ಹಿರಿಯೂರು: ನಾನು ಶಾಸಕನಾಗಿದ್ದಾಗಲೆಲ್ಲಾ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ತಾಲೂಕಿನಲ್ಲಿ ತೋಟಗಾರಿಕೆ ಕಾಲೇಜು ಸೇರಿದಂತೆ, ಐಮಂಗಲ, ಜವನಗೊಂಡನಹಳ್ಳಿ, ದೇವರಕೊಟ್ಟ ಹಾಗೂ ಯಲ್ಲದಕೆರೆ ಭಾಗದಲ್ಲಿ ಎಲ್ಲಾ ರೀತಿಯ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣಕ್ಕೆ ಬೇಕಾಗಿರುವ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಟ್ಟಿದ್ದೇನೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರ ವ್ಯಾಸಂಗಕ್ಕೆ ಬೇಕಾದ ಸೌಲಭ್ಯ ಒದಗಿಸುವಲ್ಲಿ ನಾನೆಂದು ಹಿಂದೆ ಸರಿದಿಲ್ಲ ಎಂದ ಅವರು, ಶಿಕ್ಷಣಕ್ಕೆ ಎಷ್ಟು ಶಕ್ತಿಯಿದೆ, ಪ್ರಾಮುಖ್ಯತೆ ಇದೆಯೆಂಬುದರ ಅರಿವಿರುವುದರಿಂದ ನನ್ನ ಅಧಿಕಾರದ ಎಲ್ಲಾ ಸಮಯದಲ್ಲೂ ಸರ್ಕಾರದಿಂದ ಕೆಲವೊಮ್ಮೆ ವೈಯಕ್ತಿಕವಾಗಿ ನೆರವು ನೀಡುತ್ತಾ ಬಂದಿದ್ದೇನೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಶಿಕ್ಷಣಕ್ಕೆ ಸಾವಿರಾರು ಕೋಟಿ ರು. ಹಣವನ್ನು ಖರ್ಚು ಮಾಡುತ್ತಾ ಶಿಕ್ಷಣ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳು ಉದಾಸೀನ ಮಾಡದೇ ಜ್ಞಾನಾರ್ಜನೆಯತ್ತ ಗಮನ ಹರಿಸಬೇಕು ಎಂದರು.ಇದೇ ವೇಳೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ಮೂರು ಸಾವಿರ ಹಾಗೂ ಸಚಿವರು ವೈಯಕ್ತಿಕವಾಗಿ 10 ಸಾವಿರ ನಗದು ನೀಡಿದರು.