕು, ಆದರೆ ಹೋರಾಟ ಮಾಡುವಂತಹ ವಿಚಾರಗಳು ಹೇಗಿರಬೇಕೆನ್ನುವುದನ್ನು ನಿರ್ಧರಿಸುವಲ್ಲಿ ತಪ್ಪು ಮಾಡಿದರೆ, ಇಡೀ ಸಂಘಟನೆಗೆ ಕೆಟ್ಟ ಹೆಸರು ಬರುತ್ತದೆ. ನಿಜವಾಗಲೂ ಅನ್ಯಾಯಕ್ಕೆ ಒಳಗಾಗಿರುವವರಿಗೆ ನ್ಯಾಯ ಸಿಕ್ಕುವ ತನಕ ಹೋರಾಟ ಮಾಡಿ, ಸರ್ಕಾರಗಳು ಹಾದಿ ತಪ್ಪಿದಾಗ ಹೋರಾಟ ಮಾಡುವಂತಹ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಡಾ.ಅಂಬೇಡ್ಕರ್ ರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಿ.ಶ್ರೀನಿವಾಸ್ ಮಾತನಾಡಿ, ಸಂಘಟನೆಯೆನ್ನುವುದು ಸಂವಿಧಾನದಡಿ ನಮಗೆ ಸಿಕ್ಕಿರುವ ಒಂದು ಅಸ್ತ್ರ. ಇದನ್ನು ಸರಿಯಾದ ಸಮಯದಲ್ಲಿ, ಸರಿಯಾದ ವಿಚಾರಗಳಿಗೆ ಬಳಕೆ ಮಾಡಬೇಕು. ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು. ನಮ್ಮ ಸಂಘಟನೆ ಕೇವಲ ಹೋರಾಟ ಮಾಡುವುದಷ್ಟೇ ಅಲ್ಲ. ಸಾಮಾಜಿಕ ಕಾರ್ಯಗಳು, ಪರಿಸರ ಸಂರಕ್ಷಣೆಗಾಗಿಯೂ ಕೆಲಸ ಮಾಡುತ್ತದೆ. ನಮ್ಮ ಮೊದಲ ಆದ್ಯತೆ ಶಿಕ್ಷಣವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಭಾನುಚಂದ್ರ, ಕೆ.ಎಂ.ಮಧುಮಹೇಶ್, ರಾಜ್ಯ ಕಾರ್ಯಾಧ್ಯಕ್ಷ ಕೆ.ಎಸ್.ಕೃಷ್ಣಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ರಾಘವ, ರಾಜ್ಯ ಸಹಕಾರ್ಯದರ್ಶಿ ರಾಮಾಂಜಿ, ರಾಜ್ಯ ಜಂಟಿ ಕಾರ್ಯದರ್ಶಿ ಚಿಕ್ಕನರಸಿಂಹಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ಚಂದ್ರು, ರಾಜ್ಯ ಸಂಚಾಲಕರಾದ ನರಸಿಂಹಮೂರ್ತಿ, ಬೊಮ್ಮವಾರ ಮಂಜುನಾಥ್, ಬ್ರಹ್ಮಚಾರಿ, ರಾಜ್ಯ ಖಜಾಂಚಿ ಮುನಿನಾರಾಯಣಸ್ವಾಮಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮುನಿವೆಂಕಟಸ್ವಾಮಿ, ದಲಿತ ಸ್ವಾಭಿಮಾನಿ ಸಮಿತಿಯ ರಾಜ್ಯಾಧ್ಯಕ್ಷ ಎಚ್.ನಾರಾಯಣಸ್ವಾಮಿ, ಹಮೀದ್ ಪಾಷ, ಸುರೇಶ್, ಸಾಧಿಕ್ ಖಾನ್, ಧಣಿಸಂದ್ರ ಸೈಯದ್, ಖಲೀಲ್ ಮುಂತಾದವರು ಹಾಜರಿದ್ದರು.
(ಫೋಟೋ ಕ್ಯಾಪ್ಷನ್)ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿಯ ಪದಾಧಿಕಾರಿಗಳಿಗೆ ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ನೇಮಕಾತಿ ಪತ್ರಗಳನ್ನು ವಿತರಿಸಿದರು. ಯುವ ಘಟಕದ ಅಧ್ಯಕ್ಷ ಭಾನುಚಂದ್ರ, ಕೆ.ಎಂ.ಮಧುಮಹೇಶ್, ರಾಜ್ಯ ಕಾರ್ಯಾಧ್ಯಕ್ಷ ಕೆ.ಎಸ್.ಕೃಷ್ಣಮೂರ್ತಿ ಇತರರಿದ್ದರು.