ಬ್ಯಾಡಗಿ: ಪರಿಶಿಷ್ಟ ಪಂಗಡದ ಹಕ್ಕುಗಳನ್ನು ಸಂಘಟಿತರಾಗಿ ಹೋರಾಟ ಮಾಡಿ ಮರಳಿ ಪಡೆಯುವುದು ಅನಿವಾರ್ಯ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಹಕ್ಕುಗಳ ಸಂರಕ್ಷಣಾ ವೇದಿಕೆಯ ಸಂಚಾಲಕ ಹಾಗೂ ವಕೀಲ ಬಸವರಾಜ ಹಾದಿಮನಿ ಹೇಳಿದರು.
ರಾಜ್ಯದಲ್ಲಿ ನಮ್ಮ ಸಂವಿಧಾನಬದ್ಧವಾಗಿ ಪರಿಶಿಷ್ಟ ಪಂಗಡ(ಎಸ್‌ಟಿ) ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳು ಸಮರ್ಪಕವಾಗಿ ಸಿಗುತ್ತಿಲ್ಲ. ನಮ್ಮ ಹಕ್ಕುಗಳನ್ನು ಬೇರೆ ಸಮುದಾಯವರು ಕಬಳಿಸುತ್ತಿದ್ದಾರೆ. ನಮ್ಮ ಸಮುದಾಯಕ್ಕೆ ಸಿಗಬೇಕಾಗಿದ್ದ ಅನುದಾನ ದುರ್ಬಳಕೆ ಆಗುತ್ತಿದೆ. ಇದಕ್ಕೆ ಹಲವು ನಿದರ್ಶನಗಳು ಕಣ್ಣ ಮುಂದಿದೆ. ಇದಕ್ಕೆ ಕಡಿವಾಣ ಹಾಕಲೇಬೇಕಾದ ಅನಿವಾರ್ಯತೆ ಎಂದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಮುದಾಯದ ಚಿಂತನೆಯುಳ್ಳ ಸಮಾನ ಮನಸ್ಕರ ಸಭೆ ಕರೆದು ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕ ಸಮಾಜದ ಹೋರಾಟ ಮಾಡಲು ಯುವಕರನ್ನು ಸಜ್ಜು ಮಾಡಬೇಕಾಗಿದೆ. ನಾವು ಸುಮ್ಮನಾದರೆ ನಮ್ಮ ಹಕ್ಕುಗಳು ಬೇರೆಯವರ ಪಾಲಾಗುವ ಸಮಯ ದೂರವಿಲ್ಲ. ನಮ್ಮ ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳಿಗೆ ಧಕ್ಕೆಯಾದಾಗ ತಾವು ಪಕ್ಷಾತೀತವಾಗಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ರಾಜ್ಯ ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ದೀವಿಗೆಹಳ್ಳಿ ಮಾತನಾಡಿ, ವಿವಿಧ ಇಲಾಖೆಗಳಲ್ಲಿ ನಮ್ಮ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದು ಅತಿ ಅವಶ್ಯವಿದೆ. ಕಾರಣದಿಂದ ಯುವಕರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಪಡೆಯಲು ಮುಂದೆ ಬರಬೇಕು ಎಂದರು.