ಕನ್ನಡಪ್ರಭ ವಾರ್ತೆ ಶಿರಸಿ
ನದಿ ತಿರುವು ಯೋಜನೆಗೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಹಾಗೂ ಪಕ್ಕದ ಜಿಲ್ಲೆಯ ಸಂಸದರಿಗೆ ಹೇಳುವ ತಾಕತ್ತು ಜಿಲ್ಲೆಯ ಬಿಜೆಪಿ ಸಂಸದರಿಗೆ ಇದೆಯೇ ಎಂದು ಶಾಸಕ ಭೀಮಣ್ಣ ನಾಯ್ಕ ಸವಾಲು ಹಾಕಿದ್ದಾರೆ.ಮಂಗಳವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಹಮ್ಮಿಕೊಂಡ ಹಿಂದುಳಿದ ವರ್ಗಗಳ ಜಾಗೃತಿ, ಸಂವಿಧಾನ ರಕ್ಷಣೆ ಅಭಿಯಾನ, ವಾಯ್ಸ್ ಆಫ್ ಒಬಿಸಿ-100 ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತರಕನ್ನಡ ಜಿಲ್ಲೆಯು ಕೈಗಾ ಅಣುಸ್ಥಾವರ, ಆಣೆಕಟ್ಟು, ಸೀಬರ್ಡ್ ನೌಕಾನೆಲೆ ಸೇರಿದಂತೆ ಅನೇಕ ಬೃಹತ್ ಯೋಜನೆಗಳಿಗೆ ತ್ಯಾಗ ಮಾಡಿದ್ದು, ಕೇಂದ್ರ ಸರ್ಕಾರ ಇನ್ನೂ ಅನೇಕ ಯೋಜನೆಗಳನ್ನು ಹೇರಲು ಹೊರಟಿದ್ದು, ಇದಕ್ಕೆ ನಾವು ಖಂಡಿತ ಅವಕಾಶ ನೀಡುವುದಿಲ್ಲ. ಹಾವೇರಿ ಜಿಲ್ಲೆಯ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಡ್ತಿ-ವರದಾ-ಅಘನಾಶಿನಿ ನದಿ ಜೋಡಣೆ ಪ್ರಸ್ತಾಪ ಮಾಡುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಸಂಸದರಿಗೆ ಈ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಮಳೆಯಾದರೂ ಕೆಲವು ಭಾಗಗಳಲ್ಲಿ ಬೇಸಿಗೆಯಲ್ಲಿ ನೀರಿನ ತುಟಾಗ್ರತೆ ಎದುರಾಗುತ್ತದೆ. ರಾಜ್ಯದಿಂದ 7 ಲಕ್ಷ ಕೋಟಿ ಜಿಎಸ್‌ಟಿ ಹಣ ಕೇಂದ್ರ ಸರ್ಕಾರಕ್ಕೆ ಜಮಾ ಆಗಿದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್‌ಟಿ ಹಣ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಚುನಾವಣಾ ಪೂರ್ವದಲ್ಲಿ ನೀಡಿದ ಆಶ್ವಾಸನೆ ಈಡೇರಿಸಿ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಪಂಚ ಗ್ಯಾರೆಂಟಿಯಾದ ಶಕ್ತಿ ಯೋಜನೆ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ರಾಜ್ಯದ ಜನತೆಗೆ ನೆಮ್ಮದಿಯ ಬದುಕು ನೀಡಿದೆ. ಮಳೆ ಸುರಿಯುತ್ತಿರುವುದರಿಂದ ರಸ್ತೆಗಳ ದುರಸ್ತಿ ಸಾಧ್ಯವಾಗಿಲ್ಲ. ಈಗ ಮಳೆ ನಿಂತಿದ್ದು, ಶೀಘ್ರವಾಗಿ ರಸ್ತೆ ಕಾಮಗಾರಿ ಆರಂಭಿಸುವಂತೆ ಸಂಬಂಧಿಸಿದ ಇಲಾಖೆಯ ಇಂಜೀನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಹಂತ ಹಂತವಾಗಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಮಾಜಿ ಶಾಸಕ ವಿ.ಎಸ್. ಪಾಟೀಲ, ಪ್ರಮುಖರಾದ ನಾಗರಾಜ ನಾರ್ವೇಕರ, ನಟರಾಜ ಹೊಸೂರ ಮತ್ತಿತರರು ಉಪಸ್ಥಿತರಿದ್ದರು.